ಬಿಳಿಗಿರಿರಂಗನಬೆಟ್ಟದಲ್ಲಿ ಬಸ್‌ ನಿಲ್ದಾಣವಿಲ್ಲವೇ ಇಲ್ಲ!

Team Udayavani, Aug 12, 2019, 3:00 AM IST

ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಪ್ರಸಿದ್ಧ ಹಾಗೂ ವಿಶಿಷ್ಟ ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ಹುಲಿ ರಕ್ಷಿತ ಅರಣ್ಯ ಪ್ರದೇಶವೂ ಆಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಸೂಕ್ತ ಬಸ್‌ ನಿಲ್ದಾಣವಿಲ್ಲದೆ ಪ್ರಯಾಣಿಕರು ರಸ್ತೆಯಲ್ಲೇ ಕೂರುವ ಪರಿಸ್ಥಿತಿ ಇದೆ.

ತಮ್ಮ ವಿಶಿಷ್ಟ ಪ್ರಾಕೃತಿಕ ಸಂಪತ್ತಿನಿಂದ, ಧಾರ್ಮಿಕ ನೆಲೆಯಿಂದ ಈ ಪ್ರದೇಶ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಬೆಟ್ಟದ ಕಮರಿಯ ಮೇಲಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಒಂದೆಡೆ ಭಕ್ತಿ ಭಾವವನ್ನು ಉಕ್ಕಿಸುವ ಕೇಂದ್ರವಾದರೆ ಮತ್ತೂಂದೆಡೆ ಸಾವಿರಾರೂ ಅಡಿ ಎತ್ತರದಲ್ಲಿರುವ ಪ್ರಕೃತಿಯ ವೈಭವವನ್ನು ಸವಿಯಲು ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತರು ಬರುತ್ತಾರೆ.

ಬಸ್‌ ನಿಲ್ದಾಣವೇ ಇಲ್ಲ: ಇಲ್ಲಿ ಪ್ರತಿ ವಾರವೂ ದೇವರ ದರ್ಶ ನಕ್ಕೆ ಸಾವಿರಾರೂ ಭಕ್ತರು ಆಗಮಿಸುತ್ತಾರೆ. ಶನಿವಾರ ಬಿಳಿಗಿರಿರಂಗನಾಥಸ್ವಾಮಿಯ ವಾರದ ದಿನವಾಗಿದ್ದು ಪ್ರತಿ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಏರಿಕೆ ಇರುತ್ತದೆ. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲದಿಂದ ದಿನನಿತ್ಯ ಇಲ್ಲಿಗೆ ಸಾರಿಗೆ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಪ್ರಯಾಣಿಕರು ಕಮರಿಯ ತಳಭಾಗದಲ್ಲಿರುವ ಬಿಳಿಗಿರಿ ಭವನದ ಬಳಿ ಇರುವ ಜಾಗವೇ ಬಸ್‌ ನಿಲ್ದಾಣವಾಗಿದ್ದು ಇಲ್ಲೇ ಇಳಿಯುವ, ಹತ್ತುವ ಪರಿಸ್ಥಿತಿ ಅನೇಕ ವರ್ಷಗಳಿಂದಲೂ ಇದೆ.

ಪಾಳು ಬಿದ್ದ ಕಟ್ಟಡ: ಈ ಹಿಂದೆ ಬಸ್‌ ನಿಲ್ದಾಣಕ್ಕೆಂದು ಮಾಡಲಾಗಿದ್ದ ಕಟ್ಟಡ ಪಾಳು ಬಿದ್ದಿದ್ದು ಈ ಕಾಮಗಾರಿ ನನೆಗುದಿಗೆ ಬಿದ್ದಿದೆ. ಭಕ್ತರ ಸಂಖ್ಯೆಯಲ್ಲಿ ಏರುಮುಖವಾದರೆ ಪ್ರಯಾಣಿಕರು, ಭಕ್ತರು ರಸ್ತೆಯ ಮೇಲೇ ಕುಳಿತುಕೊಳ್ಳುವ ಸ್ಥಿತಿ ಇದೆ. ಇಲ್ಲಿಗೆ ಸೂಕ್ತ ಬಸ್‌ ನಿಲ್ದಾಣವನ್ನು ನಿರ್ಮಿಸಿ ಎಂದು ಹಲವು ವರ್ಷಗಳ ಕೂಗಿಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ದೇಗುಲದ ಮಾಜಿ ಧರ್ಮದರ್ಶಿ ಎನ್‌. ದೊರೆಸ್ವಾಮಿ ಅವರ ಆರೋಪ.

ಸೌಲಭ್ಯಗಳೇ ಮರೀಚಿಕೆ: ಇಲ್ಲಿ ಸಾರ್ವಜನಿಕ ಶೌಚಾಲಯವೂ ಇದೆ. ಆದರೆ ಇದು ಕೆಲವೊಮ್ಮೆ ಬಾಗಿಲು ತೆರೆಯುವುದೇ ಇಲ್ಲ. ಹಾಗಾಗಿ ಪ್ರಯಾಣಿಕರಿಗೆ ಪ್ರತಿ ನಿತ್ಯ ತೊಂದರೆಯಾಗುತ್ತದೆ. ಇಲ್ಲಿರುವ ತೊಂಬೆ ನಲ್ಲಿಗಳಲ್ಲಿ ಕೆಲವೊಮ್ಮೆ ನೀರು ಹರಿಯುವುದಿಲ್ಲ. ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯೇ ಇಲ್ಲ. ಬಿಸಿಲು, ಮಳೆ, ಗಾಳಿಯಲ್ಲಿ ರಸ್ತೆಯಲ್ಲಿ ದೊಡ್ಡ ರಥದ ಬೀದಿಗೆ ಹೊಂದಿಕೊಂಡಂತಿರುವ ಮಂಟಪಗಳ ಮುಂಭಾಗದಲ್ಲೇ ಪ್ರಯಾಣಿಕರು ಕುಳಿತುಕೊಳ್ಳುವ ಪರಿಸ್ಥಿತಿ ಇದೆ.

ಖಾಸಗಿ ವಾಹನ ನಿಲುಗಡೆಗೂ ತೊಂದರೆ: ಬೆಟ್ಟಕ್ಕೆ ಬಹುತೇಕರು ತಮ್ಮ ಖಾಸಗಿ ವಾಹನಗಳಲ್ಲಿ ಬರುತ್ತಾರೆ. ದೇಗುಲದ ಬಳಿಗೆ ವಾಹನಗಳು ತೆರಳಲು ಒಂದು ಚಿಕ್ಕ ನಿಲ್ದಾಣವನ್ನು ಮಾಡಲಾಗಿದೆ. ಆದರೆ ಇಲ್ಲಿ ಹೆಚ್ಚಿನ ವಾಹನಗಳು ನಿಲ್ಲಲು ಅವಕಾಶವಿರುವುದಿಲ್ಲ. ವಾಹನ ದಟ್ಟಣೆ ಹೆಚ್ಚಾದರೆ ಕಮರಿಯ ತಳಭಾಗದಲ್ಲೇ ತಮ್ಮ ವಾಹನ ನಿಲ್ಲಿಸಿ ಬೆಟ್ಟವನ್ನು ಹತ್ತಿ ಬರಬೇಕು. ಆದರೆ ಕೆಳ ಭಾಗದಲ್ಲಿ ವಾಹನ ನಿಲ್ಲಿಸಲೂ ಜಾಗವಿಲ್ಲದೆ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ಬೆಟ್ಟ ಹತ್ತುವ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟವರು ಈಗಲಾದರೂ ಸೂಕ್ತ ಕ್ರಮ ವಹಿಸಬೇಕಿದೆ.

ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ. ಆದಷ್ಟು ಬೇಗ ಪೂರ್ಣಗೊಳ್ಳುವ ವಿಶ್ವಾಸವಿದೆ. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಸೂಕ್ತ ಬಸ್‌ ನಿಲ್ದಾಣವಿಲ್ಲ. ಈ ಬಗ್ಗೆ ನನಗೂ ಮಾಹಿತಿ ಇದ್ದು ಆದಷ್ಟು ಬೇಗ ಎಲ್ಲಾ ಸೌಲಭ್ಯಗಳುಳ್ಳ ಬಸ್‌ ನಿಲ್ದಾಣ ನಿರ್ಮಿಸಲು ಕ್ರಮ ವಹಿಸಲಾಗುವುದು.
-ಎನ್‌.ಮಹೇಶ್‌, ಶಾಸಕ

* ಫೈರೋಜ್‌ಖಾನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ