5,394 ಅನರ್ಹ ಬಿಪಿಎಲ್‌ ಕಾರ್ಡ್‌ ಹಂಚಿಕೆ

Team Udayavani, Nov 9, 2019, 3:43 PM IST

ಚಿಕ್ಕಬಳ್ಳಾಪುರ: ಬಡವರು ಪಡೆಯಬೇಕಾದ ಬಿಪಿಎಲ್‌ ಪಡಿತರ ಕಾರ್ಡ್‌ಗಳನ್ನು ಜಿಲ್ಲೆಯಲ್ಲಿ ನಕಲಿ ದಾಖಲೆ ಕೊಟ್ಟು ಸರ್ಕಾರಿ ನೌಕರರು, ಸ್ಥಿತಿವಂತರು ಬರೋಬ್ಬರಿ 5,394 ಮಂದಿ ಪಡೆದುಕೊಂಡಿದ್ದಾರೆ. ಇದುವರೆಗೂ ಜಿಲ್ಲಾಡಳಿತ 4,294 ಬಿಪಿಎಲ್‌ ಕಾರ್ಡ್‌ ಗಳನ್ನು ಮಾತ್ರ ರದ್ದುಗೊಳಿಸಿದ್ದು ಇನ್ನೂ 1,100ಕಾರ್ಡ್‌ ರದ್ದುಗೊಳಿಸುವ ಪ್ರಕ್ರಿಯೆ ನಡೆಸಿದೆ.

ಜಿಲ್ಲೆಯಲ್ಲಿ ಇದುವರೆಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 109 ಎಎವೈ ಹಾಗೂ 5,285 ಬಿಪಿಎಲ್‌ ಸೇರಿ ಒಟ್ಟು 5,394 ಪಡಿತರ ಚೀಟಿ ಅಮಾ ನತುಪಡಿಸಲು ಗುರುತಿಸಲಾಗಿದೆ. ಈ ಪೈಕಿ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಅತಿ ಹೆಚ್ಚು ಎಎವೈ 37 ಹಾಗೂ 1,573 ಬಿಪಿಎಲ್‌ ಪಡಿತರ ಚೀಟಿಗಳನ್ನು ಅಕ್ರಮವಾಗಿ ಪಡೆಯಲಾಗಿದೆ. ನಂತರ ಗೌರಿಬಿದ ನೂರು ತಾಲೂಕಿನಲ್ಲಿ ಎಎವೈ 25 ಹಾಗೂ ಬಿಪಿಎಲ್‌ ಬರೋಬ್ಬರಿ 1,276 ಪಡಿತರ ಚೀಟಿ ಹಂಚಿಕೆ ಮಾಡ ಲಾಗಿದೆ. ಬಾಗೇಪಲ್ಲಿ ತಾಲೂಕು ಅಕ್ರಮ ಬಿಪಿಎಲ್‌ ಪಡೆದವರ ಸಂಖ್ಯೆ 834 ಇದ್ದರೆ ನಂತರ ಚಿಕ್ಕಬಳ್ಳಾ ಪುರದಲ್ಲಿ 714 ಬಿಪಿಎಲ್‌ ಕಾರ್ಡ್‌ಗಳನ್ನು ಹಂಚಿಕೆ ಮಾಡಲಾಗಿದೆ.

1,100 ಕಾರ್ಡ್‌ ರದ್ದು ಬಾಕಿ: ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಒಟ್ಟು 3,12,791 ಪಡಿತರ ಚೀಟಿ ಹಂಚಿಕೆ ಮಾಡಲಾಗಿದೆ. ಆ ಪೈಕಿ ಎಎವೈ ಪಡಿತರ ಚೀಟಿ ಸಂಖ್ಯೆ 13,487, ಬಿಪಿಎಲ್‌ ಪಡಿತರ ಚೀಟಿ ಸಂಖ್ಯೆ 2,93,408, ಎಪಿಎಲ್‌ ಪಡಿತರ ಚೀಟಿ ಸಂಖ್ಯೆ 4,897 ಹಂಚಿಕೆ ಆಗಿವೆ. ಆ ಪೈಕಿ ಜಿಲ್ಲೆಯಲ್ಲಿ ಒಟ್ಟು ಗುರುತಿಸಲಾಗಿರುವ 5,394 ಅನರ್ಹ ಕಾರ್ಡುಗಳ ಪೈಕಿ ಜಿಲ್ಲಾಡಳಿತ ಇದುವರೆಗೂ 4,294 ಅನರ್ಹ ಕಾರ್ಡ್‌ ಮಾತ್ರ ರದ್ದುಗೊಳಿಸಿದ್ದು ಉಳಿದಂತೆ ಬಾಗೇಪಲ್ಲಿ 170, ಚಿಂತಾಮಣಿ 400, ಗೌರಿಬಿದನೂರು 269, ಗುಡಿಬಂಡೆ 120, ಶಿಡ್ಲಘಟ್ಟ ತಾಲೂಕಿನಲ್ಲಿ 141 ಸೇರಿ ಒಟ್ಟು 1,100 ಅನರ್ಹ ಕಾರ್ಡ್‌ಗಳ ರದ್ದು ಬಾಕಿ ಇದೆ.

ಇವರು ಬಿಪಿಎಲ್‌ ಕಾರ್ಡ್‌ ಪಡೆಯುವಂತಿಲ್ಲ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಕಳೆದ ಆ.2ರಂದು ಹೊರಡಿಸಿರುವ ಸುತ್ತೋಲೆಯಲ್ಲಿ 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 1,31,79,911 ಕುಟುಂಬಗಳಿದ್ದು, ಜನಗಣತಿ ಮತ್ತು ರಾಜ್ಯಗಳ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಅಂಕಿ ಅಂಶ ಪರಿಗಣಿಸಿ, ರಾಜ್ಯದ ಗ್ರಾಮಂತರ ಪ್ರದೇಶದ ಶೇ.76.04 ಮತ್ತು ಪಟ್ಟಣ ಪ್ರದೇಶದ ಶೇ.49.36 ಫ‌ಲಾನುಭವಿಗಳನ್ನು ಮಾತ್ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಫಲಾನುಭವಿಗಳನ್ನಾಗಿ ಪರಿಗಣಿಸುವ ಗುರಿಯನ್ನು ಕೇಂದ್ರ ಸರ್ಕಾರದಿಂದ ನಿಗದಿಪಡಿಸಲಾಗಿದೆ.

ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯಕ್ತರು ಹೊರಡಿಸಿರುವ ಸುತ್ತೋಲೆ ಪ್ರಕಾರ ಕುಟುಂಬದ ವಾರ್ಷಿಕ ವರಮಾನ 1.20 ಲಕ್ಷ ರೂ, ಗಳಗಿಂತ ಹೆಚ್ಚು ವಾರ್ಷಿಕ ವರಮಾನ ಹೊಂದಿರುವ ಕುಟುಂಬ, ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಳಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬ, ದುಡಿಮೆಗೆ ಹೊರತುಪಡಿಸಿ ಸ್ವಂತ ನಾಲ್ಕು ಚಕ್ರದ ವಾಹನ, ಕಾರು, ಲಾರಿ, ಬಸ್‌, ಜೆಸಿಬಿ, ಹಾಗೂ ಇತರೆ ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬ, ಕುಟುಂಬದಲ್ಲಿ ಆದಾಯ ತೆರಿಗೆ ಪಾವತಿಸುವ ಸರ್ಕಾರಿ ನೌಕರಿಯಲ್ಲಿರುವ, ಖಾಸಗಿ ಕಂಪನಿ, ಸಹಕಾರ ಸಂಸ್ಥೆ, ಸ್ವಾಯತ್ತ ಸಂಸ್ಥೆಗಳಲ್ಲಿ, ಸರ್ಕಾರದ ಅಧೀನ ಮಂಡಳಿಗಳಲ್ಲಿ ಹುದ್ದೆ ಹೊಂದಿರುವ, ನಿವೃತ್ತ ವೇತನ  ಪಡೆಯುತ್ತಿರುವ ಕುಟುಂಬ, ಬ್ಯಾಂಕ್‌ ನೌಕರರು, ಆಸ್ಪತ್ರೆ ನೌಕರರು, ಕೆಎಸ್‌ಆರ್‌ಟಿಸಿ ನಿರ್ವಾಹಕರು ಮತ್ತು ಚಾಲಕರು, ವಕೀಲರು, ಆಡಿಟರ್, ಬೃಹತ್‌ ಅಂಗಡಿ, ಹೋಟೆಲ್‌ ವರ್ತಕರು, ಬಾಡಿಗೆದಾರರು, ಕಮೀಷನರ್‌ ಏಜೆಂಟ್‌ಗಳು ಸೇರಿ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅನರ್ಹರಾಗಿದ್ದಾರೆ.

ಮೃತರ 6,862 ಮಂದಿ ಹೆಸರು ತೆಗೆಯಲಾಗಿದೆ: ಜಿಲ್ಲೆಯಲ್ಲಿ ಪಡಿತರ ಚೀಟಿಗಳಲ್ಲಿ ಇದ್ದ ಸದಸ್ಯರು ನಿಧನ ಹೊಂದಿದ್ದರೂ ಪಡಿತರ ಕಾರ್ಡ್‌ಗಳಲ್ಲಿ ಹೆಸರು ಚಾಲ್ತಿಯಲ್ಲಿದ್ದ ಸುಮಾರು 6,862 ಮಂದಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತನ್ನ ದತ್ತಾಂಶದಿಂದ ತೆಗೆದು ಹಾಕಿದೆ. ಆ ಪೈಕಿ ಬಾಗೇಪಲ್ಲಿ 1,427, ಚಿಕ್ಕಬಳ್ಳಾಪುರದಲ್ಲಿ 1,265, ಚಿಂತಾಮಣಿ 988, ಗೌರಿಬಿದನೂರು 1,115, ಗುಡಿಬಂಡೆ 212, ಶಿಡ್ಲಘಟ್ಟದಲ್ಲಿ ಒಟ್ಟು 1,815 ಮಂದಿ ಸದಸ್ಯರು ಸೇರಿ ಒಟ್ಟು 6.862 ಮಂದಿ ನಿಧನ ಹೊಂದಿದ ಸದಸ್ಯರನ್ನು ಪಡಿತರ ಚೀಟಿಗಳಿಂದ ಹೆಸರನ್ನು ತೆರೆದು ಹಾಕಲಾಗಿದೆ.

ಸಲ್ಲಿಸಿದ್ದ 3.457 ಅರ್ಜಿ ತಿರಸ್ಕಾರ: ಒಂದು ಕಡೆ ಜಿಲ್ಲೆಯಲ್ಲಿ 5000 ಕ್ಕೂ ಅಧಿಕ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಿರುವ ಆಹಾರ ಇಲಾಖೆ ಮತ್ತೂಂದಡೆ ನಕಲಿ ದಾಖಲೆ ಸಲ್ಲಿಸಿ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ್ದ ಸುಮಾರು 3,457 ಮಂದಿ ಅರ್ಜಿ ತಿರಸ್ಕರಿಸಿದೆ. ಜಿಲ್ಲೆಯಲ್ಲಿ ಹೊಸದಾಗಿ 15,108 ಮಂದಿ ಆನ್‌ಲೈನ್‌ ಮೂಲಕ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು ಆ ಪೈಕಿ 9,783 ಮಂದಿಗೆ ಮಾತ್ರ ಹೊಸದಾಗಿ ಪಡಿತರ ಚೀಟಿ ವಿತರಿಸಲಾಗಿದೆ. ಉಳಿದಂತೆ 3,457 ಅರ್ಜಿ ತಿರಿಸ್ಕರಿಸಿದ್ದು ಒಟ್ಟು ಸಲ್ಲಿಕೆಯಾದ 15,108 ಅರ್ಜಿ ಪೈಕಿ 12,259 ಅರ್ಜಿ ವಿಲೇವಾರಿ ಮಾಡಿದ್ದು ಇನ್ನೂ 1,840 ಮಂದಿಗೆ ಹೊಸ ಪಡಿತರ ಚೀಟಿ ನೀಡಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ