ಚಾಮರಾಜನಗರದಲ್ಲಿ ಕಾನೂನು ಕಾಲೇಜು ಆರಂಭ

Team Udayavani, Jun 10, 2019, 3:00 AM IST

ಚಾಮರಾಜನಗರ: ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿದ್ದ ಕಾನೂನು ಕಾಲೇಜು ಪ್ರಸಕ್ತ ಸಾಲಿನಿಂದಲೇ ಆರಂಭವಾಗಲಿದ್ದು, ನಗರದ ಹಿಂದಿನ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆ.

ರಾಜ್ಯ ಸರ್ಕಾರ ಈ ಸಾಲಿನಿಂದಲೇ ಕಾಲೇಜು ಸ್ಥಾಪನೆಗೆ ಒಪ್ಪಿಗೆ ನೀಡಿದೆ. ಪ್ರಸಕ್ತ ಸಾಲಿನಿಂದಲೇ 3- 5 ವರ್ಷದ ಕಾನೂನು ತರಗತಿ ಆರಂಭಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಒಟ್ಟಾರೆ ಕಾಲೇಜು ಸ್ಥಾಪನೆಗೆ 3.14 ಕೋಟಿ ರೂ. ವೆಚ್ಚವಾಗಲಿದೆ.

ಕಾಲೇಜು ಕಟ್ಟಡವನ್ನು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸ್ಥಳೀಯ ಪರಿಶೀಲನಾ ಸಮಿತಿ ಪರಿಶೀಲಿಸಲಿದೆ. ಇದಕ್ಕಾಗಿ ಎಲ್ಲಾ ಅಗತ್ಯ ಮೂಲ ಸೌಕರ್ಯದೊಂದಿಗೆ ಕಟ್ಟಡವನ್ನು ಸಜ್ಜುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಪರಿಷತ್ತು ಕೂಡ ಭೇಟಿ ಕೊಟ್ಟು ಮಾನ್ಯತೆ ನೀಡಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ನಗರದ ರೇಷ್ಮೆ ಇಲಾಖೆ ಕಟ್ಟಡ ಅಂದರೆ ಈ ಹಿಂದೆ ಕೇಂದ್ರೀಯ ವಿದ್ಯಾಲಯ ಇದ್ದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾನೂನು ಕಾಲೇಜಿನ ತರಗತಿ ಆರಂಭವಾಗಲಿದೆ. ಸ್ವಂತ ಕಟ್ಟಡವನ್ನು ಮುಂದೆ ಎಡಬೆಟ್ಟ ಬಳಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಬಳಿ 5 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಈ ಹಿಂದೆ 2017-18 ನೇ ಸಾಲಿನ ಆಯವ್ಯಯದಲ್ಲೇ ಲೆಕ್ಕ ಶೀರ್ಷಿಕೆ 2014-00-800-5-01ರಡಿ ನಗರದಲ್ಲಿ ಸರ್ಕಾರಿ ಕಾನೂನು ಕಾಲೇಜು ಆರಂಭಿಸಲು 1 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. 2018-19ನೇ ಸಾಲಿನ ಆಯವ್ಯಯದಲ್ಲಿ ಅದನ್ನು ಮುಂದುವರಿಸಿ 1 ಕೋಟಿ ರೂ. ಮೀಸಲಿಡಲಾಗಿತ್ತು.

ಚಾಮರಾಜ ನಗರದ ಸುತ್ತಮುತ್ತಲ 20 ಕಿ.ಮೀ. ಅಂತರದಲ್ಲಿ 10 ಸರ್ಕಾರಿ, 1 ಅನುದಾನಿತ, 6 ಅನುದಾನ ರಹಿತ ಪದವಿ ಪೂರ್ವ ಕಾಲೇಜು ಹಾಗೂ 4 ಸರ್ಕಾರಿ, 2 ಅನುದಾನಿತ ಹಾಗೂ 2 ಅನುದಾನ ರಹಿತ ಪದವಿ ಕಾಲೇಜುಗಳಿವೆ.

ಹೀಗಾಗಿ ನಗರದಲ್ಲಿ ಕಾನೂನು ಕಾಲೇಜು ಸ್ಥಾಪನೆಯಾದರೆ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಕಾನೂನು ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಸುತ್ತಮುತ್ತಲ ಕಾಲೇಜುಗಳಿಂದ ಪೂರಕವಾಗಿ 200 ಮಂದಿ ವಿದ್ಯಾರ್ಥಿಗಳು ಕಾನೂನು ವ್ಯಾಸಂಗಕ್ಕೆ ಲಭ್ಯವಾಗಬಹುದು ಎಂಬ ಅಂಶ ಮನವರಿಕೆ ಮಾಡಿಕೊಡಲಾಗಿದ್ದು, ಈ ಮಾನದಂಡದ ಆಧಾರದಲ್ಲಿ ನಗರಕ್ಕೆ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆಗೆ ಒಪ್ಪಿಗೆ ದೊರೆತಿದೆ.

ಸರ್ಕಾರಿ ಕಾನೂನು ಕಾಲೇಜು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತರಗತಿ ನಡೆಸಲು ರೇಷ್ಮೆ ಇಲಾಖೆ ಕಟ್ಟಡದ ಹಿಂದಿನ ಕೇಂದ್ರೀಯ ವಿದ್ಯಾಲಯದ ತರಗತಿಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಈ ಜಾಗದಲ್ಲಿದ್ದ ಕೇಂದ್ರೀಯ ವಿದ್ಯಾಲಯ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಹೀಗಾಗಿ ಖಾಲಿ ಇರುವ ಕಟ್ಟಡದಲ್ಲಿ ಕಾನೂನು ಕಾಲೇಜು ಆರಂಭವಾಗಲಿದೆ.

ಬೋಧಕ, ಸಿಬ್ಬಂದಿ ವರ್ಗ: ಚಾಮರಾಜ ನಗರದಲ್ಲಿ ಸ್ಥಾಪನೆಯಾಗಲಿರುವ ಸರ್ಕಾರಿ ಕಾನೂನು ಕಾಲೇಜಿಗೆ ಪ್ರಾಂಶುಪಾಲರು ಸೇರಿ 10 ಮಂದಿ ಕಾನೂನು ವಿಭಾಗ ಉಪನ್ಯಾಸಕರು, ತಲಾ ಒಬ್ಬರು ದೈಹಿಕ ಶಿಕ್ಷಣ ಬೋಧಕರು, 1ಅನೇಕರು, 1 ಪ್ರಥಮ ದರ್ಜೆ ಸಹಾಯಕರು, 1 ದ್ವಿತೀಯ ದರ್ಜೆ ಸಹಾಯಕರು, 1 ಬೆರಳಚ್ಚುಗಾರರು, 4 ಅಟೆಂಡರ್‌, 2 ಪರಿಚಾರಕರು ಬೇಕಾಗಲಿದ್ದಾರೆ.

ಈ ಬೋಧಕ, ಬೋಧಕೇರತರ ಸಿಬ್ಬಂದಿ ವೇತನ ಹಾಗೂ ಕಾಲೇಜು ನಿರ್ವಹಣೆ ಸೇರಿದಂತೆ ವಾರ್ಷಿಕ 93.52 ಲಕ್ಷ ರೂ. ಅನುದಾನ ಬೇಕಾಗಲಿದೆ. ಇನ್ನು ಕಾಲೇಜು ಸ್ಥಾಪಿಸಲು ಕಟ್ಟಡ, ಪೀಠೊಪಕರಣ, ಗ್ರಂಥಾಲಯದ ಪುಸ್ತಕಗಳ ಖರೀದಿಗೆ 2.20 ಕೋಟಿ ರೂ. ಸೇರಿ ಒಟ್ಟು 3.13 ಲಕ್ಷ ರೂ. ಅನುದಾನ ಅಗತ್ಯವಿದ್ದು ಅದನ್ನು ಒದಗಿಸಲು ಅನುಮೋದನೆ ದೊರೆತಿದೆ.

ಶೈಕ್ಷಣಿಕ ಪ್ರಗತಿಯತ್ತ ಜಿಲ್ಲೆ: ಚಾಮರಾಜನಗರ ಜಿಲ್ಲೆಯಾಗಿ 21 ವರ್ಷ ಕಳೆಯುತ್ತಿದ್ದು, ಶೈಕ್ಷಣಿಕವಾಗಿ ಜಿಲ್ಲೆ ಮುಂದಡಿಯಿಡುತ್ತಿದೆ. ಸರ್ಕಾರಿ, ಪದವಿ ಕಾಲೇಜು, ಡಾ. ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ನರ್ಸಿಂಗ್‌ ತರಬೇತಿ ಕೇಂದ್ರ ಸರ್ಕಾರಿ ಕೃಷಿ ಕಾಲೇಜು ಸ್ಥಾಪನೆಯಾಗಿದೆ. ಇದೀಗ ಸರ್ಕಾರಿ ಕಾನೂನು ಕಾಲೇಜು ಆರಂಭವಾಗುತ್ತಿದ್ದು, ಶೈಕ್ಷಣಿಕವಾಗಿ ಜಿಲ್ಲೆಯ ಪ್ರಗತಿಗೆ ಸಹಾಯಕವಾಗಿದೆ.

ರಾಜ್ಯ ಸರ್ಕಾರ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದು, 1 ಕೋಟಿ ರೂ. ಅನುದಾನ ಲಭ್ಯವಾಗಲಿದೆ. ಆದಷ್ಟು ಶೀಘ್ರ ಕಾನೂನು ಕಾಲೇಜು ಆರಂಭವಾಗಲಿದೆ. ತಾವು ಕೂಡ ಅಗತ್ಯ ನೆರವು ನೀಡಲಿದ್ದು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ವತಿಯಿಂದ ದೊರಕಬಹುದಾದ ಅನುದಾನ ಬಳಸಿಕೊಳ್ಳಲಿದ್ದೇವೆ.
-ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ