ನಮ್ಮಲ್ಲಿರುವ ಪರೀಕ್ಷಾ ಪದ್ಧತಿ ಅವೈಜ್ಞಾನಿಕ

Team Udayavani, Jun 25, 2018, 6:00 AM IST

ಚಾಮರಾಜನಗರ: ಪುಸ್ತಕ ಮುಚ್ಚಿ ಪರೀಕ್ಷೆ ಬರೆಯಿರಿ ಎಂಬುದು ಅವೈಜ್ಞಾನಿಕ ಪದ್ಧತಿಯಾಗಿದ್ದು, ಪಠ್ಯಪುಸ್ತಕದಲ್ಲಿ ಹುಡುಕಿ ಉತ್ತರ ಬರೆಯುವ ಪರೀಕ್ಷಾ ಪದ್ಧತಿ ಜಾರಿಗೆ ತರಲು ವೈಯಕ್ತಿಕವಾಗಿ ಚಿಂತನೆ ನಡೆಸಿದ್ದೇನೆ. ಶಿಕ್ಷಣ ತಜ್ಞರು, ಅಧಿಕಾರಿಗಳ ಜತೆ ಈ ಬಗ್ಗೆ ಸಮಾಲೋಚನೆ ನಡೆಸುತ್ತೇನೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ತಿಳಿಸಿದ್ದಾರೆ.

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಭಾನುವಾರ ಎಸ್ಸೆಸ್ಸೆಲ್ಸಿ, ಪಿಯುದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಿನ ಶಿಕ್ಷಣ ವ್ಯವಸ್ಥೆ ಶಿಕ್ಷಕ ಕೇಂದ್ರೀಕೃತವಾಗಿದೆಯೇ ಹೊರತು ವಿದ್ಯಾರ್ಥಿ ಕೇಂದ್ರೀಕೃತವಾಗಿಲ್ಲ. ಶಿಕ್ಷಕರಾದವರು ಪಾಠ ಮಾಡಿದ ತಕ್ಷಣ ನೋಟ್ಸ್‌ ಬರೆಸಲು ಹೋಗಬೇಡಿ. ಆ ಪಾಠದ ಬಗ್ಗೆ ಪ್ರಶ್ನೆಗಳನ್ನು ತಯಾರಿಸಿ ಮಕ್ಕಳಿಗೆ ಉತ್ತರಿಸಲು ಹೇಳಿ. ರಾಜ್ಯದಲ್ಲಿ ಪುಸ್ತಕ ತೆರೆದು ಉತ್ತರ ಬರೆಯುವ ಪರೀಕ್ಷಾ ಪದ್ಧತಿ ತರಬೇಕು ಎಂದುಕೊಂಡಿದ್ದೇನೆ. ಪರೀಕ್ಷಾ ಹಾಲ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು, ವಿದ್ಯಾರ್ಥಿಗಳು ಅತ್ತಿತ್ತ ನೋಡಬಾರದು ಎನ್ನುವುದು ಸರಿಯಲ್ಲ. ವಿದ್ಯಾರ್ಥಿಗಳೇನು ಅಪರಾಧಿಗಳೇ? ನಮ್ಮಲ್ಲಿರುವ ಪರೀಕ್ಷಾ ಪದ್ಧತಿ ಅವೈಜ್ಞಾನಿಕ. ಇದರಿಂದ ಶೇ.2ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲ. ಮಗುವಿಗೆ ಉತ್ತರ ಗೊತ್ತಿಲ್ಲದಿದ್ದರೆ ಪಕ್ಕದಲ್ಲಿ ನೋಡಿ ಬರೆಯಲು ಅಥವಾ ಪುಸ್ತಕ ನೋಡಿ ಬರೆಯಲು ಅವಕಾಶ ನೀಡಬೇಕೆಂದು ಪ್ರತಿಪಾದಿಸಿದರು.

ಹಿರಿಯರಾದ ನಾವೆಲ್ಲ ಇಲಾಖಾ ಪರೀಕ್ಷೆಗಳಲ್ಲಿ ಪುಸ್ತಕ ನೋಡಿ ಉತ್ತರ ಬರೆಯಲು ಅವಕಾಶವಿದೆ. ಮಕ್ಕಳು ಪುಸ್ತಕ ನೋಡಿ ಬರೆಯುವಂತಿಲ್ಲ. ಇದೆಂಥಾ ವ್ಯವಸ್ಥೆ?. ಪುಸ್ತಕ ನೋಡಿ ಬರೆಯುವ ಮಗು ತಾನಾಗೇ ಕಲಿಯುತ್ತದೆ. ನಂತರ ಪುಸ್ತಕ ನೋಡದೆಯೇ ಬರೆಯುವುದನ್ನು ಕಲಿಯುತ್ತದೆ. ಸಂವಹನ ಸಾಮರ್ಥ್ಯ ತಾನಾಗೇ ಬರುತ್ತದೆ. ಹೀಗಾಗಿ, ಪಠ್ಯಪುಸ್ತಕ ನೋಡಿ ಬರೆಯುವ ಸ್ವಾತಂತ್ಯ ನೀಡಬೇಕು. ಈ ಎಲ್ಲ ಮಾತುಗಳನ್ನು ನಾನು ಶಿಕ್ಷಣ ಸಚಿವನಾಗಿ, ಪ್ರಜ್ಞಾಪೂರ್ವಕವಾಗಿಯೇ ಹೇಳುತ್ತಿದ್ದೇನೆ. ಇದೆಲ್ಲವನ್ನೂ ತಕ್ಷಣ ಜಾರಿಗೆ ತರಲು ಸಾಧ್ಯವಿಲ್ಲ ಎಂಬುದು ನನಗೂ ಗೊತ್ತಿದೆ ಎಂದು ಹೇಳಿದರು.

ಓದಿದವರಿಗೆಲ್ಲಾ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಆದ್ದರಿಂದ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಕೇಂದ್ರವನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ವಿದ್ಯಾರ್ಥಿಗಳು ಕಲ್ಲಿದ್ದಂತೆ. ಶಿಕ್ಷಕರು ಶಿಲ್ಪಿಗಳಿದ್ದಂತೆ. ಶಿಲ್ಪಿ ಸುಂದರವಾಗಿ ಕೆತ್ತನೆ ಮಾಡಿದರೆ ಕಲ್ಲು ಶಿಲ್ಪವಾಗಲು ಸಾಧ್ಯ. ಶಿಕ್ಷಣ ಇಲಾಖೆಯ ಕೇಂದ್ರ ವ್ಯಕ್ತಿ ವಿದ್ಯಾರ್ಥಿ. ನಾವೆಲ್ಲ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡಬೇಕು. ದುರದೃಷ್ಟವಶಾತ್‌ ಶಿಕ್ಷಣ ಇಲಾಖೆ ಶಿಕ್ಷಕ ಕೇಂದ್ರೀಕೃತವಾಗುತ್ತಿದೆ ಎಂಬ ಆತಂಕವಿದೆ. ಪ್ರಾಥಮಿಕ ಶಿಕ್ಷಣದಿಂದಲೇ ಗುಣಾತ್ಮಕವಾದ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕು. ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಪ್ರಾಥಮಿಕ ಹಂತದಿಂದಲೇ ಕಲಿಸಬೇಕು. ಇದನ್ನೆಲ್ಲ ಜಾರಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ. 5 ಲಕ್ಷ ಸಂಬಳ ಪಡೆಯುತ್ತಿದ್ದ ಸಾಫ್ಟ್ವೇರ್‌ ಇಂಜಿನಿಯರ್‌ ಒಬ್ಬ  ಪ್ರೇಮ ವಿಫ‌ಲವಾದದ್ದಕ್ಕೆ ನೊಂದು ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನು ಪಡೆದ ಶಿಕ್ಷಣದಿಂದೇನು ಪ್ರಯೋಜನವಾಯಿತು? ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಅವನಿಗೆ ಬದುಕುವ ಕೌಶಲ್ಯ ಕಲಿಸಲಿಲ್ಲ. ಇದಕ್ಕಿಂತ ನಮ್ಮ ಹಳ್ಳಿಯ ವಿದ್ಯಾರ್ಥಿಗಳು ಎಷ್ಟೋ ವಾಸಿ. ಅವರು ಚಿಕ್ಕಂದಿನಿಂದ ಕಷ್ಟಗಳನ್ನು ನೋಡಿ ಬೆಳೆದಿರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಷ್ಟಕ್ಕಾಗುವವರು ಹೆಣ್ಣು ಮಕ್ಕಳೇ ಹೊರತು ಗಂಡಲ್ಲ!:
ಇಲ್ಲಿ ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಮಕ್ಕಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿದ್ದಾರೆ. ಹೆಣ್ಣು ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚು. ಅವರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಚೆನ್ನಾಗಿ ನಿಭಾಯಿಸುತ್ತಾರೆ. ಯಾವುದೇ ಪರೀಕ್ಷೆಯಿರಲಿ, ಅಲ್ಲಿ ಹೆಣ್ಮಕ್ಕಳೇ ಮುಂದಿದ್ದಾರೆ. ದುರಂತ ಎಂದರೆ ಪಿಯು ನಂತರ ಹೆಣ್ಣು ಮಕ್ಕಳನ್ನು ಪೋಷಕರು ಉನ್ನತ ವ್ಯಾಸಂಗಕ್ಕೆ ಕಳುಹಿಸುವುದಿಲ್ಲ. ಹಳ್ಳಿಯಲ್ಲಿರುವ ನನ್ನ ಮಗಳನ್ನು ಚಾಮರಾಜನಗರಕ್ಕೆ  ಕಳುಹಿಸಿದರೆ, ಏನೋ ಎಂತೋ ಆಗಿ ಬಿಡುತ್ತಾಳೆ ಅಂತ ಭಯ. ಆ ತರಹ ಏನೂ ಆಗುವುದಿಲ್ಲ. ನಿಮ್ಮ ಹೆಣ್ಣು ಮಕ್ಕಳನ್ನು ಮೈಸೂರು, ಬೆಂಗಳೂರು, ದೆಹಲಿಗೆ ಕಳುಹಿಸಿ ಓದಿಸಿ. ಸಾಧನೆ ಮಾಡಿ ತೋರಿಸುತ್ತಾಳೆ. ಕೊನೆಗೆ ನಿಮ್ಮ ಕಷ್ಟಕ್ಕಾಗುವುದು ಹೆಣ್ಣು ಮಕ್ಕಳೇ ಹೊರತು ಗಂಡು ಮಕ್ಕಳಲ್ಲ ಎಂದು ಸಚಿವರು ಕಿವಿಮಾತು ಹೇಳಿದರು.

ಶಾಲೆಯಲ್ಲಿ ಮೊಬೈಲ್‌ ಬಳಸಬೇಡಿ:
ಶಾಲೆಯಲ್ಲಿ ಶಿಕ್ಷಕರು ಮೊಬೈಲ್‌ ಬಳಸಬೇಡಿ. ಸ್ಟಾಫ್ ರೂಂನಲ್ಲಿ ಇಟ್ಟು ಬಿಡಿ. ಶಾಲೆಯಿಂದ ಹೊರಗೆ ಬಳಸಲು ಅಡ್ಡಿಯಿಲ್ಲ. ನಾನು ಮತ್ತು ಜಿಲ್ಲಾಧಿಕಾರಿಯವರು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತೇವೆ ಎಂದು ಹೇಳಿದರು.

ಮಕ್ಕಳಿಗೆ ಅತಿ ಶಿಸ್ತು, ಶಿಕ್ಷೆ ಹೇರಬೇಡಿ. ಮಕ್ಕಳನ್ನು ಆ ಕಡೆ ನೋಡಬೇಡ, ಈ ಕಡೆ ನೋಡಬೇಡ ಎನ್ನಬೇಡಿ. ನೋಡಿದರೆ ತಪ್ಪೇನು? ದೇವರ ಸಮನಾದ ಮಕ್ಕಳನ್ನು ಮೂದೇವಿ ಎಂದು ಮೂದಲಿಸಬೇಡಿ. ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವ ಮಕ್ಕಳ ತಲೆ ಸವರಿ ಮಾತನಾಡಿಸಿ ಎಂದು ಸಚಿವರು ಸಲಹೆ ನೀಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ