ಇಲ್ಲಿದೆ ನೋಡಿ ಮಾದರಿ ಆರೋಗ್ಯ ಕೇಂದ್ರ

ತಾವರಕೆರೆ ಆರೋಗ್ಯ ಕೇಂದ್ರಕ್ಕೆ ಸ್ವಚ್ಛ ಮಹೋತ್ಸವ ಪ್ರಶಸ್ತಿ

Team Udayavani, Sep 16, 2019, 11:22 AM IST

ಚನ್ನಗಿರಿ: ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ.

ಸಿ.ಎಸ್‌. ಶಶೀಂದ್ರ
ಚನ್ನಗಿರಿ:
ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರಿ ಇರಲ್ಲ. ಅಲ್ಲಿ ಸರಿಯಾದ ಚಿಕಿತ್ಸೆ ಸಿಗೊಲ್ಲ, ಮೂಲ ಸೌಕರ್ಯಗಳು ಇರಲ್ಲ ಎನ್ನುವವರೇ ಹೆಚ್ಚು. ಕೆಲ ಆಸ್ಪತ್ರೆಗಳು ಹೀಗೆ ಇರುವುದೂ ಸತ್ಯ. ಆದರೆ ಚನ್ನಗಿರಿ ತಾಲೂಕಿನ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದಕ್ಕೆ ಅಪವಾದ ಎಂಬಂತಿದೆ.

ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್ಸಿ) ಸ್ವಚ್ಛತೆ, ಗುಣಮಟ್ಟದ ಚಿಕಿತ್ಸೆ ಅಗತ್ಯ ಮೂಲ ಸೌಲಭ್ಯ ಹೀಗೆ ಯಾವುದಕ್ಕೂ ಕೊರತೆ ಇಲ್ಲ. ಹೀಗಾಗಿ ಈ ಆರೋಗ್ಯ ಕೇಂದ್ರಕ್ಕೆ ಈ ಬಾರಿ ರಾಷ್ಟ್ರಮಟ್ಟದ ಸ್ವಚ್ಛ ಮಹೋತ್ಸವ ಪ್ರಶಸ್ತಿಯೂ ಲಭಿಸಿದೆ.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಪ್ರಸಕ್ತ ಸಾಲಿನಿಂದ ಸ್ವಚ್ಛ ಪಿಎಚ್ಸಿಗಳಿಗೆ ಸ್ವಚ್ಛ ಮಹೋತ್ಸವ ಪ್ರಶಸ್ತಿ ನೀಡಲು ಆರಂಭಿಸಿದ್ದು, 2019-20ನೇ ಸಾಲಿನ ಪ್ರಶಸ್ತಿಗಳಲ್ಲಿ ತೃತೀಯ ಸ್ಥಾನವನ್ನು ಈ ಆರೋಗ್ಯ ಕೇಂದ್ರ ಮುಡಿಗೇರಿಸಿಕೊಂಡಿದೆ.

ಸೆ.6ರಂದು ನವದೆಹಲಿಯಲ್ಲಿ ಪಿಎಚ್ಸಿ ವೈದ್ಯಾಧಿಕಾರಿ ಡಾ| ಎಸ್‌. ದೇವರಾಜ ಪ್ರಶಸ್ತಿ ಸ್ವೀಕರಿಸಿದರು.

ಹಳ್ಳಿಯ ಹೈಟೆಕ್‌ ಆಸ್ಪತ್ರೆ: ತಾವರಕೆರೆ ನಗರ ಪ್ರದೇಶದಿಂದ ದೂರವಿರುವ ಗ್ರಾಮ. ಇಂದಿಗೂ ಈ ಗ್ರಾಮಕ್ಕೆ ಬೆರಳೆಣಿಕೆಯಷ್ಟು ಖಾಸಗಿ ಬಸ್‌ಗಳು ಮಾತ್ರ ಸಂಚರಿಸುತ್ತವೆ. ಹಲವು ಸಮಸ್ಯೆಗಳಿಂದ ನಲುಗುತ್ತಿರುವ ಈ ಹಳ್ಳಿಯಲ್ಲಿನ ಈ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಈ ಆಸ್ಪತ್ರೆಯ ಸ್ಥಿತಿಯೂ ಎಲ್ಲ ಕಡೆಯ ಆರೋಗ್ಯ ಕೇಂದ್ರಗಳಂತೆ ಇತ್ತು. ಮೊದಲು ಆಸ್ಪತ್ರೆ ಹಳೆಯ ಕಟ್ಟಡ ಹೊಂದಿತ್ತು. 2015ರಲ್ಲಿ ಹೊಸ ಕಟ್ಟಡ ನಿರ್ಮಿಸಲಾಯಿತು. ಇದೇ ಸಮಯಕ್ಕೆ ಇಲ್ಲಿಗ ನಿಯೋಜನೆ ಗೊಂಡ ವೈದ್ಯರೊಬ್ಬರು ಸಿಬ್ಬಂದಿಗಳೊಂದಿಗೆ ಆಸ್ಪತ್ರೆಯ ಚಿತ್ರಣವನ್ನೇ ಬದಲಿಸಿದರು. ಸದ್ಯ ಆಸ್ಪತ್ರೆಯಲ್ಲಿ ಹೆರಿಗೆ ಕೇಂದ್ರ, ಮಹಿಳಾ ವಾರ್ಡ್‌, ಪುರುಷ ವಾರ್ಡ್‌ಗಳು, ಕಚೇರಿ ಕೊಠಡಿ, ಸೇರಿದಂತೆ ಒಟ್ಟು 16 ಕೊಠಡಿಗಳಿವೆ. ಓರ್ವ ವೈದ್ಯರು, ಮೂವರು ಶುಶ್ರೂಶಕಿಯರು, ಡಿ.ದರ್ಜೆ ನೌಕರರು ಸೇರಿ ಒಟ್ಟು 8 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲ ಹುದ್ದೆಗಳು ಖಾಲಿ ಇದ್ದು, ಭರ್ತಿಯಾಗಬೇಕಿದೆ.

ಸಿಬ್ಬಂದಿ ಶ್ರಮಕ್ಕೆ ಪ್ರಶಸ್ತಿ ಫಲ: ಡಾ| ಎಸ್‌. ದೇವರಾಜ್‌ ಅವರ ಶ್ರಮ, ಕಾರ್ಯಕ್ಷಮತೆಯಿಂದ ಆರೋಗ್ಯ ಕೇಂದ್ರ ವರ್ಷದಿಂದ ವರ್ಷಕ್ಕೆ ಮೇಲ್ದರ್ಜೆ ಗೇರುತ್ತಿದ್ದು, ಜನರಿಗೆ ಹತ್ತಿರವಾಗುತ್ತಿದೆ. ತಾವರೆಕೆರೆ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಈ ಆರೋಗ್ಯ ಕೇಂದ್ರ ಹತ್ತಿರದಲ್ಲಿದ್ದು, 24 ಗಂಟೆಗಳ ಕಾಲ ಚಿಕಿತ್ಸೆ ನೀಡಲಾಗುತ್ತಿದೆ.

ಡಾ| ದೇವರಾಜ್‌ ಹಾಗೂ ಸಿಬ್ಬಂದಿ ಪರಿಶ್ರಮದಿಂದ 2017ರಿಂದ ಸತತ ಮೂರು ವರ್ಷ ರಾಜ್ಯ ಮಟ್ಟದಲ್ಲಿ ನೀಡುವ ಕಾಯಕಲ್ಪ ಪ್ರಶಸ್ತಿ ಈ ಪಿಎಚ್ಸಿಗೆ ದೊರಕಿದೆ. 2016ರಲ್ಲಿ ಕಾಯಕಲ್ಪ ಪ್ರಶಸ್ತಿ ಸಮಾಧಾನಕರ ಬಹುಮಾನದಿಂದ 50 ಸಾವಿರ ರೂ. ಬಂದಿದ್ದರೆ ಕಳೆದ ಸಾಲಿನಲ್ಲಿ ಮೊದಲ ಬಹುಮಾನದಿಂದ 2 ಲಕ್ಷ ರೂ. ನಗದು ಬಂದಿತ್ತು, ಈ ವರ್ಷದ ಬಹುಮಾನದ ಹಣ ಇನ್ನೂ ಆಸ್ಪತ್ರೆಗೆ ಸಿಕ್ಕಿಲ್ಲ.

ಬಹುಮಾನದಿಂದ ಬಂದ ಹಣದವನ್ನೂ ಇಲಾಖೆ ಮಾರ್ಗಸೂಚಿಯಂತೆ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಇದರಿಂದ ಆಸ್ಪತ್ರೆ ಪ್ರವೇಶ ದ್ವಾರ ಹಾಗೂ ಎಲ್ಲಾ ಕಿಟಕಿಗಳಿಗೂ ಸೊಳ್ಳೆಪರದೆಗಳನ್ನು ಹಾಕಿ, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಖಾಸಗಿ ಆಸ್ಪತ್ರೆಗೇನೂ ಕಮ್ಮಿ ಇಲ್ಲ: ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೀಚಿಕೆ ಎಂಬುದನ್ನು ತಾವರೆಕೆರೆ ಪಿಹೆಚ್ಸಿ ಕೇಂದ್ರ ಸುಳ್ಳಾಗಿಸಿದೆ. ನೈರ್ಮಲ್ಯ, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯಗಳನ್ನು ಹೊಂದಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಆಧುನಿಕ ಸೌಲಭ್ಯಗಳು: ಸ್ಕಾ ್ಯನಿಂಗ್‌ ವ್ಯವಸ್ಥೆ ಹೊರತುಪಡಿಸಿ ಪಿಹೆಚ್ಸಿಯಲ್ಲಿ ಇರಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೆರಿಗೆ ಮಾಡಿಸಲಾಗುತ್ತಿದೆ. ಮೈನರ್‌ ಓಟಿ, ಸ್ಟಿಚಿಂಗ್‌ ಸೌಲಭ್ಯಗಳಿವೆ. ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ರಕ್ತದ ಕೊರತೆ ಆಗದಂತೆ ರಕ್ತ ಸಂಗ್ರಹಾಲಯಕ್ಕೆ ರಕ್ತವನ್ನು ಸಂಗ್ರಹಿಸಲಾಗುತ್ತದೆ.

ಒಟ್ಟಾರೆ ತಾವರಕೆರೆ ಪಿಎಚ್ಸಿ ವೈದ್ಯರು ಮತ್ತು ಸಿಬ್ಬಂದಿ ಇತರೆ ಪಿಎಚ್ಸಿಗಳಿಗೆ ಮಾದರಿ ಆಗಿದ್ದಾರೆ.

ಪಿಎಚ್ಸಿಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ. ಈ ಹಿಂದೆ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿಯನ್ನು ಕಾರಿಗನೂರು ಪಿಎಚ್ಸಿ ಪಡೆದು ಬೇರೆ ಪಿಎಚ್ಸಿಗಳಿಗೆ ಮಾದರಿ ಆಗಿತ್ತು. ಆ ಮಾರ್ಗದಲ್ಲಿಯೇ ತಾವರೆಕೆರೆ ಪಿಎಚ್ಸಿ ಮುನ್ನಡೆದಿದ್ದು, ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ.
ಡಾ| ಬಿ.ಎಂ. ಪ್ರಭು,
ತಾಲೂಕು ವೈದ್ಯಾಧಿಕಾರಿ.

ಆಸ್ಪತ್ರೆಯಲ್ಲಿ ನೈರ್ಮಲ್ಯ, ಸ್ವಚ್ಛತೆ ಸೇರಿ ಗುಣಮಟ್ಟದ ಚಿಕಿತ್ಸೆ ಮತ್ತು ಸೋಂಕು ಹರಡುವಿಕೆ ತಡೆಯಲು ಪಿಎಚ್ಸಿಯಲ್ಲಿ ಜಾಗೃತಿ ವಹಿಸಿದ್ದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. •ಡಾ| ಎಸ್‌. ದೇವರಾಜ್‌,
 ಆಡಳಿತ ವೈದ್ಯಾಧಿಕಾರಿ,
 ತಾವರಕೆರೆ ಪಿಎಚ್ಸಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ