ಅಪಪ್ರಚಾರದಿಂದ ಸಿಎಂ ಸ್ಥಾನ ಕೈ ತಪ್ಪಿತು

Team Udayavani, Sep 17, 2019, 3:00 AM IST

ಕೊಳ್ಳೇಗಾಲ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಎಲ್ಲಾ ಸಮಾಜವನ್ನು ಮೇಲೆತ್ತುವ ಸಲುವಾಗಿ ಸಾಮಾಜಿಕ ನ್ಯಾಯ ತಂದುಕೊಟ್ಟು ಮತ್ತೂಮ್ಮೆ ಸಿಎಂ ಆಗುವ ಅವಕಾಶವು ಅಪಪ್ರಚಾರದಿಂದಾಗಿ ಅಧಿಕಾರ ಕೈತಪ್ಪಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಬೀರೇಶ್ವರ ಸಮುದಾಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಐದು ವರ್ಷದ ಅವಧಿಯಲ್ಲಿ ನುಡಿದಂತೆ ಸರ್ಕಾರ ನಡೆಸಿ ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡಿದ್ದೇನೆ. ಆದರೆ ನಾನು ಯಾವ ಧರ್ಮವನ್ನು ವಿರೋಧಿಸಿಲ್ಲ ಮತ್ತು ಯಾವ ಧರ್ಮವನ್ನು ಇಬ್ಭಾಗ ಮಾಡಿಲ್ಲ ಎಂದರು.

ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ: ಎಲ್ಲಾ ಸಮಾಜದವರನ್ನು ಮೇಲೆತ್ತುವ ಸಲುವಾಗಿ ಅನುದಾನ ನೀಡಲಾಗಿದೆ. ಧ್ವನಿ ಇಲ್ಲದ ಸಮಾಜದವರಿಗೆ ಧ್ವನಿ ನೀಡುವುದೇ ಯಾವುದೇ ಸರ್ಕಾರದ ಮುಖ್ಯ ಉದ್ದೇಶ. ಕೆಲವು ಸಮಾಜ ಹಿಂದುಳಿದಿದೆ. ಅವರಿಗೆ ಧ್ವನಿ ಇಲ್ಲದಂತೆ ಆಗಿದ್ದು, ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಜಿಲ್ಲೆಯ ಎಲ್ಲಾ ಸಮುದಾಯಗಳಿಗೆ ಸಾವಿರಾರು ಸಮುದಾಯ ಭ ವನವನ್ನು ನಿರ್ಮಾಣಮಾಡಲು ಅನುದಾನ ನೀಡಿರುವುದಾಗಿ ಹೇಳಿದರು.

ಇಲ್ಲ ಸಲ್ಲದ ಆರೋಪ: ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಸೊಸೈಟಿ ಸಾಲ ಮನ್ನಾ ಸೇರಿದಂತೆ ವಿವಿಧ ಸಾಲಗಳನ್ನು ಮನ್ನಾ ಮಾಡಲಾಯಿತು. ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಂಟೀನ್‌, ವಿದ್ಯಾಸಿರಿ, ಬಿಸಿಯೂಟ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಎಲ್ಲಾ ಸಮಾಜದವರಿಗೆ ನೀಡಲಾಯಿತು. ಆದರೆ ನನ್ನ ಮೇಲೆ ಇಲ್ಲಸಲ್ಲದ ಜಾತಿ ಆರೋಪ ಮತ್ತು ಜಾತಿ ವಿಭಾಗ ಆರೋಪ ಮಾಡಿ, ಅಧಿಕಾರಕ್ಕೆ ಬಂದ ಬಿಎಸ್‌ವೈ ನೇತೃತ್ವದ ಸರ್ಕಾರ ಜನತೆಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ಆರೋಪಿಸಿದರು.

ಸಾರ್ವಜನಿಕರಲ್ಲಿ ಮನವಿ: ರಾಜ್ಯದ ಜನತೆ ಈ ಹಿಂದೆ ಮಾಡಿದ ತಪ್ಪನ್ನು ಮಾಡದೆ ಮುಂದಿನ ದಿನಗಳಲ್ಲಿ ಆಶೀರ್ವದಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ನುಡಿದಂತೆ ನಡೆಯುವುದು ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ದೇಶದ ಸಂಪತ್ತು ಎಲ್ಲಾ ವರ್ಗಕ್ಕೂ ಮೀಸಲು: ನಾಡಿನಲ್ಲಿ ಅನೇಕ ಸುಧಾರಕರು ಆಗಮಿಸಿ ಅನೇಕ ರೀತಿಯ ತತ್ವ ಸಿದ್ಧಾಂತಗಳನ್ನು ನೀಡಿದ್ದು, ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶೋಷಿತ ವರ್ಗ ಸ್ವಾವಲಂಬಿಗಳಾಗಬೇಕು. ಆಗಮಾತ್ರ ದೇಶ ಅಭಿವೃದ್ಧಿ ಸಾಧ್ಯ. ದೇಶದ ಸಂಪತ್ತು ಪ್ರಪಂಚದ ಎಲ್ಲಾ ವರ್ಗದವರಿಗೆ ಹಂಚಿಕೆಯಾಗಬೇಕು. ಸಂಪತ್ತು ಶ್ರೀಮಂತರ ಪಾಲು ಆಗಬಾರದು ಎಂದರು.

ಹಿಂದುಳಿದವರು ಜಾಗೃತರಾಗಿ: ಎಲ್ಲಾ ಸಮುದಾಯದವರು ಜಾಗೃತರಾಗಬೇಕು ಮತ್ತು ರಾಜಕೀಯ ಸ್ಥಾನಮಾನವನ್ನು ಪಡೆದುಕೊಳ್ಳದಿದ್ದರೆ ಹಿಂದುಳಿದ ವರ್ಗಗಳು ಹಿಂದುಳಿದುಕೊಂಡೇ ಇರಬೇಕಾಗುತ್ತದೆ. ಇನ್ನಾದರೂ ಹಿಂದುಳಿದವರು ಜಾಗೃತರಾಗಿ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲೆ ಬರಬೇಕು ಎಂದು ತಿಳಿಸಿದರು.

ಸರ್ಕಾರ ಸಂಪೂರ್ಣ ರಚನೆಯಾಗಿಲ್ಲ: ಬಿಎಸ್‌ವೈ ನೇತೃತ್ವದ ಸರ್ಕಾರ ಸಂಪೂರ್ಣ ರಚನೆಯಾಗಿಲ್ಲ, ಇನ್ನು 16 ಖಾತೆಗಳು ಖಾಲಿ ಇವೆ. ಸಂಪುಟವನ್ನು ಯಾವಾಗ ರಚನೆ ಮಾಡಿ, ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುತ್ತದೋ ಗೊತ್ತಿಲ್ಲ. ಆದರೆ ಸರ್ಕಾರದ ನೇತೃತ್ವ ಹೊಂದಿರುವ ಮುಖ್ಯಮಂತ್ರಿಗಳು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಬೇಕು ಎಂದರು.

ಕೋಟಿ ರೂ. ಅನುದಾನ: ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ನೇತೃತ್ವದಲ್ಲಿ ಬಂದ ಬೀರೇಶ್ವರ ಟ್ರಸ್ಟ್‌ನ ಮನವಿಗೆ ಸ್ಪಂದಿಸಿ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದು, ಸಮುದಾಯ ಭವನ ದೀರ್ಘ‌ಕಾಲ ಬಾಳಿಕೆಗೆ ಬರುವ ಕಟ್ಟಡ ನಿರ್ಮಾಣವಾಗಬೇಕು. ಉಳಿದ ಹಣವನ್ನು ಸಂಬಂಧಿಸಿದ ಸಚಿವರ ಗಮನ ಸೆಳೆದು ಮಂಜೂರು ಮಾಡಿಸಿಕೊಡುವ ಭರವಸೆ ಯನ್ನು ಮುಖಂಡರಿಗೆ ನೀಡಿದರು.

ಮೂಢನಂಬಿಕೆ ಹೋಗಲಾಡಿಸಿದ ಏಕೈಕ ಸಿಎಂ ಸಿದ್ದು: ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ಮಾತನಾಡಿ, ದೇವರಾಜು ಅರಸು ಅವರ ನಂತರ ಸಿದ್ದರಾಮಯ್ಯ ಐದು ವರ್ಷ ಆಡಳಿತ ಪೂರೈಸಿದ ಮುಖ್ಯಮಂತ್ರಿಗಳಾಗಿದ್ದರು. ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲೆಗೆ 12 ಬಾರಿ ಆಗಮಿಸಿ ಮೂಢನಂಬಿಕೆಗಳನ್ನು ಹೋಗಲಾಡಿಸಿದ ಏಕೈಕ ಮುಖ್ಯಮಂತ್ರಿ ಎಂದರು.

ಕಳಂಕ ರಹಿತ ಸಿಎಂ ಸಿದ್ದರಾಮಯ್ಯ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಪ.ಜಾತಿ, ಪರಿಶಿಷ್ಟ ಪಂಗಡಗಳ ಕಾಲೋನಿಗಳಿಗೆ 27 ಸಾವಿರ ಕೋಟಿ ರೂ. ಅನುದಾನ ನೀಡಿದ ಏಕೈಕ ಮುಖ್ಯಮಂತ್ರಿಯಾಗಿದ್ದು, ಐದು ವರ್ಷ ಕಳಂಕರಹಿತ ಆಡಳಿತ ನಡೆಸಿದರು. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ಹಿಂದುಳಿದ ಜಿಲ್ಲೆಯನ್ನು ಮುಂದುವರಿದ ಜಿಲ್ಲೆಯನ್ನಾಗಿ ಮಾಡಿದ್ದಾರೆಂದು ಸಿದ್ದರಾಮಯ್ಯರವರ ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಸಾಮಾಜಿಕ ನ್ಯಾಯ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಾತ್ರ ಈಗಲೂ ಸಿದ್ದರಾಮಯ್ಯರವರೇ ನಮ್ಮ ಮುಖ್ಯಮಂತ್ರಿಗಳು. ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಎಂದು ವರ್ಣನೆ ಮಾಡಿದರು.

ಹನೂರು ಶಾಸಕ ಆರ್‌.ನರೇಂದ್ರ, ಮಾಜಿ ಶಾಸಕರಾದ ಎಸ್‌.ಜಯಣ್ಣ, ಎ.ಆರ್‌.ಕೃಷ್ಣಮೂರ್ತಿ, ಎಸ್‌.ಬಾಲರಾಜು, ಸೋಮಶೇಖರ್‌, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಯೋಗೇಶ್‌, ಮೈಸೂರು ನಗರಸಭಾ ಸದಸ್ಯ ಶಿವಣ್ಣ, ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ನಂಜೇಗೌಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಮಂಜುನಾಥ್‌, ಬೀರೇಶ್ವರ ಸಂಘದ ಅಧ್ಯಕ್ಷ ಶಿವಮಲ್ಲು, ಉಪಾಧ್ಯಕ್ಷ ರಾಜು, ಮುಖಂಡರಾದ ಬಸ್ತೀಪುರ ಮಲ್ಲಿಕ್‌, ನಾಗರಾಜು, ಶಾಂತರಾಜು, ದೊಳ್ಳೇಗೌಡ, ರಾಚೇಗೌಡ, ಪ್ರಕಾಶ್‌, ಶಶಿ, ನಗರಸಭಾ ಸದಸ್ಯರಾದ ಮಂಜುನಾಥ್‌, ರಾಘವೇಂದ್ರ, ಗಂಗಮ್ಮ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ