ಪ್ಯಾನೆಲ್‌ ವಕೀಲರು ನೊಂದವರಿಗೆ ನ್ಯಾಯ ಕೊಡಿಸಿ

Team Udayavani, Aug 31, 2019, 3:00 AM IST

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂಮಿ ಒತ್ತುವರಿ ಮಾಡಿಕೊಂಡ ಭೂ ಮಾಲೀಕರ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ಕೊಡಬೇಕೆಂದು ಎಂಬ ಕಾನೂನು ಇದೆ. ಇದರ ಬಗ್ಗೆ ಪ್ಯಾನಲ್‌ ವಕೀಲರು ತಿಳಿದುಕೊಂಡು ಉಚಿತ ಕಾನೂನು ಸಲಹೆ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಿಕೊಡವ ಕೆಲಸ ಮಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜು ಹೇಳಿದರು.

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಶುಕ್ರವಾರ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಅಭಿಯೋಜನಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲಾ ಕಾನೂನು ಸೇವಾ ಸಮಿತಿಗಳಿಗೆ 2019ನೇ ಸಾಲಿನಲ್ಲಿ ಹೊಸದಾಗಿ ನೇಮಕಗೊಂಡ ಪ್ಯಾನಲ್‌ ವಕೀಲರಿಗೆ ನಡೆದ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಹೆಚ್ಚಿನ ಕಾನೂನು ಜ್ಞಾನ ಹೊಂದಿ: ಎಸ್‌ಸಿ, ಎಸ್‌ಟಿಗಳಿಗೆ ವಿಶೇಷವಾಗಿರುವ ಯೋಜನಾ ನಿರಾಶ್ರಿತ ಪತ್ರ ನೀಡಬೇಕಿದೆ. ನೊಂದವರಿಗೆ ಪರಿಹಾರ ಕೊಡಿಸುವಲ್ಲಿ ಪ್ಯಾನಲ್‌ ವಕೀಲರ ಪಾತ್ರ ಪ್ರಮುಖವಾದದ್ದು. ತಹಶೀಲ್ದಾರ್‌ ಕಚೇರಿ ಹಾಗೂ ಕಾರಾಗೃಹ ವಕೀಲರು ಸಂಬಂಧಪಟ್ಟ ಇಲಾಖೆಗಳ ಬಗ್ಗೆ ಹೆಚ್ಚಿನ ಕಾನೂನು ಜ್ಞಾನ ಹೊಂದಬೇಕು ಎಂದರು.

ಉಚಿತ ನ್ಯಾಯ ಕೊಡಿಸಿ: ತಹಶೀಲ್ದಾರ್‌ ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಖಾತೆ ಬದಲಾವಣೆ, ಪೌತಿ ಖಾತೆ, ಕರ್ನಾಟಕ ಭೂ ಸುಧಾರಣೆ ಕಾಯದೆ ಹಾಗೂ ಸಕಾಲ ಯೋಜನೆ ಕಾನೂನು ಇದೆ. ಇದರಡಿಯಲ್ಲಿ ಅರ್ಜಿ ಸಲ್ಲಿಸಿ ತಿಂಗಳು, ವರ್ಷ ಕಳೆದರೂ ಕೂಡ ಅರ್ಜಿ ವಿಲೇವಾರಿಯಾಗದೇ ಇರುವ ಅನೇಕ ಪ್ರಕರಣಗಳಿವೆ ಇದರ ಬಗ್ಗೆ ತಿಳಿದುಕೊಂಡು ಸಾರ್ವಜನರಿಗೆ ಉಚಿತವಾಗಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ನ್ಯಾಯ ಕೊಡಿಸುವ ಕೆಲಸ ಮಾಡಿ: ಪ್ಯಾನಲ್‌ ವಕೀಲರು ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೆಲವರಿಗೆ ಸಣ್ಣಪುಟ್ಟ ಪ್ರಕರಣದಲ್ಲೂ ಜೈಲು ವಾಸ ಅನುಭವಿಸಬೇಕಾಗಿರುತ್ತದೆ. ಅಂತಹವರ ಬಗ್ಗೆ ಘಟನೆ ಕುರಿತು ನೈಜ ಮಾಹಿತಿ ಪಡೆದುಕೊಂಡು ಇತ್ಯರ್ಥ ಪಡಿಸಬೇಕು. ಜೈಲಿನಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಹೊಸಹೊಸ ಕಾನೂನುಗಳನ್ನು ತಿಳಿದುಕೊಳ್ಳಬೇಕು. ಹೆಚ್ಚು ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಆದರ್ಶ ಪ್ರಾಧಿಕಾರವನ್ನಾಗಿ ಮಾಡಬೇಕು ಎಂದರು.

ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ: ವಕೀಲರು ಕಾಯಂ ಅದಾಲತ್‌ ಬಗ್ಗೆ ತಿಳಿದುಕೊಳ್ಳಬೇಕು. ಚಾಮರಾಜನಗರ, ಮೈಸೂರು ಮಂಡ್ಯ, ಹಾಸನ, ಕೊಡಗು ಸೇರಿ ಒಂದು ಕಾಯಂ ಅದಾಲತ್‌ ಮಾಡಲಾಗಿದ್ದು, ಮೈಸೂರಿನಲ್ಲಿ ಪ್ರಾಧಿಕಾರ ಇದೆ. ಆರ್ಥಿಕ ಮಿತಿ 25 ಲಕ್ಷ ರೂ. ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ವಿಮೆ ಕಂಪನಿ, ರೈಲ್ವೆ, ಕೆಎಸ್‌ಆರ್‌ಟಿಸಿ ಬಸ್‌, ಬ್ಯಾಂಕ್‌, ಶಿಕ್ಷಣ ಸಂಸ್ಥೆ ಗ್ರಾಹಕರು ಶುಲ್ಕ ವಿಲ್ಲದೆ ಅರ್ಜಿ ಸಲ್ಲಿಸಿ ಇತ್ಯರ್ಥ ಪಡಿಸಬಹುದು. ಯಾವುದೇ ಅಪೀಲು ಸಲ್ಲಿಸುವಂತಿಲ್ಲ. ಬೆಳೆವಿಮೆಯಲ್ಲಿ ಲೋಪದೋಷ ಇದ್ದರೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವಿನಯ್‌, ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಗಣಪತಿ ಜಿ.ಬಾದಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿಶಾಲಾಕ್ಷಿ, ವಕೀಲರು ಮತ್ತು ವಿಶೇಷ ತರಬೇತುದಾರರಾದ ರಮಾ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಮಂಜು ಹರವೆ, ಸಂಪನ್ಮೂಲ ವ್ಯಕ್ತಿಗಳಾದ ವಕೀಲರಾದ ಡಿ.ಎಂ.ಶ್ರೀಕಂಠಮೂರ್ತಿ, ಜಾವಿದ್‌, ಸಾಧನಾ ಸಂಸ್ಥೆ ಸುರೇಶ್‌ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ