ಪುನರ್ವಸತಿ ಕಾರ್ಯ ಸಮರ್ಪಕವಾಗಿ ನಿರ್ವಹಿಸಿ

Team Udayavani, Aug 13, 2019, 3:00 AM IST

ಚಾಮರಾಜನಗರ: ಪ್ರವಾಹ ಬಾಧಿತ ಗ್ರಾಮಗಳಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಕೃಷಿ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಳ್ಳೇಗಾಲ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳು ಹಾಗೂ ನೆರೆ ಸಂತ್ರಸ್ತರಿಗೆ ತೆರೆದಿರುವ ಪರಿಹಾರ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿದ ಬಳಿಕ ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರವಾಹ ಪರಿಹಾರ ಸಂಬಂಧ ನಡೆದ ಅಧಿಕಾರಿಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರ ರಕ್ಷಣೆಗೆ ಮೊದಲ ಆದ್ಯತೆ ನೀಡಿ: ಪ್ರವಾಹದಿಂದ ನದಿ ಪಾತ್ರ ಗ್ರಾಮಗಳಲ್ಲಿ ತಲೆದೋರಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ತೊಂದರೆಗೆ ಒಳಗಾಗಿರುವ ಜನರ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಯಾವುದೇ ಸಂದರ್ಭ ಎದುರಾದರೂ ಸನ್ನದ್ಧರಾಗಿ ಪರಿಹಾರ ಕಾರ್ಯಾಚರಣೆಗೆ ಗಮನ ನೀಡಬೇಕೆಂದು ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.

ಗುಣಮಟ್ಟದ ಆಹಾರ ವಿತರಿಸಿ: ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಗುಣಮಟ್ಟದ ಆಹಾರ ವಿತರಿಸಬೇಕು. ಊಟ, ಉಪಾಹಾರ ನೀಡುವಲ್ಲಿ ಯಾವುದೇ ದೂರುಗಳು ಬಾರದಂತೆ ಎಚ್ಚರವಹಿಸಬೇಕು. ಹೊದಿಕೆ, ದಿನಬಳಕೆಯ ಅವಶ್ಯ ವಸ್ತುಗಳನ್ನು ಪೂರೈಸಬೇಕು. ಔಷಧೋಪಚಾರ ಇತರೆ ವ್ಯವಸ್ಥೆಯನ್ನು ಒದಗಿಸಬೇಕು ಎಂದರು.

ಕುಡಿಯುವ ನೀರು ಪೂರೈಸಿ: ಪ್ರವಾಹಕ್ಕೆ ಪೀಡಿತ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕಿದೆ. ಜಲಾವೃತಗೊಂಡ ಶಾಲೆಗಳಲ್ಲಿ ಇರುವ ದಾಖಲೆಗಳು ಹಾಳಾಗದಂತೆ ಕ್ರಮ ತೆಗೆದುಕೊಳ್ಳಬೇಕಿದೆ. ಜಾನುವಾರುಗಳ ರಕ್ಷಣೆಯನ್ನು ಮಾಡಬೇಕಿದೆ ಎಂದು ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.

ಸ್ವಚ್ಛತಾ ಕೆಲಸ ನಿರ್ವಹಿಸಿ: ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ನೀರಿನ ಪ್ರಮಾಣ ತಗ್ಗಿದ ಕೂಡಲೇ ಪುನರ್ವಸತಿ, ಪರಿಹಾರ ಕೆಲಸಗಳನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಮುಖ್ಯವಾಗಿ ರೋಗರುಜಿನಗಳು ಹರಡದಂತೆ ಸ್ವಚ್ಛ ತಾ ಕೆಲಸಗಳನ್ನು ನಿರ್ವ ಹಿಸಬೇಕಾಗುತ್ತದೆ. ಜಾನುವಾರುಗಳ ಆರೋಗ್ಯ ಕಾಪಾಡುವುದು ಸಹ ಪ್ರಮುಖ ಕೆಲಸವಾಗಿ ತೆಗೆದುಕೊಳ್ಳಬೇಕಿದೆ ಎಂದರು.

ಜಂಟಿಯಾಗಿ ಸಮೀಕ್ಷೆ ನಡೆಸಿ: ಹಾನಿಗೆ ಒಳಗಾದ ರಸ್ತೆಗಳನ್ನು ಸರಿಪಡಿಸುವುದು, ಕೃಷಿ, ಕಂದಾಯ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಬೆಳೆ ಹಾನಿ ವರದಿ ನೀಡುವುದು ಸೇರಿದಂತೆ ಇತರೆ ಅನೇಕ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು. ಪ್ರಸ್ತುತ ನೀರಿನ ಪ್ರಮಾಣ ಹೆಚ್ಚಳವಿರುವ ಹಿನ್ನಲೆಯಲ್ಲಿ ನದಿ, ಜಲಪಾತ ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ನೋಡಿಕೊಳ್ಳಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.

ನೋಡಲ್‌ ಅಧಿಕಾರಿಗಳ ನೇಮಕ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಪ್ರವಾಹ ಬಾಧಿತ ಪ್ರತಿ ಗ್ರಾಮಕ್ಕೂ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರಿಹಾರ ಕೇಂದ್ರಗಳ ನಿರ್ವಹಣೆಗೆ ಸಹ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಂತ್ರಸ್ತ ಗ್ರಾಮಗಳು ಹಾಗೂ ಜನರ ರಕ್ಷಣೆ, ಆರೋಗ್ಯ, ಪರಿಹಾರ ಕಾರ್ಯಾಚರಣೆಗೆ ಎಲ್ಲಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾ ಕುಮಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧಿಕಾರಿ ಅನಿತಾ, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ