ಜಿಲ್ಲೆಯಲ್ಲಿ ಕೃಪೆ ತೋರದ ಭರಣಿ

Team Udayavani, May 13, 2019, 3:00 AM IST

ಚಿಕ್ಕಬಳ್ಳಾಪುರ: ಭರಣಿ ಮಳೆ ಬಿದ್ದರೆ ಧರಣಿಯೆಲ್ಲಾ ಬೆಳೆ ಎಂಬ ಗಾದೆ ಮಾತು ನಂಬಿದ್ದ ರೈತರಿಗೆ ಇದೀಗ ಭರಣಿ ಮಳೆ ಕೈ ಕೊಟ್ಟಿರುವುದರಿಂದ ಜಿಲ್ಲೆಯ ರೈತರಲ್ಲಿ ಸಹಜವಾಗಿಯೇ ಮತ್ತೆ ಬರದ ಕರಿನೆರಳಿನ ಛಾಯೆ ಆವರಿಸಿದ್ದು, ಮುಂಗಾರು ಹಂಗಾಮಿನಲ್ಲಿ ರೈತರಲ್ಲಿ ಭರಪೂರ ಆಶಾಭಾವನೆ ಮೂಡಿಸುತ್ತಿದ್ದ ಭರಣಿ ಈ ವರ್ಷವು ಭರಣಿ ಮಳೆ ಆಗದಿರುವುದು ಜಿಲ್ಲೆಯ ರೈತರನ್ನು ತೀವ್ರ ಚಿಂತೆಗೀಡು ಮಾಡಿದೆ.

ಮಳೆಯ ದರ್ಶನವಾಗಿಲ್ಲ: ಸತತ ಆರೇಳು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಮಳೆಗಾಗಿ ರೈತಾಪಿ ಜನ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ರೈತರನ್ನು ಕಂಗಾಲಾಗಿಸಿದ್ದು, ಭರಣಿ ಮಳೆ ಮುಗಿದು ಕೃತಿಕ ಪ್ರವೇಶಿಸಿದರೂ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯ ದರ್ಶನವಾಗಿಲ್ಲ.

ಸಾಮಾನ್ಯವಾಗಿ ಭರಣಿ ಮಳೆ ಪ್ರತಿ ವರ್ಷ ಭರಪೂರ ಸುರಿದು ಉತ್ತಮ ಮಳೆ ಬೆಳೆಯಾಗುವ ಮುನ್ಸೂಚನೆ ನೀಡಿ ಹೋಗುತ್ತದೆ ಎಂಬುದು ರೈತರ ನಂಬಿಕೆ. ಅದಕ್ಕಾಗಿ ಭರಣಿ ಮಳೆ ಬಿದ್ದರೆ ಧರಣಿಯೆಲ್ಲಾ ಬೆಳೆ ಎಂಬ ಗಾದೆ ಮಾತು ಗ್ರಾಮೀಣ ರೈತರಲ್ಲಿ ಕೇಳಿ ಬರುತ್ತದೆ.

ಆದರೆ ಈ ವರ್ಷ ಭರಣಿ ಮಳೆ ಜಿಲ್ಲೆಯಲ್ಲಿ ಕಾಣಸಿಕೊಳ್ಳದೇ ಅಲ್ಲಲ್ಲಿ ತುಂತುರು ಹನಿಗಳಿಗೆ ಅಷ್ಟೇ ಸೀಮಿತವಾಗಿ ಈಗ ಕೃತಿಕ ಮಳೆ ಪ್ರವೇಶಿಸಿದೆ. ಭರಣಿ ಮಳೆ ಆದ ಕೂಡಲೇ ರೈತರು ಹೊಲಗದ್ದೆಗಳಿಗೆ ಗೊಬ್ಬರ ಸಾಗಿಸಿ ಬಿತ್ತನೆಗೆ ಭೂಮಿಯನ್ನು ಹದಗೊಳಿಸಿಕೊಳ್ಳುವುದು ವಾಡಿಕೆ. ಆದರೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯಕ್ಕೂ ಇನ್ನೂ 15 ದಿನಗಳ ಕಾಲಾವಕಾಶ ಇದ್ದರೂ ಮಳೆಯಾಗದೇ ಅರ್ಧಕ್ಕೆ ಅರ್ಧ ಭೂಮಿ ಹದಗೊಳಿಸುವ ಕಾರ್ಯ ಕುಂಠಿತವಾಗಿದೆ.

1.54 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ: ಜಿಲ್ಲೆಯಲ್ಲಿ ಕೃಷಿ ಇಲಾಖೆ ಈ ವರ್ಷ 1.54 ಲಕ್ಷ ಹೇಕ್ಟರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಆದರೆ ಇದುವರೆಗೂ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದೇ ಬಿತ್ತನೆ ಕಾರ್ಯಕ್ಕೆ ಭೂಮಿ ಹದ ಮಾಡಿಕೊಳ್ಳುವ ಕಾರ್ಯ ನೆನೆಗುದಿಗೆ ಬಿದ್ದಿರುವುದು ಕೃಷಿ ಇಲಾಖೆಯನ್ನು ಚಿಂತೆಗೀಡು ಮಾಡಿದೆ.

ಕಳೆದ ವರ್ಷ ಕೂಡ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಆಹಾರ ಪದಾರ್ಥಗಳು ಉತ್ಪಾದನೆಗೊಳ್ಳದೇ ಕಂಗಾಲಾಗಿದ್ದ ಕೃಷಿ ಇಲಾಖೆ, ಈ ಬಾರಿ ಉತ್ತಮ ಮುಂಗಾರು ನಿರೀಕ್ಷಿಸಿದ್ದರೂ ಇದುವರೆಗೂ ಜಿಲ್ಲೆಯಲ್ಲಿ ಸರಾಸರಿ ಮಳೆ ಜನವರಿಯಿಂದ ಮೇ 8ರವರೆಗೂ 54.0 ಮೀ ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಜಿಲ್ಲೆಯಲ್ಲಿ 55.7 ಮೀ ಮೀ ಆಗಿತ್ತು.

ಮಳೆಗಾಗಿ ಜಾತ್ರೆ, ತಂಬಿಟ್ಟಿನ ಮೆರವಣಿಗೆ: ಜಿಲ್ಲಾದ್ಯಂತ ಈ ಬಾರಿ ವರುಣನ ಕೃಪೆ ತೋರುವಂತೆ ಎಲ್ಲಿ ನೋಡಿದರೂ ಈಗ ಜನತೆ ಗ್ರಾಮ ದೇವತೆಗಳ ಜಾತ್ರೆ, ತಂಬಿಟ್ಟಿನ ಮೆರವಣಿಗೆ, ದೀಪೋತ್ಸವ, ವಿಶೇಷ ಪೂಜಾ ಕೈಂಕರ್ಯಗಳನ್ನು ಆಚರಿಸುತ್ತಿದ್ದು, ದಿನ ಬೆಳಗಾದರೆ ಒಂದೊಂದು ಊರಿನಲ್ಲಿ ಗ್ರಾಮ ದೇವತೆಗಳ ಮೆರವಣಿಗೆ ನಡೆಸುವ ಮೂಲಕ ಗ್ರಾಮಸ್ಥರು ಶ್ರದ್ದಾಭಕ್ತಿಯಿಂದ ಮಳೆಗಾಗಿ ಪ್ರಾರ್ಥಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ.

ಕುಡಿಯುವ ನೀರಿಗೆ ಹಾಹಾಕಾರ ತೀವ್ರ..: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಸಂಖ್ಯೆ 300 ರ ಗಡಿ ದಾಟಿವೆ. ದಿನ ಬೆಳೆಗಾದರೆ ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ, ಯಾವ ಕೊಳವೆ ಬಾವಿ ಕೈ ಕೊಡುತ್ತದೆಯೆಂಬ ಚಿಂತೆಯಲ್ಲಿ ಜಿಲ್ಲಾಡಳಿತ ಇದೆ. ಮಳೆಗಾಲದಲ್ಲಾದರೂ ಕುಡಿವ ನೀರಿನ ಸಮಸ್ಯೆ ನೀಗಬಹುದೆಂಬ ಲೆಕ್ಕಾಚಾರ ಮಳೆ ಕೊರತೆಯಿಂದ ಉಲ್ಟಾ ಹೊಡೆದಿದ್ದು, ಕುಡಿವ ನೀರಿನ ಸಮಸ್ಯೆ ಬಗೆಹರಿಸುವುದೇ ಜಿಲ್ಲಾಡಳಿತಕ್ಕೆ ನಿತ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಭರಣಿ ಮಳೆ ಬಿದ್ದರೆ ಉಳಿದ ಎಲ್ಲಾ ಮಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ನಮ್ಮದು. ಆದರೆ ಭರಣಿ ಮಳೆ ಈ ಬಾರಿಯು ರೈತರ ಕೈ ಕೊಟ್ಟಿದೆ. ಈ ವರ್ಷವು ಬರಗಾಲ ಎದುರಾಗುತ್ತಾ ಎಂಬ ಆಂತಕ ಕಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಜನ, ಜಾನುವಾರುಗಳಿಗೆ ಕುಡಿವ ನೀರಿನ ಕೊರತೆ ಉಂಟಾಗಿದೆ. ಬಿತ್ತನೆ ಕಾರ್ಯಕ್ಕೆ ಕೇವಲ 15 ದಿನ ಮಾತ್ರ ಅವಕಾಶ ಇದೆ. ಮಳೆಗಾಗಿ ಎದುರು ನೋಡುವಂತಾಗಿದೆ.
-ಬಿ.ಎನ್‌.ಮುನಿಕೃಷ್ಣಪ್ಪ, ಪ್ರಗತಿಪರ ರೈತ, ನಾಯನಹಳ್ಳಿ


ಈ ವಿಭಾಗದಿಂದ ಇನ್ನಷ್ಟು

  • ಚಿಕ್ಕಬಳ್ಳಾಪುರ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ- 2009ರನ್ವಯ 6-14 ವಯೋಮಾನದ ಎಲ್ಲಾ ಮಕ್ಕಳಿಗೆ ತಾರತಮ್ಯವಿಲ್ಲದೇ ಕಡ್ಡಾಯ, ಉಚಿತ ಹಾಗೂ...

  • ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಫ‌ಲಿತಾಂಶ ಹೊರ ಬೀಳಲು ಕ್ಷಣಗಣನೆ ಆರಂಭಗೊಂಡಿದ್ದು, ಸತತ...

  • ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆರೋಗ್ಯದ ಮೇಲೆ ಮಾರಕವಾಗಿ ಪರಿಣಮಿಸುತ್ತಿರುವ ಡೆಂಘೀ ಹಾಗೂ ಚಿಕೂನ್‌ಗುನ್ಯ ಮತ್ತಿತರ ಸಾಂಕ್ರಮಿಕ ರೋಗಗಳನ್ನು...

  • ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಸ್ತುತ ಶೇ.45 ರಷ್ಟು ಮಳೆ ಕೊರತೆ ಉಂಟಾಗಿ ಭೀಕರ ಬರಗಾಲ ಉಂಟಾಗಿರುವ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ...

  • ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣಾ ಅಖಾಡದ ಮತ ಎಣಿಕೆಗೆ ಇನ್ನೂ ಕೇವಲ 24 ಗಂಟೆ ಮಾತ್ರ ಬಾಕಿ ಇದೆ. ಆದರೆ ಜಿಲ್ಲೆಯಲ್ಲಿ...

ಹೊಸ ಸೇರ್ಪಡೆ