ಬಸ್‌ ನಿಲ್ದಾಣದ ಕಾಮಗಾರಿ ಶೀಘ್ರ ಪೂರ್ಣ

Team Udayavani, Aug 7, 2019, 3:00 AM IST

ಕೊಳ್ಳೇಗಾಲ: ಪಟ್ಟಣದ ರಸ್ತೆ ಸಾರಿಗೆ ಬಸ್‌ ನಿಲ್ದಾಣದ ಕಾಮಗಾರಿ ನೆಲ ಹಂತ ಮತ್ತು ಮೊದಲನೇ ಹಂತ ಕಾಮಗಾರಿ ಶೀಘ್ರ ಪೂರ್ಣಗೊಳ್ಳುತ್ತಿದೆ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. ಪಟ್ಟಣದಲ್ಲಿ ಸುಮಾರು 22 ಕೋಟಿ ರೂ. ಅಂದಾಜಿನಲ್ಲಿ ರಸ್ತೆ ಸಾರಿಗೆ ವತಿಯಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್‌ ನಿಲ್ದಾಣದ ಕಾಮಗಾರಿಗಳನ್ನು ಖುದ್ದು ಭೇಟಿ ಮಾಡಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊದಲ ಹಂತದ ಕಾಮಗಾರಿ ಪೂರ್ಣ: ರಸ್ತೆ ಸಾರಿಗೆ ಬಸ್‌ ನಿಲ್ದಾಣದ ಕಾಮಗಾರಿ ನೆಲ ಹಂತ ಮತ್ತು ಮೊದಲನೇ ಹಂತ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಮತ್ತೆ ರೆಡು ಅಂತಸ್ತನ್ನು ನಿರ್ಮಾಣ ಮಾಡಬೇಕಾಗಿದೆ. ನೆಲೆ ಮಹಡಿ ಮತ್ತು ಮೊದಲನೆ ಮಹಡಿ ಪೂರ್ಣಗೊಂಡ ಬಳಿಕ ಸಾರ್ವಜನಿಕರ ಸೌಲಭ್ಯಕ್ಕೆ ಬಿಡಬೇಕೆ ಅಥವಾ ಕಟ್ಟಡದ ಪೂರ್ಣ ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟಿಸಬೇಕೆ ಎನ್ನುವುದನ್ನು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಲಂಕಷವಾಗಿ ಚರ್ಚೆ ಮಾಡಿದ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಂದಿನ ಕಾಮಗಾರಿ ಏಳು ತಿಂಗಳೊಳಗೆ ಪೂರ್ಣ: ನಿಲ್ದಾಣದ ಎರಡು ಮತ್ತು 3ನೇ ಅಂತಸ್ತು ಇನ್ನು 7 ತಿಂಗಳ ಒಳಗಾಗಿ ಕಾಮಗಾರಿ ಮುಗಿಯಲಿದೆ. ಉಳಿದ ಹಂತದ ಕಾಮಗಾರಿಗೆ 10 ಕೋಟಿ ಬೇಕಾಗಿದ್ದು, ಶೀಘ್ರದಲ್ಲೇ ಸರ್ಕಾರದ ವತಿಯಿಂದ ಮಂಜೂರಾತಿ ಪಡೆದು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

25 ಕೋಟಿ ರೂ. ಬಿಡುಗಡೆಗೆ ಮನವಿ: ನಗರೋತ್ಥಾನ ಯೋಜನೆಯಡಿಯಲ್ಲಿ 25 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರ 5 ಕೋಟಿ ರೂ. ಮಂಜೂರಾತಿ ನೀಡಿದೆ. ಅದರ ಪೈಕಿ ಯಳಂದೂರಿಗೆ ಒಂದು ಕೋಟಿ ರೂ. ನೀಡಿದ್ದು, 4 ಕೋಟಿ ರೂ. ಕೊಳ್ಳೇಗಾಲ ಕ್ಷೇತ್ರ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಗೆ ಅನುದಾನಕ್ಕೆ ಮನವಿ: ಈಗಾಗಲೇ ರಾಷ್ಟ್ರೀಯ ಹೆದ್ದಾರಿ 209 ನಾಲ್ಕು ಪಥದ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಪರಿಪೂರ್ಣವಾಗದೆ ಇರುವುದರಿಂದ ಕೂಡಲೇ ಪೂರ್ಣಗೊಳಿಸುವ ಸಲುವಾಗಿ 30 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಮನವಿ ಸಲ್ಲಿಸಿ ರಾಷ್ಟ್ರೀಯ ಹೆದ್ದಾರಿಯ ವಾಕಿಂಗ್‌ ಪಾರ್ಕ್‌, ರಸ್ತೆ ಮಧ್ಯೆ ತಡೆಗೋಡೆಗಳಲ್ಲಿ ವಿದ್ಯುತ್‌ ದೀಪಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದೆಂದು ಹೇಳಿದರು.

ಖಾಸಗಿ ಬಸ್‌ ನಿಲ್ದಾಣ: ರಸ್ತೆ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗ ಇರುವ ಅರ್ಧ ಸ್ಥಳವನ್ನು ಖಾಸಗಿ ಬಸ್‌ ನಿಲ್ದಾಣಕ್ಕೆ ನೀಡುವುದಾಗಿ ಹೇಳಿದ್ದು, ಇದುವರೆಗೂ ಖಾಸಗಿ ಬಸ್‌ ನಿಲ್ದಾಣದವರಿಗೆ ನೀಡದೆ ಅತಂತ್ರ ಸ್ಥಿತಿಯಲ್ಲಿದ್ದು, ಕೂಡಲೇ ಸ್ಥಳವನ್ನು ನೀಡಬೇಕೆಂದು ಖಾಸಗಿ ಬಸ್‌ ಮಾಲೀಕರು, ನಿರ್ವಾಹಕರು ಮತ್ತು ಸಂಘದ ಸದಸ್ಯರು ಮನವಿ ಮಾಡುತ್ತಿದ್ದಂತೆ ಎಚ್ಚೆತ್ತ ಶಾಸಕರು ಕೂಡಲೇ ಸ್ಥಳದ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದರು. ನಗರಸಭಾ ಸದಸ್ಯರಾದ ನಾಸೀರ್‌ ಷರೀಫ್, ಜಯಮೇರಿ, ರಾಮಕೃಷ್ಣ, ರಸ್ತೆ ಸಾರಿಗೆ ಎಂಜಿನಿಯರ್‌ ಕಿರಣ್‌, ನಗರಸಭೆಯ ಎಂಜಿನಿಯರ್‌ ನಾಗೇಂದ್ರ, ಮುಖಂಡರಾದ ಸೋಮಣ್ಣ ಉಪ್ಪಾರ್‌, ಜಗದೀಶ್‌, ಇತರರು ಇದ್ದರು.

ಸ್ಥಾನಮಾನ ರದ್ದು – ಸ್ವಾಗತಾರ್ಹ: ಕಳೆದ 72 ವರ್ಷಗಳ ಹಿಂದೆ ಜಮ್ಮುಕಾಶ್ಮೀರಕ್ಕೆ 370ರ ಪ್ರಕಾರ ವಿಶೇಷ ಸ್ಥಾನಮಾನ ನೀಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ರದ್ದು ಮಾಡಿರುವುದು ಸ್ವಾಗತ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. ಪ್ರಧಾನಿ ನರೇಂದ್ರ ಮೋದಿರವರು ಕಾಶ್ಮೀರದ 370ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಿದ್ದನ್ನು ಸಂಪೂರ್ಣ ನಿಷೇಧ ಮಾಡಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆಯಾಗಿದೆ. ಇದಕ್ಕೆ ಪ್ರಧಾನಿ ಬದ್ಧವಾಗಿರಬೇಕು. ಇದರ ಹೆಸರಿನಲ್ಲಿ ರಾಜಕೀಯ ಮಾಡಬಾರದೆಂದು ಹೇಳಿದರು. ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸವಲತ್ತನ್ನು ರದ್ದುಪಡಿಸಲಾಗಿದೆ.

ಇದನ್ನು ಚುನಾವಣಾ ಸಂದರ್ಭದಲ್ಲಿ ಮತ್ತು ಇನ್ನಿತರ ಸಭೆ ಸಮಾರಂಭಗಳಲ್ಲಿ ರಾಜಕೀಯವಾಗಿ ಬಳಕೆ ಮಾಡಿಕೊಂಡು ಪಕ್ಷ ಸಂಘಟನೆ ಮತ್ತು ಇನ್ನಿತರ ಕಾರ್ಯಗಳಿಗೆ ಬಳಕೆ ಮಾಡದೆ ಇರುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ1947 ರಲ್ಲಿ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸವಲತ್ತನ್ನು ಮಾಡಬಾರದೆಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಸೂಚನೆ ನೀಡಿದ್ದರು. ಆದರೆ ಆಗಿನ ಸರ್ಕಾರ ಕಡೆಗಣಿಸಿದ ಪರಿಣಾಮ 72 ವರ್ಷಗಳ ನಂತರ ಕಾಶ್ಮೀರದ ಸ್ಥಾನಮಾನವನ್ನು ರದ್ದುಪಡಿಸಬೇಕಾಯಿತು ಎಂದು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ