ಬೋರ್‌ವೆಲ್ ನೀರು ಖಾಸಗಿಯಾಗಿ ಮಾರಾಟ
Team Udayavani, Mar 29, 2019, 1:07 PM IST
ಗೌರಿಬಿದನೂರು: ಸಾರ್ವಜನಿಕರ ನೀರಿನ ಸಮಸ್ಯೆಗಾಗಿ ಉಪಯೋಗಿಸಬೇಕಾದ ಬೋರ್‌ವೆಲ್ ನೀರನ್ನು ಖಾಸಗಿ ವ್ಯಕ್ತಿಯೋರ್ವ ಖಾಸಗಿಯಾಗಿ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಭರತ್ ರೆಡ್ಡಿ ತಹಶೀಲ್ದಾರ್ ಶ್ರೀನಿವಾಸ್ ಮತ್ತು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿ ಆಗ್ರಹಿಸಿದ್ದಾರೆ.
ಪ್ರಸ್ತುತ ಗೌರಿಬಿದನೂರು ನಗರಸಭೆಯು ಪುರಸಭೆಯಿಂದ ನಗರಸಭೆಯಾಗಿ ಮೇಲ್ದಜೆಗೇರಿದ ನಂತರ 23 ವಾರ್ಡ್‌ಗಳು 31 ವಾರ್ಡ್‌ಗಳಾಗಿ ಮಾರ್ಪಟ್ಟಿದ್ದು, ನಗರವು ಬೃಹದಾಕಾರವಾಗಿ ಬೆಳೆದು ಅಪಾರ ಜನಸಂಖ್ಯೆ ಹೊಂದಿರುವುದರಿಂದ ನಗರಸಭೆ ವ್ಯಾಪ್ತಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿದೆ.
ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲು ನಗರಸಭೆಯ ಬೋರ್‌ವೆಲ್‌ಗಳು ಬತ್ತಿರುವುದರಿಂದ ನೀರು ಪೂರೈಸುವುದು ಕಷ್ಟಸಾಧ್ಯವಾಗಿರುವ ಕಾರಣಕ್ಕಾಗಿ ಬಾಡಿಗೆ ಆಧಾರದ ಮೇಲೆ ಖಾಸಗಿ ಬೋರ್‌ವೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಂದು ವಾರದ ಹಿಂದೆ ಬೈಪಾಸ್ ರಸ್ತೆಯ ಸರ್ಕಾರಿ ಕೊಳವೆ ಬಾವಿಯಿಂದ ಖಾಸಗಿ ವ್ಯಕ್ತಿ ತನ್ನ ಅನುಕೂಲಕ್ಕಾಗಿ ಓರ್ವ ನಗರಸಭಾ ಸದಸ್ಯರ ಬೆಂಬಲದಿಂದ ಸಾರ್ವಜನಿಕರಿಗೆ ಸರಬರಾಜು ಮಾಡಬೇಕಾದ ನೀರನ್ನು ಖಾಸಗಿ ನೀರಿನ ಶೇಖರಣಾ ತೊಟ್ಟಿಗೆ ತುಂಬಿಸಿಕೊಂಡು ಟ್ಯಾಂಕರ್‌ಗಳ ಮೂಲಕ ಖಾಸಗಿಯಾಗಿ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಪಿಎಸ್ ಸ್ಥಗಿತ: ಟ್ಯಾಂಕರ್‌ಗಳಿಗೆ ಅಳವಡಿಸಿರುವ ಜಿಪಿಎಸ್‌ನ್ನು ಅವುಗಳು ಕೆಲಸ ಮಾಡದಂತೆ ಮಾಡಿದ್ದು, ಇದರಿಂದಾಗಿ ಇಲ್ಲಿನ ನಾಗರಿಕರಿಗೆ ಕುಡಿಯುವ ನೀರು ಹೇಗೆ, ಎಲ್ಲಿಗೆ ಸರಬರಾಜಾಗುತ್ತಿದೆ ಎಂಬುದು ತಿಳಿಯದಂತಾಗಿದೆ. ವಾಸ್ತವವಾಗಿ ಕೆಲವು ವಾರ್ಡ್‌ಗಳಲ್ಲಿ ನೀರು ಬಿಟ್ಟು ತಿಂಗಳುಗಳೇ ಕಳೆದಿದ್ದು, ಪ್ರತಿದಿನ ನೀರು ಬಾರದ ವಾರ್ಡ್‌ಗಳ ನಾಗರಿಕರು ನಗರಸಭೆ ಮಂದೆ ಪ್ರತಿಭಟನೆ ನಡೆಸುತ್ತಿರುವುದು ಸಾಮಾನ್ಯವಾಗಿದೆ.
ಸಹಾಯವಾಣಿ ಕೇಂದ್ರ: ತಿಂಗಳ ಹಿಂದೆ ನಗರಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ಕರೆದು ನಗರಸಭಾ ಸದಸ್ಯರ ಮುಖಾಂತರ ವಿಚಾರ ತಿಳಿದು ನಗರ ಪ್ರದಕ್ಷಿಣೆ ಮಾಡಿ ಜನರೊಂದಿಗೆ ಮಾತುಕತೆ ನಡೆಸಿ ನೀರಿನ ತೀವ್ರತೆ ಅರಿತು ಜನರಿಗೆ ನೀರು ಕೊಡಲು ಸಹಾಯವಾಣಿ ಕೇಂದ್ರ ತೆರೆಯಲು ನಗರಸಭೆಗೆ ಆದೇಶದ ಬಳಿಕ ಆರಂಭಿಸಲಾಗಿದೆ.
ಸಾರ್ವಜನಿಕರು ನೀರು ಬೇಕೆಂದು ನಗರಸಭೆಯಲ್ಲಿ ನೋಂದಾಯಿಸಿಕೊಂಡರೆ ನೀರನ್ನು ಟ್ಯಾಂಕರ್ ಮುಖಾಂತರ ಕಳುಹಿಸಬೇಕೆಂದು ಆದೇಶಿಸಿದ್ದು, ಜ.6 ರಿಂದ ಸಹಾಯವಾಣಿ ಆರಂಭವಾಗಿ ಈವರೆಗೂ ಸಹಾಯವಾಣಿ ಮುಖಾಂತರ ನೋಂದಾಯಿಸಿಕೊಂಡಿರುವ ಸಾರ್ವಜನಿಕರಿಗೆ ನೀರು ಕಳುಹಿಸುತ್ತಿಲ್ಲ. ನಗರಸಭೆಯ ಆಡಳಿತವನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಾರ್ಡ್‌ಗಳಿಗೆ ಮಾತ್ರ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
10ರಿಂದ 15 ಟ್ಯಾಂಕರ್: ಪ್ರಸ್ತುತ 31 ಟ್ಯಾಂಕರ್‌ಗಳ ನೀರು ಸರಬರಾಜು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ ಟೆಂಡರ್ ಪಡೆದಿರುವ ವ್ಯಕ್ತಿ 31 ಟ್ಯಾಂಕರ್ ನೀಡದೆ ಕೇವಲ 10 ರಿಂದ 15 ಟ್ಯಾಂಕರ್ ನೀರು ಮಾತ್ರ ಸರಬರಾಜು ಮಾಡುತ್ತಿದ್ದು, ಈ ಟೆಂಡರ್ ಪಡೆದಿರುವ ವ್ಯಕ್ತಿ ಬೇನಾಮಿ ನೀರು ಸರಬರಾಜುಗಾರನ ಹೆಸರಿನಲ್ಲಿ ಸರಬರಾಜು ಕಾರ್ಯಾದೇಶ ಪಡೆದಿದ್ದು, ಈತನ ಹೆಸರಿನಲ್ಲಿ ಯಾವುದೇ ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ಇಲ್ಲ.
31 ಟ್ಯಾಂಕರ್ ನೀರನ್ನು ಸರಬರಾಜು ಮಾಡಲು ಕಾರ್ಯಾದೇಶ ಪಡೆದ ಈತ ಖಾಸಗಿಯವರಿಗೆ ನೀರು ಮಾರಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಈತನಿಗೆ ನೋಟಿಸ್ ನೀಡಿ ಸಾರ್ವಜನಿಕರಿಗೆ ದಿನವಿಡೀ 31 ಟ್ಯಾಂಕರ್ ನೀರು ಸರಬರಾಜು ಮಾಡುವಂತೆ ಆದೇಶ ನೀಡಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಕೊಡದಿರುವ ನೀರಿನ ಬಿಲ್‌ಗಳನ್ನು ತಡೆ ಹಿಡಿಯಬೇಕು ಮತ್ತು ಆನ್‌ಲೈನ್ ಮುಖಾಂತರ ನೋಂದಣಿ ಮಾಡಿಕೊಂಡಿರುವವರಿಗೆ ನೀರು ಕಳುಹಿಸಿದೆ. ತಮಗೆ ಬೇಕಾದ ವ್ಯಕ್ತಿಗಳಿಗೆ ಮಾತ್ರ ಕಳುಹಿಸಿ ಮೋಸ ಮಾಡುತ್ತಿರುವ ಟ್ಯಾಂಕರ್ ಬಿಲ್‌ಗಳನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಭರತ್ ರೆಡ್ಡಿ ಅವರು ನೀಡಿರುವ ದೂರನ್ನು ಗೌರಿಬಿದನೂರು ನಗರಸಭೆ ಆಯುಕ್ತ ಉಮಾಕಾಂತ್ ಅವರಿಗೆ ಕಳುಹಿಸಿ ಸೂಕ್ತ ಪ್ರತ್ಯುತ್ತರ ನೀಡುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ದೂರುಗಳು ಬರದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
-ಶ್ರೀನಿವಾಸ್, ತಹಶೀಲ್ದಾರ್, ಗೌರಿಬಿದನೂರು
ತಹಶೀಲ್ದಾರ್ ಅವರಿಂದ ಬಂದಿರುವ ದೂರನ್ನು ಪರಿಶೀಲಿಸಲಾಗಿದ್ದು, ಯಾವುದೇ ರೀತಿಯ ದುರುಪಯೋಗ ಆಗುತ್ತಿಲ್ಲ. ಆದರೂ ಸಹ ನೀರಿನ ದೂರಿನ ಬಗ್ಗೆ ತಹಶೀಲ್ದಾರ್‌ಗೆ ಶನಿವಾರದಂದು ಲಿಖಿತವಾಗಿ ವರದಿ ಸಲ್ಲಿಸಲಾಗುವುದು.
-ಉಮಾಕಾಂತ್, ನಗರಸಭೆ ಆಯುಕ್ತರು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444