ಕೋಚಿಮುಲ್ ಚುನಾವಣೆ: ಡೇರಿ ಅಧ್ಯಕ್ಷರಿಗೆ ಪ್ರವಾಸ ಭಾಗ್ಯ

Team Udayavani, May 10, 2019, 12:19 PM IST

ಲೋಕಸಭೆ ಚುನಾವಣೆಯ ಅಬ್ಬರ ಇನ್ನೂ ಆರಿಲ್ಲ, ಫ‌ಲಿತಾಂಶ ಪ್ರಕಟಕ್ಕೆ ದಿನಗಣನೆ ಶುರುವಾಗಿದ್ದು, ಜಿಲ್ಲಾದ್ಯಂತ ಸೋಲುಗೆಲುವಿನ ಲೆಕ್ಕಾಚಾರದ ಬಗ್ಗೆ ಮಾತು ನಡೆಯುತ್ತಿದೆ. ಇದರ ನಡುವೆಯೇ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿಷ್ಠಿತ ಸಹಕಾರಿ ರಂಗದ ದೈತ್ಯ ಸಂಸ್ಥೆಯಾಗಿರುವ ಕೋಚಿಮುಲ್ ಹಾಲು ಒಕ್ಕೂಟ ಆಡಳಿತ ಮಂಡಳಿ ಚುನಾವಣೆಗೆ ಕೇವಲ ಮೂರು ದಿನ ಮಾತ್ರ ಬಾಕಿ ಇದ್ದು, ಜಿಲ್ಲೆಯಲ್ಲಿ ಚುನಾವಣಾ ಅಖಾಡಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಈಗ ಮತದಾರರ ಮನ ಸೆಳೆಯಲು ಸದ್ದಿಲ್ಲದೇ ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ. ಸೋಮವಾರ ನಡೆಯಲಿರುವ ಮತದಾನಕ್ಕೆ ಜಿಲ್ಲೆಯ ಹಲವು ತಾಲೂಕುಗಳಲ್ಲಿನ ಡೇರಿ ಅಧ್ಯಕ್ಷರನ್ನು ವಿರೋಧಿಗಳ ಕೈಗೆ ಸಿಗದಂತೆ ಅಭ್ಯರ್ಥಿಗಳು ಪ್ರಭಾಸ ಭಾಗ್ಯ ಕಲ್ಪಿಸಿದ್ದು, ಕೋಚಿಮುಲ್ ಸಮರದ ಕಹಳೆ ಈಗ ತಾರಕಕ್ಕೇರಿದೆ.

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಜಿಲ್ಲೆಯ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿರುವ ಬೆನ್ನಲ್ಲೇ, ಅಖಾಡದಲ್ಲಿರುವ ಅಭ್ಯರ್ಥಿಗಳು ಗೆಲುವಿಗಾಗಿ ಪಣ ತೊಟ್ಟು ಆಯಾ ಕ್ಷೇತ್ರಗಳಲ್ಲಿರುವ ಡೇರಿ ಅಧ್ಯಕ್ಷರಿಗೆ ಪ್ರವಾಸ ಭಾಗ್ಯ ಕಲ್ಪಿಸಿರುವುದು ಈಗ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮೂವರು ಅವಿರೋಧ ಆಯ್ಕೆ: ಜಿಲ್ಲೆಯ ಒಟ್ಟು ಆರು ತಾಲೂಕುಗಳಿಂದ ತಲಾ ಒಬ್ಬರು ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಒಬ್ಬರು ಸೇರಿ ಒಟ್ಟು ಆರು ಜನ ನಿರ್ದೇಶಕರಾಗಿ ಆಯ್ಕೆಗೊಳ್ಳಬೇಕಿದೆ. ಆದರೆ ಈಗಾಗಲೇ ಜಿಲ್ಲೆಯ ಮೂವರು ಅಭ್ಯರ್ಥಿ ಗಳು ಅವಿರೋಧವಾಗಿ ಆಯ್ಕೆಗೊಳ್ಳುವ ಮೂಲಕ ಆರಂಭದಲ್ಲಿಯೇ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಉಳಿದಂತೆ ಜಿಲ್ಲೆಯ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಕೋಚಿಮುಲ್ ಚುನಾವಣೆ ರಂಗೇರಿದೆ.

ಜಿಲ್ಲೆಯ ಇತರೇ ತಾಲೂಕುಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಈ ಮೂರು ತಾಲೂಕುಗಳಲ್ಲಿ ಸಹಕಾರಿ ಕ್ಷೇತ್ರ ಸಾಕಷ್ಟು ಪ್ರಬಲ ವಾಗಿದೆ. ಹೀಗಾಗಿಯೇ ಇಲ್ಲಿ ಕೋಚಿಮುಲ್ ಚುನಾ ವಣೆ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದೆ. ಚುನಾವಣೆಯ ಮತದಾರರಾಗಿರುವ ಡೇರಿ ಅಧ್ಯಕ್ಷರಿಗೆ ಈಗ ಎಲ್ಲಿಲ್ಲದ ಬೇಡಿಕೆ, ಮರ್ಯಾದೆ ಸಿಗುತ್ತಿದೆ.

ದೇಗುಲದ ಹೆಸರಲ್ಲಿ ಪ್ರವಾಸ: ಚುನಾವಣೆಗೆ ದಿನಗಣನೆ ಶುರವಾದಂತೆ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಬೇಕಾದ ಡೇರಿ ಅಧ್ಯಕ್ಷರನ್ನು ಒಗ್ಗೂಡಿಸಿ ಕೊಂಡು ಪ್ರವಾಸ ಹೊರಟಿದ್ದಾರೆ. ಕೆಲವರು ಪ್ರವಾಸ ಅಂತ ಹೇಳಿದರೆ ಬರುವುದಿಲ್ಲ ಎಂದು ಹೇಳಿ ಐತಿ ಹಾಸಿಕ ದೇವಾಲಯಗಳ ದರ್ಶನಕ್ಕೆಂದು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.

ಮತ್ತೆ ಕೆಲವರನ್ನು ಮೋಜು, ಮಸ್ತಿಗಾಗಿಯೇ ನಿಗೂಢ ಸ್ಥಳಗಳಿಗೆ ಹೋಟೆಲ್, ರೆಸಾರ್ಟ್‌ಗಳಿಗೆ ಕರೆದುಕೊಂಡು ಹೋಗಿದ್ದಾರೆ. ಚುನಾವಣೆಯಲ್ಲಿ ಸೀಮಿತ ಮತದಾರರು ಇರುವುದರಿಂದ ಅಭ್ಯರ್ಥಿ ಗಳಿಗೆ ಒಂದೊಂದು ಮತವೂ ಕಡ ಪ್ರಾಮುಖ್ಯತೆ ಪಡೆದಿರುತ್ತದೆ.

ಚುನಾವಣೆಯಲ್ಲಿ ಬಹಳಷ್ಟು ಹಾಲಿ ನಿರ್ದೇಶಕರು ಹಾಗೂ ಕಳೆದ ಬಾರಿ ಸೋತಿರುವ ಅಭ್ಯರ್ಥಿಗಳು ಮತ್ತೆ ಪ್ರಬಲ ಎದುರಾಳಿಗಳಾಗಿರುವುದರಿಂದ ಚುನಾ ವಣೆ ತೀವ್ರ ಪೈಪೋಟಿಯಿಂದ ಕೂಡಿದ್ದು, ಚಿಕ್ಕಬಳ್ಳಾ ಪುರ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕಿ ನಲ್ಲಿರುವ ಮತದಾರರನ್ನು ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರವಾಸ ಕರೆದುಕೊಂಡು ಹೋಗಿ ವಿವಿಧ ಆಸೆ, ಆಮಿಷ ಒಡ್ಡುತ್ತಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

3 ತಾಲೂಕುಗಳಲ್ಲಿ ಕದನ ಕುತೂಹಲ: ಚಿಕ್ಕಬಳ್ಳಾ ಪುರ: ತಾಲೂಕಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳ ನಡುವೆ ಗದ್ದುಗೆಗೆ ಗುದ್ದಾಟ ಜೋರಾಗಿ ನಡೆಯುತ್ತಿದೆ. ಎರಡು ಕಡೆಯವರು ತಮ್ಮ ತಮ್ಮ ಬೆಂಬಲಿತ ಡೇರಿ ಅಧ್ಯಕ್ಷರನ್ನು ಪ್ರವಾಸ ಕರೆದುಕೊಂಡು ಹೋಗಿದ್ದಾರೆ. ಸತತ 6ನೇ ಬಾರಿಗೆ ಕೋಚಿಮುಲ್ ಚುನಾವಣೆಗೆ ಕಾಂಗ್ರೆಸ್‌ನಿಂದ ಕೆ.ವಿ. ನಾಗರಾಜ್‌ ಸ್ಪರ್ಧೆ ಮಾಡಿದರೆ ಜೆಡಿಎಸ್‌ನಿಂದ ಭರಣಿ ವೆಂಕಟೇಶ್‌ ಕಣದಲ್ಲಿದ್ದಾರೆ.

ಶಿಡ್ಲಘಟ್ಟ: ತಾಲೂಕಿನಲ್ಲಿ ಹಾಲಿ ನಿರ್ದೇಶಕ ಜೆಡಿಎಸ್‌ನ ಬಂಕ್‌ ಮುನಿಯಪ್ಪ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ಇವರ ವಿರುದ್ಧ ಜಿಪಂ ಮಾಜಿ ಅಧ್ಯಕ್ಷೆ ವಿನುತಾರ ಪತಿ ಶ್ರೀನಿವಾಸ್‌ ಅಖಾಡಕ್ಕೆ ಇಳಿದಿದ್ದು, ಕಳೆದ ಬಾರಿ ಮುನಿಯಪ್ಪ ವಿರುದ್ಧ ಸೋತಿದ್ದ ಕೋಚಿ ಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ಅಭ್ಯರ್ಥಿ ಆಗದಿರುವುದು ಕುತೂಹಲ ಕೆರಳಿಸಿದೆ.

ಚಿಂತಾಮಣಿ: ಮಾಜಿ ಶಾಸಕ ಸುಧಾಕರ್‌ ಹಾಗೂ ಹಾಲಿ ಶಾಸಕ ಕೃಷ್ಣಾರೆಡ್ಡಿ ಬೆಂಬಲಿಗರ ನಡುವೆ ಕಾದಾಟ ಜೋರಾಗಿದೆ. ಎರಡನೇ ಬಾರಿಗೆ ಸುಧಾಕರ್‌ ಬೆಂಬಲಿತ ಊಲವಾಡಿ ಅಶ್ವತ್ಥ ನಾರಾಯಣ ಬಾಬು ಅಖಾಡಕ್ಕೆ ಇಳಿದಿದ್ದಾರೆ. ಈ ಹಿಂದೆ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಕಳೆದ ಬಾರಿ ಸೋತಿದ್ದ ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜ ಗೋಪಾಲ್ ಮತ್ತೆ ಬಾಬು ವಿರುದ್ಧ ಸ್ಪರ್ಧಿಸಿದ್ದಾರೆ.

ಗೆಲುವಿಗಾಗಿ ನಾನಾ ರೀತಿಯ ತಂತ್ರ, ಪ್ರತಿ ತಂತ್ರ ಗಳನ್ನು ಹೆಣಿಯುತ್ತಿರುವುದರಿಂದ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರವಾಸ ಭಾಗ್ಯ ಕಲ್ಪಿಸಿದ್ದು, ಕೆಲವರು ಕೇರಳ, ತಮಿಳುನಾಡು, ಮಹಾರಾಷ್ಟ್ರಕ್ಕೆ ಪ್ರವಾಸ ಹೋಗಿದ್ದಾರೆ. ಮತ್ತೆ ಕೆಲವರು ಬೆಂಗಳೂರು ಸುತ್ತಮುತ್ತಲಿನ ಐಷರಾಮಿ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಉಳಿದುಕೊಂಡಿದ್ದಾರೆ.

ಒಟ್ಟಿನಲ್ಲಿ ವಾರ್ಷಿಕ ಕೋಟ್ಯಂತರ ರೂ. ಆರ್ಥಿಕ ವಹಿವಾಟು ನಡೆಸುವ ಕೋಚಿಮುಲ್ ಆಡಳಿತ ಮಂಡಳಿ ಚುನಾವಣೆ ಈಗ ಜಿಲ್ಲಾದ್ಯಂತ ಸದ್ದು ಮಾಡುತ್ತಿದ್ದು, ರಾಜಕೀಯ ಪಕ್ಷಗಳು ಅದರಲ್ಲೂ ಜಿಲ್ಲೆ ಯಲ್ಲಿ ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ನಡುವೆ ಹೆಚ್ಚು ಪೈಪೋಟಿ ಇರಲಿದೆ.

ಕೋಚಿಮುಲ್ಗೆ ಮೂವರು ಅವಿರೋಧ ಆಯ್ಕೆ
ಸದ್ಯ ಜಿಲ್ಲೆಯಿಂದ ಕೋಚಿ ಮುಲ್ ಆಡಳಿತ ಮಂಡಳಿಗೆ ಈಗಾಗಲೇ ಮೂವರು ಅಭ್ಯರ್ಥಿಗಳು ಅವಿರೋಧ ವಾಗಿ ಆಯ್ಕೆಗೊಂಡಿದ್ದಾರೆ. ಆ ಪೈಕಿ ಗೌರಿಬಿದನೂರು ತಾಲೂಕಿನ ಹಾಲಿ ನಿರ್ದೇಶಕ ರಾಗಿದ್ದ ಕೋಚಿಮುಲ್ ಮಾಜಿ ಅಧ್ಯಕ್ಷ ಜೆ.ಕಾಂತ ರಾಜು ಎರಡನೇ ಬಾರಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ನಿರ್ದೇಶಕಿಯಾಗಿದ್ದ ಸುನಂದಮ್ಮ ಸಹ ಎರಡನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಗುಡಿಬಂಡೆ ತಾಲೂಕಿನಿಂದ ಹಾಲಿ ನಿರ್ದೇಶಕರಾಗಿದ್ದ ಅಶ್ವತ್ಥರೆಡ್ಡಿ ವಿರುದ್ಧ ಅಖಾಡಕ್ಕೆ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಕೊನೆ ಗಳಿಗೆಯಲ್ಲಿ ಉಮೇದುವಾರಿಕೆ ಹಿಂಪಡೆದ ಹಿನ್ನೆಲೆಯಲ್ಲಿ ಈ ಮೂವರು ಕಾಂಗ್ರೆಸ್‌ ಬೆಂಬಲಿತರಾಗಿ ಅವಿರೋಧವಾಗಿ ಆಯ್ಕೆಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಕಾಗತಿ ನಾಗರಾಜಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ