ನೀರಿನ ಸಮಸ್ಯೆಗೆ ಕೊಳವೆಬಾವಿ ಕೊರೆಸುವುದೇ ಪರಿಹಾರವಲ್ಲ

Team Udayavani, Sep 1, 2019, 3:00 AM IST

ಚಿಕ್ಕಬಳ್ಳಾಪುರ: ನನ್ನ ಭೇಟಿಗೆ ಯಾವುದೇ ಸಮಯ ನಿಗದಿ ಇಲ್ಲ. ಜಿಲ್ಲೆಯ ಸಾರ್ವಜನಿಕರು ತಮ್ಮ ದೂರು ದುಮ್ಮಾನಗಳ ಬಗ್ಗೆ ಕಚೇರಿ ವೇಳೆಯಲ್ಲಿ ಮುಕ್ತವಾಗಿ ಭೇಟಿ ಮಾಡಬಹುದು. ನನ್ನ ಆದ್ಯತೆ ಶಿಕ್ಷಣ, ಆರೋಗ್ಯ, ಮಳೆ ನೀರಿನ ಸಂರಕ್ಷಣೆ. ನಾನು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದು, ಚಿಕ್ಕಬಳ್ಳಾಪುರ ಬರದ ಜಿಲ್ಲೆ ಎನ್ನುವುದು ನನಗೆ ಅರಿವಿದೆ. ಅಂತರ್ಜಲಕ್ಕೆ ಕಂಟಕವಾಗಿರುವ ನೀಲಿಗಿರಿ ತೆರವಿಗೆ ಆಂದೋಲನ ಆಗಬೇಕಿದೆ. ಇದು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಜಿಲ್ಲಾಧಿಕಾರಿ ಆರ್‌.ಲತಾ, ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ ಸ್ಪಷ್ಟ ಮಾತುಗಳು ಇವು.

ಮಳೆ ನೀರು ಸಂರಕ್ಷಣೆಗೆ ಒತ್ತು: ಜಿಲ್ಲೆಯಲ್ಲಿ ಮುಕ್ತವಾದ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುತ್ತೇವೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಶ್ರಮಿಸುತ್ತೇನೆ. ವಿಶೇಷವಾಗಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದ ಸುಧಾರಣೆ, ಆರೋಗ್ಯ, ಅಂತರ್ಜಲ ವೃದ್ಧಿಗೆ ಪೂರಕವಾಗಿ ಮಳೆ ನೀರು ಸಂರಕ್ಷಣೆಗೆ ಹೆಚ್ಚು ಒತ್ತು ಕೊಡಲಾಗುವುದು ಎಂದರು.

ಮಳೆ ನೀರು ಸದ್ಬಳಕೆ: ಜಿಲ್ಲೆಯ ಜನತೆಗೆ ಮೊದಲು ಕುಡಿಯುವ ನೀರು ಒದಗಿಸುವುದು ಜಿಲ್ಲಾಡಳಿತದ ಆದ್ಯತೆಯಾಗಿದೆ. ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನು ಕೊರೆಸುವುದೇ ಪರಿಹಾರವಲ್ಲ. ಮಳೆ ನೀರು ಸದ್ಬಳಕೆ ಮಾಡಿಕೊಂಡು ಬರ ಪರಿಸ್ಥಿತಿಯನ್ನು ಎದುರಿಸಬೇಕಿದೆ ಎಂದರು. ಈ ಹಿಂದೆ ನಾನು ಕಾರ್ಯನಿರ್ವಹಿಸಿದ ಜಿಲ್ಲೆಗಳಲ್ಲಿ ಜಲ ಮೂಲಗಳ ಸಂರಕ್ಷಣೆ ಹಾಗೂ ಮಳೆ ನೀರು ಸದ್ಬಳಕೆಗೆ ಒತ್ತು ಕೊಟ್ಟಿದ್ದೇನೆ. ರಾಮನಗರ ಜಿಪಂ ಸಿಇಒ ಆಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಿಇಒ ಆಗಿ ಸಾಕಷ್ಟು ಮಳೆ ನೀರು ಸದ್ಬಳಕೆ ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದೇವೆ.

ಈ ಕಾರ್ಯಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ ಎಂದರು. ಜಿಲ್ಲೆಯಲ್ಲಿ ಬರದ ಸಮಸ್ಯೆ ಇದೆ. ಇದಕ್ಕೆ ಪರಿಹಾರ ಅಂತರ್ಜಲ ವೃದ್ಧಿಗೊಳಿಸುವುದರ ಜೊತೆಗೆ ಮಳೆ ನೀರು ಸದ್ಬಳಕೆ ಮಾಡಿಕೊಳ್ಳುವುದೇ ಗುರಿ. ಜಿಲ್ಲೆಯ ಪ್ರತಿ ಮನೆಗೂ, ಕಟ್ಟಡಕ್ಕೂ ಮಳೆ ಕೊಯ್ಲು ಯೋಜನೆ ಅನುಷ್ಠಾನಗೊಳಿಸಬೇಕಿದೆ. ಇದಕ್ಕೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದರು.

ಫ‌ಲಿತಾಂಶ ಹೆಚ್ಚಳಕ್ಕೆ ಕ್ರಮ: ನಾವು ಹಾಕಿದ ಪರಿಶ್ರಮದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ ಸಾಕಷ್ಟು ವೃದ್ಧಿಯಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯ ಫ‌ಲಿತಾಂಶ ಹೆಚ್ಚಳಕ್ಕೆ ಒತ್ತು ಕೊಡಲಾಗುವುದು. ಇದಕ್ಕೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಬಿಇಒಗಳು, ಶಿಕ್ಷಕರು ಮುಖ್ಯವಾಗಿ ವಿದ್ಯಾರ್ಥಿಗಳು ಸಹಕರಿಸಬೇಕೆಂದರು. ಜಿಲ್ಲೆಯಲ್ಲಿ ಮಕ್ಕಳ ಅಪೌಷ್ಟಿಕತೆಯ ಬಗ್ಗೆ ಗಮನಹರಿಸಿ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಯುಳ್ಳ ಆಹಾರ ಪದಾರ್ಥಗಳನ್ನು ವಿತರಿಸಬೇಕು ಎಂದು ಸೂಚಿಸಿದರು.

ಸಮಸ್ಯೆಗಳ ಬಗ್ಗೆ ಮಾಹಿತಿ: ಮಾಧ್ಯಮ ಸಂವಾದದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕೇಂದ್ರದ ಪತ್ರಕರ್ತರು, ಪ್ರಮುಖವಾಗಿ ಅಕ್ರಮ ಗಣಿಗಾರಿಕೆ, ಮತಪಟ್ಟಿ ಪರಿಷ್ಕರಣೆಯಲ್ಲಿನ ಗೊಂದಲ, ಆಧಾರ್‌ ಕಾರ್ಡ್‌ ಪಡೆಯಲು ಸಾರ್ವಜನಿಕರು ಪಡುತ್ತಿರುವ ಸಂಕಷ್ಟ, 234ನೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವುದು, ಜಿಲ್ಲಾಸ್ಪತ್ರೆಯ ಅವ್ಯವಸ್ಥೆ, ಶಾಲೆಗಳಿಗೆ ಮೂಲ ಸೌಕರ್ಯ, ಜನಸ್ಪಂದನಾ ಸಭೆಗಳನ್ನು ಆಯೋಜಿಸುವಂತೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುವಂತೆ ಹಲವು ಸಲಹೆ ನೀಡಿದರು. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡುವಂತೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಕರೆ: ಜಿಲ್ಲೆಯ ಜನತೆಗೆ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸಬೇಕೆಂದು ನೂತನ ಜಿಲ್ಲಾಧಿಕಾರಿ ಆರ್‌.ಲತಾ ಮನವಿ ಮಾಡಿದರು. ಈಗಾಗಲೇ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶಾದ ಯೋಜನಾ ನಿರ್ದೇಶಕಿ ರೇಣುಕಾ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ಉಪ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕಿ ಮೈನಾಶ್ರೀ ಉಪಸ್ಥಿತರಿದ್ದರು.

ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಬೇಕು: ಜಿಲ್ಲೆಯಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ಸ್ನೇಹಿಯಾಗಿ ರೈತರ, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕು. ಇದರಿಂದ ರೈತರಲ್ಲಿ ಆಡಳಿತ ವ್ಯವಸ್ಥೆಯ ಬಗ್ಗೆ ಉತ್ತಮ ಭಾವನೆ ಉಂಟಾಗುತ್ತದೆ. ಅಧಿಕಾರಿಗಳು ಶಿಸ್ತು, ಸಮಯ ಪ್ರಜ್ಞೆಯಿಂದ ನಡೆದುಕೊಂಡು ಸಮಯಕ್ಕೆ ಸರಿಯಾಗಿ ಕಚೇರಿ ಕೆಲಸಕ್ಕೆ ಹಾಜರಾಗುವುದರಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ ಎಂಬ ಪ್ರಶ್ನೆಯೇ ಬರುವುದಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಬೇಜವಾಬ್ದಾರಿ ತೋರಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ನೀಲಿಗಿರಿ ತೆರವಿಗೆ ಜನಾಂದೋಲನ: ಅಂತರ್ಜಲ ಅಭಿವೃದ್ಧಿಗೆ ಕಂಟಕವಾಗಿರುವ ನೀಲಿಗಿರಿ ಮರಗಳನ್ನು ತೆರವುಗೊಳಿಸಲು ಆಂದೋಲನವಾಗಿ ಕಾರ್ಯಕ್ರಮ ರೂಪಿಸಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನೀಲಿಗಿರಿ ಮರಗಳನ್ನು ತೆರವುಗೊಳಿಸಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅದೇ ರೀತಿ ಜಿಲ್ಲೆಯಲ್ಲೂ ಕೂಡ ನೀಲಿಗಿರಿ ಮರಗಳ ತೆರವಿಗೆ ಒತ್ತು ಕೊಡಲಾಗುವುದು. ಕೆರೆ, ಕುಂಟೆಗಳಲ್ಲಿರುವ ಮರ, ಗಿಡಗಳನ್ನು ತೆರವುಗೊಳಿಸಿ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ