ಸಾವಿರಾರೂ ಎಕರೆ ಜಮೀನು ಮುಳುಗಡೆ

Team Udayavani, Aug 12, 2019, 3:00 AM IST

ಕೊಳ್ಳೇಗಾಲ: ಕೃಷ್ಣರಾಜಸಾಗರ ಮತ್ತು ಕಬಿನಿಯಿಂದ 2.25 ಲಕ್ಷ ಕ್ಯೂಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದ್ದು, ನದಿಯು ಅಪಾಯ ಮಟ್ಟ ಮೀರಿ ಪ್ರವಾಹ ಕಾವೇರಿ ತೀರದ ಗ್ರಾಮಗಳಿಗೆ ನುಗ್ಗಿದ ಪರಿಣಾಮ ಸಾವಿರಾರೂ ಎಕರೆ ಜಮೀನು ಹಾಗೂ ಮನೆಗಳು, ಸೇತುವೆ ಭಾನುವಾರ ಮುಳುಗಡೆಯಾಗಿದೆ.

ಕೊಡಗು ಮತ್ತು ಕೇರಳದಲ್ಲಿ ಅತಿ ಹೆಚ್ಚು ಮಳೆ ಪರಿಣಾಮ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳು ಭರ್ತಿಗೊಂಡು ಲಕ್ಷಾಂತರ ಕ್ಯೂಸೆಕ್‌ ನೀರು ಹೊರ ಬಿಡುವ ಹಿನ್ನೆಲೆಯಲ್ಲಿ ಕಾವೇರಿನದಿ ಅಪಾಯ ಮಟ್ಟ ಮೀರಿ ರಭಸವಾಗಿ ಹರಿಯುತ್ತಿರುವ ನೀರು ಇಡೀ ಗ್ರಾಮವನ್ನು ಸುತ್ತುವರಿದಿದೆ.

ಡೀಸಿ ವೀಕ್ಷಣೆ: ಕಾವೇರಿ ನದಿಯ ತೀರದಲ್ಲಿರುವ 9 ಗ್ರಾಮಗಳಾದ ದಾಸನಪುರ, ಹಳೇ ಅಣಗಳ್ಳಿ, ಮುಳ್ಳೂರು, ಹಳೇ ಹಂಪಾಪುರ, ಹರಳೆ, ಯಡಕುರಿಯ, ಸರಗೂರು, ಧನಗೆರೆ ಗ್ರಾಮಗಳಿಗೆ ನುಗ್ಗಿದ್ದು, ಶಾಸಕ ಎನ್‌.ಮಹೇಶ್‌ ಮತ್ತು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಖುದ್ದು ವೀಕ್ಷಣೆ ಮಾಡಿದರು.

ಗ್ರಾಮಸ್ಥರ ಅಳಲು: ಗ್ರಾಮಸ್ಥರನ್ನು ಭೇಟಿಯಾದ ಶಾಸಕರು ಕಳೆದ ವರ್ಷ ಇದೇ ರೀತಿ ಪ್ರವಾಹ ಬಂದ ವೇಳೆ ಗ್ರಾಮಸ್ಥರನ್ನು ಗಂಜಿ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಹಲವಾರು ಮನೆಗಳು ಕುಸಿದುಹೋಗಿತ್ತು, ಬೆಳೆ ನಷ್ಟವಾಗಿತ್ತು ಮತ್ತು ಮನೆಯಲ್ಲಿದ್ದ ಆಹಾರ ಪದಾರ್ಥಗಳು ನೀರು ಪಾಲಾಗಿತ್ತು. ಇಷ್ಟೆಲ್ಲಾ ನಷ್ಟಗಳು ಸಂಭವಿಸಿದ್ದರೂ ಸಹ ತಾಲೂಕು ಆಡಳಿತ ಇರುವವರಿಗೆ ಮಾತ್ರ ಪರಿಹಾರ ನೀಡಿತು. ಆದರೆ ನಿಜವಾಗಿ ಆಸ್ತಿಯನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ವಿಫ‌ಲರಾಗಿದ್ದಾರೆಂದು ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಂಡರು.

ಗ್ರಾಮ ಪೂರ್ತಿ ಜಲಾವೃತ: ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಶಾಸಕರು, ಈಗಾಗಲೇ ಕೃಷ್ಣರಾಜಸಾಗರದಿಂದ ಒಂದು ಲಕ್ಷ, ಕಬಿನಿಯಿಂದ 1.25 ಸೇರಿದಂತೆ ಒಟ್ಟು 2.25 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ. ಗ್ರಾಮದ ಹೊರ ವಲಯದಲ್ಲಿ ಜಲಾವೃತಗೊಂಡು ಪ್ರವಾಹದ ಭೀತಿ ಎದುರಾಗಿದೆ. ಕೂಡಲೇ ಗ್ರಾಮಸ್ಥರನ್ನು ರಸ್ತೆ ಸಾರಿಗೆ ಬಸ್‌ಗಳಿಂದ ಗಂಜಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.

ಗ್ರಾಮಸ್ಥರಿಗೆ ಭರವಸೆ ನೀಡಿದ ಶಾಸಕ: ಗ್ರಾಮಸ್ಥರು ಗಂಜಿ ಕೇಂದ್ರಕ್ಕೆ ತೆರಳಲು ನಿರಾಕರಿಸುತ್ತಿದ್ದು, ಎಲ್ಲಾ ಗ್ರಾಮಸ್ಥರಲ್ಲಿ ಈಗಾಗಲೇ ಜಿಲ್ಲಾಡಳಿತ ಸೇರಿದಂತೆ ಮನವಿ ಮಾಡಿದ್ದು, ಗ್ರಾಮಸ್ಥರು ಹಠ ಮಾಡದೆ ಪ್ರತಿಯೊಬ್ಬರು ಗಂಜಿ ಕೇಂದ್ರಕ್ಕೆ ತೆರಳಬೇಕು. ಕಳೆದ ವರ್ಷ ಪರಿಹಾರ ಸಿಕ್ಕದಿದ್ದವರಿಗೂ ಸಹ ಈ ಬಾರಿ ಕ್ರಮವಾಗಿ ಪರಿಶೀಲನೆ ನಡೆಸಿ ಎಲ್ಲರಿಗೂ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿರುವುದಾಗಿ ಹೇಳಿದರು.

ಶಾಶ್ವತ ತಡೆಗೋಡೆ ನಿರ್ಮಾಣ: ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ಕಾವೇರಿ ನದಿ ತೀರದ ಗ್ರಾಮಗಳಿಗೆ ಅಡ್ಡಗೋಡೆ ನಿರ್ಮಿಸಿಕೊಡುವ ಭರವಸೆ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದು, ಹಳೆಯ ಪ್ರಸ್ತಾವನೆಗೆ ಹಣ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರವರ ಬಳಿ ಶನಿವಾರ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಹಣ ಬಿಡುಗಡೆಯಾಗುತ್ತಿದ್ದಂತೆ ಪ್ರವಾಹ ತಡೆಯಲು ಶಾಶ್ವತ ತಡೆಗೋಡೆಯನ್ನು ನಿರ್ಮಿಸಲಾಗುವುದೆಂದರು.

ಯಡಕುರಿಯ ಗ್ರಾಮಕ್ಕೆ ನರೇಂದ್ರ ಭೇಟಿ: ದ್ವೀಪದಂತೆ ಇರುವ ಯಡಕುರಿಯ ಗ್ರಾಮಕ್ಕೆ ಹನೂರು ಶಾಸಕ ಆರ್‌.ನರೇಂದ್ರ ಭೇಟಿ ನೀಡಿದ ಬಳಿಕ ಗ್ರಾಮಸ್ಥರಿಗಾಗಿ ಸತ್ತೇಗಾಲ ಗ್ರಾಮದಲ್ಲಿ ಅಗ್ರಹಾರದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಗ್ರಾಮಸ್ಥರು ಕೂಡಲೇ ಗಂಜಿ ಕೇಂದ್ರದಲ್ಲಿ ನೆಲೆಸಬೇಕೆಂದು ಮನವಿ ಮಾಡಿದರು.

ಗ್ರಾಮಸ್ಥರಲ್ಲಿ ಮನವಿ: ಮನೆಯಲ್ಲಿರುವ ಧವಸ-ಧಾನ್ಯಗಳನ್ನು ಕೂಡಲೇ ಬೇರೆಡೆಗೆ ಸಾಗಿಸಲು ಅವಕಾಶ ಕಲ್ಪಿಸಿಕೊಟ್ಟು ಆಹಾರ ಪದಾರ್ಥಗಳ ರಕ್ಷಣೆ ಮಾಡಿಕೊಂಡು ಜೀವ ರಕ್ಷಣೆಗಾಗಿ ಗಂಜಿ ಕೇಂದ್ರಕ್ಕೆ ಬಂದ ಪಕ್ಷದಲ್ಲಿ ಎಲ್ಲರಿಗೂ ಪ್ರವಾಹದ ನಂತರದ ಸೂಕ್ತ ಪರಿಹಾರದ ವ್ಯವಸ್ಥೆಯನ್ನು ಕಲ್ಪಿಸುವ ಮನವಿಯನ್ನು ಗ್ರಾಮಸ್ಥರಲ್ಲಿ ಮಾಡಿದರು.

ಪ್ರವಾಹ ಪೀಡಿತರಿಗೆ ಊಟ ವಿತರಣೆ: ಪಟ್ಟಣದ ವಸತಿ ವಿದ್ಯಾರ್ಥಿ ನಿಲಯಗಳಲ್ಲಿ ಗಂಜಿ ಕೇಂದ್ರವನ್ನು ತೆರೆದಿದ್ದ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತರಿಗೆ ಎಂದು ತಯಾರಿಸಿದ್ದ ಊಟವನ್ನು ಮಧ್ಯಾಹ್ನ ಗ್ರಾಮಕ್ಕೆ ಸಾಗಿಸಿ ಗ್ರಾಮಸ್ಥರಿಗೆ ವಿತರಣೆ ಮಾಡಲಾಯಿತು.

ಗ್ರಾಮ ಬಿಡದ ಜನರು: ಶಾಸಕರು ಮತ್ತು ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿದರೂ ಸಹ ಗ್ರಾಮದ ಬಿಡದೆ ಜಮಾಯಿಸಿದ್ದರು. ನಂತರ ನೀರಿನ ಹೊರ ಅರಿವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಕೂಡಲೇ ಜನರನ್ನು ಗಂಜಿ ಕೇಂದ್ರಕ್ಕೆ ಸಾಗಿಸಿದರು.

ಜಿಲ್ಲಾಧಿಕಾರಿ ಸೂಚನೆ: ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿದು ನದಿಯ ತೀರದ ಗ್ರಾಮಗಳು ಮುಳುಗಡೆಯಾಗುತ್ತಿದೆ. ಕೂಡಲೇ ಗ್ರಾಮಸ್ಥರನ್ನು ಮತ್ತು ಅವರ ಆಸ್ತಿ ಪಾಸ್ತಿಗಳ ರಕ್ಷಣೆಗೆ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಅಧಿಕಾರಿಗಳು, ಮೊಕ್ಕಂ ಹೂಡಿ, ಪ್ರವಾಹ ಭೀತಿಯನ್ನು ತಡೆಯಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಉಪ ವಿಭಾಗಾಧಿಕಾರಿ ನಿಖಿತ ಎಂ.ಚಿನ್ನಸ್ವಾಮಿ, ತಹಶೀಲ್ದಾರ್‌ ಕುನಾಲ್‌, ಡಿವೈಎಸ್ಪಿ ನವೀನ್‌ಕುಮಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಎಸ್‌ಐಗಳಾದ ರಾಜೇಂದ್ರ, ಅಶೋಕ್‌, ಜಿಲ್ಲಾ ಆರೋಗ್ಯಾಧಿಕಾರಿ ರವಿ, ಪೌರಾಯುಕ್ತ ನಾಗಶೆಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಮಹದೇವಸ್ವಾಮಿ, ಪಶು ವೈದ್ಯ ಅಧಿಕಾರಿ ಡಾ.ವೆಂಕಟರಾಮು, ಸಮಾಜ ಕಲ್ಯಾಣ ಇಲಾಖೆಯ ಜಯಕಾಂತ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ