ವ್ಯವಸ್ಥಿತ, ಪಾರದರ್ಶಕ ಚುನಾವಣೆಗೆ ಸಹಕರಿಸಿ

Team Udayavani, Apr 11, 2019, 6:42 AM IST

ಚಿಕ್ಕಬಳ್ಳಾಪುರ: ಮತದಾನದ ವೇಳೆ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಲೋಕಸಭಾ ಚುನಾವಣೆಯನ್ನು ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಸಬೇಕು. ಯಾವುದೇ ಸಂದರ್ಭದಲ್ಲಿ ಗೊಂದಲಗಳಿದ್ದರೆ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಲೋಕಸಭಾ ಚುನಾವಣೆಗೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಅಂತಿಮ ಹಂತದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವಿಎಂ ಹಾಗೂ ವಿವಿಪ್ಯಾಟ್‌ ಬಳಕೆ ಕುರಿತು ಮಾಹಿತಿ ನೀಡಿದರು.

ಪ್ರಾಯೋಗಿಕವಾಗಿ ಮಾಹಿತಿ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಮಸ್ಟರಿಂಗ್‌ ದಿನ ಮತ್ತು ಮತಗಟ್ಟೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕಾರ್ಯ ಹಾಗೂ ಡಿಮಸ್ಟರಿಂಗ್‌ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಅಣಕು ಪ್ರದರ್ಶನದ ಮೂಲಕ ಅಂಚೆ ಮತಪತ್ರ, ಮಸ್ಟರಿಂಗ್‌, ಡಿಮಸ್ಟರಿಂಗ್‌ ಕಾರ್ಯನಿರ್ವಹಣೆ ಹಾಗೂ ಕಂಟ್ರೋಲ್‌ ಯೂನಿಟ್‌, ಬ್ಯಾಲೆಟ್‌ ಯೂನಿಟ್‌, ವಿವಿಪ್ಯಾಟ್‌ ಮತ್ತಿತರ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.

ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ಮತಗಟ್ಟೆ ಕೇಂದ್ರದಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಸುವ ನಿಟ್ಟಿನಲ್ಲಿ ತರಬೇತಿ ಪಡೆದು ಮತದಾನದ ದಿನದಂದು ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಸಬೇಕು. ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ಕೇಂದ್ರದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಸಬೇಕೆಂದು ಸೂಚಿಸಿದರು.

ಗೈರು ಆದಲ್ಲಿ ತಿಳಿಸಿ: ಮಸ್ಟರಿಂಗ್‌ ದಿನದಂದು ಮತಗಟ್ಟೆಯ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಾಗಬೇಕು. ಸಿಬ್ಬಂದಿಗಳನ್ನು ಸೇರಿಸಿಕೊಂಡು ಪರಸ್ಪರ ಪರಿಚಯ ಮಾಡಿಕೊಳ್ಳಬೇಕು. ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು. ಯಾವುದೇ ಮತಗಟ್ಟೆ ಅಧಿಕಾರಿ ಇತರೆ ಸಿಬ್ಬಂದಿ ಗೈರು ಆದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ತಿಳಿಸಬೇಕೆಂದು ಸೂಚಿಸಿದರು.

ನಿಯೋಜಿತ ಅಧಿಕಾರಿ ರಜೆ ಹೋದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು. ಮಸ್ಟರಿಂಗ್‌ ಪಟ್ಟಿಯಿಂದ ದೃಢಪಡಿಸಿಕೊಳ್ಳಬೇಕೆಂದು ಹೇಳಿ ವಿದ್ಯುನ್ಮಾನ ಯಂತ್ರ ಹಾಗೂ ವಿವಿಪ್ಯಾಟ್‌ ಮತಯಂತ್ರದ ಬಳಕೆ ಕುರಿತು ಪ್ರಾತ್ಯಕ್ಷಿಕೆಯನ್ನು ಉಪವಿಭಾಗಾಧಿಕಾರಿಗಳು ನೀಡಿದರು. ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಉಮಾಕಾಂತ್‌ ಇದ್ದರು.

24 ಕೊಠಡಿಗಳಲ್ಲಿ 800 ಮಂದಿಗೆ ತರಬೇತಿ: ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಪೋಲಿಂಗ್‌ ಮತಗಟ್ಟೆ ಅಧಿಕಾರಿಗಳು ಸೇರಿ 254, ಸಹಾಯಕ ಮತಗಟ್ಟೆಯ ಅಧಿಕಾರಿಗಳು 281, ಸಹಾಯಕ ಅಧಿಕಾರಿಗಳು 285, ಒಟ್ಟು 800 ಅಧಿಕಾರಿಗಳಿಗೆ 24 ಕೊಠಡಿಗಳಲ್ಲಿ ತರಬೇತಿ ಏರ್ಪಡಿಸಲಾಗಿತ್ತು. ಮತಗಟ್ಟೆ ಅಧಿಕಾರಿಗಳ ಗೊಂದಲಗಳಿಗೆ ಉಪ ವಿಭಾಗಾಧಿಕಾರಿ ಉತ್ತರಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ