ನವ ಭಾರತಕ್ಕೆ ಸಹಕಾರ ಸಂಸ್ಥೆಗಳ ಪಾತ್ರ ಮುಖ್ಯ

Team Udayavani, Nov 18, 2019, 3:00 AM IST

ಹನೂರು: ನವ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಚಾಮುಲ್‌ ಅಧ್ಯಕ್ಷ ಗುರುಮಲ್ಲಪ್ಪ ತಿಳಿಸಿದರು.

ಪಟ್ಟಣದ ಚಾಮುಲ್‌ ಉಪಕೇಂದ್ರದಲ್ಲಿ ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್‌ ವತಿಯಿಂದ ನಡೆದ 66ನೇ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, 1904ರಲ್ಲಿ ಪ್ರಾರಂಭವಾದ ಸಹಕಾರ ಸಂಘಗಳು ಇಂದು ದೇಶದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿವೆ. ದೇಶದಲ್ಲಿಯೇ ಗದಗ ಜಿಲ್ಲೆಯಲ್ಲಿ ಸಿದ್ಧರಾಮೇಗೌಡ ಅವರು ಸಹಕಾರ ಸಂಘವನ್ನು ಸ್ಥಾಪಿಸಿದರು.

ಬಳಿಕ ದೇಶದ ವಿವಿಧೆಡೆಗಳಲ್ಲಿ ಪ್ರಾರಂಭವಾಗಿ ಕರ್ನಾಟಕ ರಾಜ್ಯದಲ್ಲಿಯೂ ಉತ್ತಮ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು. ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ಈ ದೇಶದ ಸಹಕಾರ ಕ್ಷೇತ್ರಕ್ಕೆ ನೆಹರು ಕೊಡುಗೆ ಅಪಾರವಿದೆ. ಈ ನಿಟ್ಟಿನಲ್ಲಿ ಅವರ ಜನ್ಮ ದಿನವಾದ ನ.14ರಿಂದ 7 ದಿನಗಳ ಕಾಲ ಸಹಕಾರ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ.

ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದಲ್ಲಿ ಆಯಾ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಗಳ ಪಾತ್ರ ಬಹುಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಸಹಕಾರದಿಂದ ಕಾರ್ಯನಿರ್ವಹಿಸಿ ಸಂಘದ ಸದಸ್ಯರಿಗೆ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ದೊರಕಿಸಿಕೊಟ್ಟು ಸಂಘಗಳನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಮಹಾದೇವಸ್ವಾಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನುಜ, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಶರತ್‌ ಕುಮಾರ್‌, ವಿಸ್ತರಣಾಧಿಕಾರಿಗಳಾದ ಮಂಜುಳಾ, ವೆಂಕಟೇಶ್‌, ಯೋಗೇಶ್‌ ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ