ಪುನೀತ್ ಪ್ರೇರಣೆ: ನೇತ್ರದಾನಕ್ಕೆ 9,500 ನೋಂದಣಿ
Team Udayavani, Jan 16, 2022, 12:23 PM IST
ಚಾಮರಾಜನಗರ: ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ, ಕನ್ನಡದ ಪ್ರಸಿದ್ಧ ಚಲನಚಿತ್ರ ನಟರಾಗಿದ್ದ ಪುನೀತ್‌ರಾಜ್‌ಕುಮಾರ್ ಅವರ ನೇತ್ರದಾನದಿಂದ ಪ್ರೇರಣೆ ಗೊಂಡು ಅವರ ಮರಣಾನಂತರಅವರ ತವರು ಜಿಲ್ಲೆಯಲ್ಲಿ 9,500 ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ಪುನೀತ್ ತಮ್ಮ ಜೀವಿತಾವಧಿಯಲ್ಲಿ ತಮ್ಮ ಕಣ್ಣುಗಳನ್ನು ದಾನ ಮಾಡುವುದಕ್ಕೆ ನೋಂದಾಯಿ ಸಿದ್ದರು. ಅವರ ಮರಣಾನಂತರ ಒಟ್ಟು ನಾಲ್ವರು ಅಂಧರಿಗೆ ದೃಷ್ಟಿ ದೊರೆತಿತ್ತು. ಇದರಿಂದ ಅನೇಕ ಜನರು ಪ್ರೇರಿತರಾದರು. ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್), ಜಿಲ್ಲಾಡಳಿತ ಹಾಗೂ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ನೇತ್ರ ನೋಂದಣಿ ಅಭಿಯಾನವನ್ನು ಆರಂಭಿಸಲಾ ಯಿತು.
ಇದಕ್ಕೆ ಅತ್ಯುತ್ತಮ ಸ್ಪಂದನೆ ದೊರೆತಿದೆ. ಇದುವರೆಗೆ 9,500ಕ್ಕೂ ಹೆಚ್ಚು ಮಂದಿ ತಮ್ಮ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಕಾಳಜಿ: ಈ ನೇತ್ರದಾನದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನವಿದ್ಯಾರ್ಥಿಗಳು, ಅರೆ ವೈದ್ಯಕೀಯ ವಿದ್ಯಾರ್ಥಿಗಳುಹೆಚ್ಚಿನ ಸಂಖ್ಯೆಯಲ್ಲಿ ತೊಡಗಿ ಕೊಂಡಿರುವುದು ವಿಶೇಷ.ಸರ್ಕಾರಿ ಮೆಡಿಕಲ್ ಕಾಲೇಜು ಒಂದರಲ್ಲೇ 850 ಮಂದಿ ತಮ್ಮ ನೇತ್ರದಾನಕ್ಕೆ ನೋಂದಾಯಿಸಿ ಕೊಂಡಿದ್ದಾರೆ. 2021ರ ನವೆಂಬರ್ 25ರಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೋಟರಿ ಸಿಲ್ಕ್ ಸಿಟಿ, ರೋಟರಿ ಸಂಸ್ಥೆ ರೆಡ್‌ಕ್ರಾಸ್ ಸಂಸ್ಥೆಯಿಂದ ನೇತ್ರದಾನ ಅಭಿಯಾನಕ್ಕೆ ನಟ ವಿಜಯ ರಾಘವೇಂದ್ರ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಆ ಶಿಬಿರದಲ್ಲಿ 250 ಮಂದಿ ರೋಟರಿ ಸದಸ್ಯರು, ಸಾರ್ವಜನಿಕರು ನೇತ್ರದಾನ ಮಾಡಿದ್ದಾರೆ.
ಇದಲ್ಲದೇ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ 400 ಮಂದಿ ವಿದ್ಯಾರ್ಥಿನಿಯರುನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಆರೋಗ್ಯ ಕೇಂದ್ರಗಳು ಸೇರಿ, ಸಂಘ ಸಂಸ್ಥೆಗಳಲ್ಲಿ ಸಾವಿರಾರುಜನರು ತಮ್ಮ ಕಣ್ಣುಗಳನ್ನು ದಾನ ಮಾಡಲು ಒಪ್ಪಿ ನೋಂದಣಿ ಮಾಡಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಧನಾನಂತರ ಹಿಂದಿನ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳ ಸಭೆ ನಡೆಸಿ, ಪುನೀತ್ ಸ್ಮರಣಾರ್ಥ ಜಿಲ್ಲೆಯಲ್ಲಿ 46 ಸಾವಿರ ಜನರಿಂದ ನೇತ್ರದಾನ ನೋಂದಣಿ ಮಾಡಿಸಲಾಗುವುದು ಎಂದು ತಿಳಿಸಿದ್ದರು. ಅಲ್ಲದೇಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆ ಇಲ್ಲ. ಹೀಗಾಗಿ ಕಣ್ಣಿನ ಆಸ್ಪತ್ರೆ ನಿರ್ಮಿಸಿ ಅದಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಇಡಲಾಗುವುದು ಎಂದೂ ಸಹ ಪ್ರಕಟಿಸಿದ್ದರು.
ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗ 9500 ನೇತ್ರದಾನ ನೋಂದಣಿ ನಡೆದಿದೆ. ಡಿಸೆಂಬರ್ ಅಂತ್ಯದವರೆಗೆ 9500 ನೋಂದಣಿ ನಡೆದಿದ್ದು, ಬಳಿಕ ಒಮಿಕ್ರಾನ್, ಕೋವಿಡ್‌ಪ್ರಕರಣ ಕಾಣಿಸಿಕೊಂಡಿದ್ದರಿಂದ ನೋಂದಣಿ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ.
ಮೂರನೇ ಅಲೆ ನಂತರ ನೇತ್ರದಾನ ನೋಂದಣಿ ಅಭಿಯಾನ ಮುಂದುವರಿಸಲಾಗುವುದು ಎಂದು ರೆಡ್ ಕ್ರಾಸ್ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರಿಂದ ಪ್ರೇರಣೆಗೊಂಡು ನಾನು ಸಹನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದೇನೆ. ಇದಲ್ಲದೇ ನೇತ್ರದಾನ ನೋಂದಣಿ ಕಾರ್ಯಕ್ರಮವನ್ನು ಸಹ ಆಯೋಜಿಸಿದ್ದೇನೆ. ರೋಟರಿಯಿಂದ ನೇತ್ರದಾನ ಶಿಬಿರವನ್ನು ಆರಂಭಿಸಿ ಯಶಸ್ವಿಯಾಗಿ ಚಾಲನೆ ನೀಡಲಾಗಿದೆ. -ಅಜೇಯ್ ಹೆಗ್ಗವಾಡಿಪುರ
-ಕೆ.ಎಸ್. ಬನಶಂಕರ ಆರಾಧ್ಯ