ಪೋಡಿನಲ್ಲಿ 30ಕ್ಕೂ ಹೆಚ್ಚು ಜನ ಅಸ್ವಸ್ಥ

Team Udayavani, Nov 15, 2019, 3:03 PM IST

ಹನೂರು: ಕಳೆದ 15 ದಿನಗಳಿಂದ ಪೋಡಿನಲ್ಲಿ ಕಾಣಿಸಿಕೊಂಡಿರುವ ಕಾಯಿಲೆಯಿಂದ 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಅಲ್ಲದೆ, 50ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿರುವ ಘಟನೆ ಕಾಡಂಚಿನ ಉಯ್ಯಲನತ್ತ ಗ್ರಾಮದಲ್ಲಿ ನಡೆದಿದೆ. ಪಿ.ಜಿ.ಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಯ್ಯಲನತ್ತ ಪೋಡಿನಲ್ಲಿ ಗಿರಿಜನರೇ ಹೆಚ್ಚು ವಾಸಿಸುತ್ತಿದ್ದಾರೆ. 100ಕ್ಕೂ ಹೆಚ್ಚು ಕುಟುಂಬಗಳು ಗ್ರಾಮದಲ್ಲಿ ಕಳೆದ 15 ದಿನಗಳಿಂದ ಸುಮಾರು 30ಕ್ಕೂ ಹೆಚ್ಚು ಅಸ್ವಸ್ಥರಾಗಿದ್ದು, ಸೂಕ್ತ ಚಿಕಿತ್ಸೆ ದೊರಕದೆ ಕಂಗಾಲಾಗಿದ್ದಾರೆ.

ಚಿಕೂನ್‌ ಗುನ್ಯಾ ಶಂಕೆ: ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವವರೆಲ್ಲಾ ಮೇಲೆಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಕೆಲವರು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ. ಇನ್ನು ಕೆಲವರು ಮೇಲೆ ಏಳಲಾಗದೇ ತೆವಳಿಕೊಂಡೇ ನಡೆದಾಡಿದರೆ, ಮತ್ತೆ ಕೆಲವರು ಮಲಮೂತ್ರ ವಿಸರ್ಜನೆಗೂ ತೆರಳಲಾಗದೆ ಪರಿತಪಿಸುತ್ತಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿರುವವರಿಗಿಲ್ಲೆ ಕೈ ಕಾಲು ನೋವು, ಮೂಳೆಗಳ ಸಂಧುಗಳ ನೋವುಗಳಿಂದ ಬಳಲುತ್ತಿದ್ದಾರೆ. ಒಟ್ಟಾರೆ ಚಿಕೂನ್‌ ಗುನ್ಯಾ ರೋಗದ ಶಂಕೆ ವ್ಯಕ್ತವಾಗಿದ್ದು, ಗಿರಿಜನರಿಗೆ ಸೂಕ್ತ ಚಿಕಿತ್ಸೆ ದೊರಕದೇ ಪರದಾಡುವಂತಾಗಿದೆ.

ಮಾತ್ರೆ ನೀಡಿ ಕೈ ತೊಳೆದುಕೊಂಡ ವೈದ್ಯರು: 3 ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದ ವೈದ್ಯಾಧಿಕಾರಿಗಳ ತಂಡ ಸೂಕ್ತ ರೀತಿಯಲ್ಲಿ ಆರೋಗ್ಯ ತಪಾಸಣೆ ನಡೆಸದೇ ನೆಪಮಾತ್ರಕ್ಕೆ ಕೇವಲ 2 ಮಾತ್ರೆಗಳನ್ನಷ್ಟೇ ವಿತರಿಸಿ ತೆರಳಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದರೂ ಇಂಜೆಕ್ಷನ್‌ಗಳನ್ನೂ ಸಹ ನೀಡಿಲ್ಲ.

ಮೇಕೆಗಳೂ ಸಹ ಸಾವು: ಇತ್ತ ಗ್ರಾಮಸ್ಥರು ಕಾಯಿಲೆಯಿಂದ ಬಳಲುತ್ತಾ ಮೇಲೆಳಲಾಗದ ಪರಿಸ್ಥಿತಿಯಲ್ಲಿದ್ದು, ಗಾಯದ ಮೇಲೆ ಬರೆ ಎಂಬಂತೆ ಅವರು ತಮ್ಮ ಜೀವನೋಪಾಯಕ್ಕಾಗಿ ಸಾಕುತ್ತಿರುವ ಮೇಕೆಗಳೂ ಸಹ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ 15 ದಿನಗಳಿಂದೀಚೆಗೆ 50ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿವೆ. ಗ್ರಾಮದ ಮಾರೆ ಎಂಬುವವರಿಗೆ ಸೇರಿದ 20, ಚಿಕ್ಕಮಾದೇಗೌಡ ಅವರಿಗೆ ಸೇರಿದ 10, ಮಾದಣ್ಣ ಎಂಬುವವರಿಗೆ ಸೇರಿದ 3, ನಾಗ ಎಂಬುವವರ 2, ಬಸವ ಎಂಬುವವರ 5 ಸೇರಿದಂತೆ ಮೇಕೆಗಳು ಸತ್ತಿವೆ. ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯದ ಹಿತದೃಷ್ಠಿಯಿಂದ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಸಮಾಜದ ಕಟ್ಟಕಡೆಯ ಪ್ರಜೆಗೆ ತಲುಪುತ್ತಿಲ್ಲ ಎಂಬುವುದಕ್ಕೆ ಉಯ್ಯಲನತ್ತ ಗ್ರಾಮದ ನರಳಾಟ ಸ್ಪಷ್ಟ ನಿದರ್ಶನ ವಾಗಿದ್ದು ಇನ್ನಾದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಚಿಕಿತ್ಸೆ ದೊರಕಿಸಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಈ ಬಗ್ಗೆ ಕೂಡಲೇ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.-ನಾರಾಯಣ್‌ ರಾವ್‌, ಜಿ.ಪಂ ಸಿಇಒ

 

-ವಿನೋದ್‌ ಎನ್‌ ಗೌಡ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ