3.50 ಕೋಟಿ ರೂ. ವೆಚ್ಚದ ಗಾಜಿನ ಮನೆಗೆ ಕುತ್ತು
Team Udayavani, Jan 4, 2020, 3:00 AM IST
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರವಾಗಿ 12 ವರ್ಷಗಳ ಬಳಿಕ ನಗರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗಾಜಿನ ಮನೆ ಜಿಲ್ಲೆಯ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಇತ್ತೀಚೆಗೆ ಲೋಕಾಯುಕ್ತ ಕೋರ್ಟ್ ಕೆರೆಯಂಗಳದ ಮೂಲ ಸ್ವರೂಪವನ್ನು ಕಾಪಾಡುವಂತೆ ಜಿಲ್ಲಾಡಳಿತಕ್ಕೆ ನೀಡಿರುವ ಆದೇಶ ಈಗ ಗಾಜಿನ ಮನೆಗೆ ಕುತ್ತು ತರುವ ಸಾಧ್ಯತೆ ದಟ್ಟವಾಗಿದೆ.
ಹೌದು, ನಗರದ ಹೊರ ವಲಯದ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಅಂಟಿಕೊಂಡಿರುವ ಸರ್ವೆ ನಂ.109 ರಲ್ಲಿರುವ ಅಮಾನಿ ಗೋಪಾಲಕೃಷ್ಣ ಕೆರೆಯಂಗಳದಲ್ಲಿ ಅಧಿಕಾರಿಗಳ ದೂರದೃಷ್ಟಿ ಕೊರತೆಯಿಂದ ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಿಸಿರುವ ಗಾಜಿನ ಮನೆ ಹೆಸರಿಗಷ್ಟೇ ಸೀಮಿತವಾಗಿದೆ. ಜಿಲ್ಲೆಯ ಜನರ ವೀಕ್ಷಣೆ ಹಾಗೂ ಕಾರ್ಯಕ್ರಮಗಳಿಗೆ ಬಳಕೆಯಾಗದೇ ಗಾಜಿನ ಮನೆ ನಿರ್ಮಾಣಗೊಂಡು ಹಲವು ತಿಂಗಳು ಕಳೆದರೂ ಮಳೆ, ಗಾಳಿ, ಬಿಸಿಲಿಗೆ ಅದರ ಸ್ವರೂಪ ಬದಲಾಗುತ್ತಿದೆ.
ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಕೆಲವರು ಕೆರೆಯಂಗಳವನ್ನು ಕಾಲೇಜು ನಿರ್ಮಾಣಕ್ಕೆ ಕೊಡಬಾರದು ಎಂದು ಲೋಕಾಯುಕ್ತ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಈ ಕುರಿತು ಸಾಕಷ್ಟು ವಾದ, ಪ್ರತಿವಾದ ಆಲಿಸಿ ವೈದ್ಯಕೀಯ ಶಿಕ್ಷಣ ಕಾಲೇಜು ನಿರ್ಮಾಣಕ್ಕೆ ಅಲ್ಲಿ ಅವಕಾಶ ಕೊಡಲಿಲ್ಲ.
ಹೀಗಾಗಿ ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಶಿಕ್ಷಣ ಕಾಲೇಜು ಸದ್ಯಕ್ಕೆ ನಗರದ ಹೊರ ವಲಯದ ಆರೂರು ಸಮೀಪ ನಿರ್ಮಾಣಕ್ಕೆ ನಿರ್ಧರಿಸಿ ಜಿಲ್ಲಾಡಳಿತ ಭೂಮಿ ಗುರುತಿಸಿತ್ತು. ಕಳೆದ ನ.8 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಡಿಗಲ್ಲು ಹಾಕಿದರು. ಆದರೆ ಅಮಾನಿ ಗೋಪಾಲಕೃಷ್ಣ ಕೆರೆಯಂಗಳದಲ್ಲಿ ನಿರ್ಮಿಸಿರುವ ಗಾಜಿನ ಮನೆ ಕೋರ್ಟ್ ಆದೇಶದಿಂದ ತೆರವಾಗುವ ಸಾಧ್ಯತೆ ಇದ್ದು,
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಗಾಜಿನ ಮನೆ ಸೇರಿದಂತೆ ತೋಟಗಾರಿಕೆ ಇಲಾಖೆ ನಿರ್ಮಿಸಲು ಉದ್ದೇಶಿಸಿರುವ ಬಟಾನಿಕಲ್ ಗಾರ್ಡನ್ ಕೆರೆಯಂಗಳದಲ್ಲಿದ್ದು, ಲೋಕಾಯುಕ್ತ ನ್ಯಾಯಾಲಯ ಕೆರೆಯ ಮೂಲ ಸ್ವರೂಪ ಕಾಪಾಡುವಂತೆ ಆದೇಶಿರುವುದರಿಂದ ಗಾಜಿನ ಮನೆ ಅಲ್ಲಿಯೇ ಉಳಿಯುತ್ತಾ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಗಾಜಿನ ಮನೆಗೆ 3.50 ಕೋಟಿ ವೆಚ್ಚ: ಜಿಲ್ಲಾ ಕೇಂದ್ರದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳನ್ನು ಆಚರಿಸಲು ಹಾಗೂ ಪ್ರತಿ ವರ್ಷ ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ನಡೆಸಲು ಅನುಕೂಲವಾಗಲಿ ಎಂದು ತೋಟಗಾರಿಕೆ ಇಲಾಖೆಯಿಂದ ಬರೋಬ್ಬರಿ 3.50 ಕೋಟಿ ರೂ. ವೆಚ್ಚ ಮಾಡಿ ಆಕರ್ಷಕವಾದ ಗಾಜಿನ ಮನೆಯನ್ನು ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಉಸ್ತುವಾರಿಯಲ್ಲಿ ನಿರ್ಮಿಸಲಾಗಿದೆ.
ಆದರೆ ಕಳೆದ ಆರೇಳು ತಿಂಗಳಿಂದ ಗಾಜಿನ ಮನೆ ಸಾರ್ವಜನಿಕ ಸೇವೆಗೂ ಸಮರ್ಪಣೆಗೊಂಡಿಲ್ಲ. ಲೋಕಾಯುಕ್ತ ಕೋರ್ಟ್ ಕೆರೆಯಂಗಳವನ್ನು ಉಳಿಸುವಂತೆ ಆದೇಶಿರುವುದರಿಂದ ತೋಟಗಾರಿಕೆ ಇಲಾಖೆ ಮುಂದೆ ಏನು ಮಾಡಬೇಕೆಂಬ ಚಿಂತೆಯಲ್ಲಿ ಮುಳುಗಿದೆ. ಹೀಗಾಗಿ ಆರೇಳು ತಿಂಗಳ ಹಿಂದೆಯೇ ಗಾಜಿನ ಮನೆ ನಿರ್ಮಾಣ ಆದರೂ ಅದರ ಸ್ಥಳ ಕೆರೆಯಂಗಳದಲ್ಲಿ ಇರುವುದರಿಂದ ಅದರ ಉದ್ಘಾಟನೆಗೂ ಅಧಿಕಾರಿಗಳು ಹಿಂದೆ ಮುಂದೆ ನೋಡುವಂತಾಗಿದೆ.
3.50 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಮನೆ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದು ಆರೇಳು ತಿಂಗಳು ಕಳೆದಿದ್ದು, ನಾವು ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿ ಗಾಜಿನ ಮನೆಯನ್ನು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಮುಖಾಂತರ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಭೂಮಿ ವಿವಾದ ಬಗ್ಗೆ ನಮಗೆ ಗೊತ್ತಿಲ್ಲ. ಕಾಮಗಾರಿ ಮುಗಿಸಿ ಇಲಾಖೆಗೆ ಒಪ್ಪಿಸಲಾಗಿದೆ.
-ಸಂತೋಷ್, ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಕೆರೆಯಂಗಳವನ್ನು ಬೇರೆ ಕಾರ್ಯಗಳಿಗೆ ಬಳಸಬಾರದು ಎಂದು ಕೆಲವರು ಲೋಕಾಯುಕ್ತ ಕೋರ್ಟ್‌ನಲ್ಲಿ ದಾವೆ ಹೂಡಿರುವುದರಿಂದ ಗಾಜಿನ ಮನೆ ಕಾಮಗಾರಿ ಮುಗಿದರೂ ನಾವು ಸದ್ಯಕ್ಕೆ ಏನು ಕ್ರಮ ವಹಿಸುತ್ತಿಲ್ಲ. ಸದ್ಯಕ್ಕೆ ಗಾಜಿನ ಮನೆ ಕಾಮಗಾರಿ ಪೂರ್ಣಗೊಂಡಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಮಗೆ ಪತ್ರ ಬರೆದು ನಿಮ್ಮ ವಶಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಆದರೆ ನಾವು ಇನ್ನೂ ನಮ್ಮ ಇಲಾಖೆ ವ್ಯಾಪ್ತಿಗೆ ಪಡೆದಿಲ್ಲ.
-ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ
* ಕಾಗತಿ ನಾಗರಾಜಪ್ಪ