ಜಲಕ್ಷಾಮ: ಜಿಲ್ಲೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ

Team Udayavani, May 5, 2019, 3:00 AM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಉಂಟಾಗಿರುವ ಜಲಕ್ಷಾಮ ಇದೀಗ ದಿನ ಬಳಕೆಯ ತರಕಾರಿ ಬೆಳೆಗಳ ಬೆಲೆ ಗಗನಕ್ಕೇರುವಂತೆ ಮಾಡಿದ್ದು, ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗ್ರಾಹಕರ ಕೈ ಕಚ್ಚುತ್ತಿದೆ. ಕಳೆದೊಂದು ವಾರದಿಂದ ತರಕಾರಿ ಬೆಲೆ ಏರತೊಡಗಿದ್ದು, ಗ್ರಾಹಕರು ಕಂಗಾಲಾಗುವಂತೆ ಮಾಡಿದೆ.

ಸದ್ಯ ಜಿಲ್ಲೆಯ ಮಾರುಕಟ್ಟೆಯಲ್ಲಿ ಕಿಲೋ ಬೀನ್ಸ್‌ 120 ರೂ., ಗಡಿ ದಾಟಿದರೆ ಕ್ಯಾರೆಟ್‌ 50 ರೂ., ನುಗ್ಗೆಕಾಯಿ 60 ರಿಂದ 80 ರೂ., ಬದನೆ 50 ರೂ., ಹಾಗಲಕಾಯಿ 60 ರೂ., ಹೀರೆಕಾಯಿ 40 ರಿಂದ 50 ರೂ., ಮೂಲಂಗಿ 40 ರೂ., ಹೂಕೋಸು 40 ರೂ., ಬಾಟಾನಿ 80 ರೂ., ಹೀಗೆ ವಿವಿಧ ತರಕಾರಿ ಬೆಳೆಗಳು ಬೆಲೆ ಏರಿಕೆಯಾಗಿವೆ. ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ಜನತೆಗೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಬಿಸಿ ಮುಟ್ಟಿಸುತ್ತಿದೆ.

ಜಿಲ್ಲಾದ್ಯಂತ ಮಳೆ ಕೊರತೆಯಿಂದ ಒಂದು ಕಡೆ ಜಲಾಶಯಗಳು, ಡ್ಯಾಂಗಳಲ್ಲಿ ನೀರು ಖಾಲಿಯಾಗಿ ಮತ್ತೂಂದೆಡೆ ಕೊಳವೆ ಬಾವಿಗಳು ಕೈ ಕೊಟ್ಟು ಕುಡಿಯುವ ನೀರಿಗೆ ತೀವ್ರ ಜಲಬಾಧೆ ಉಲ್ಬಣಿಸಿರುವ ಬೆನ್ನಲ್ಲೇ ಕೃಷಿ ಚಟುವಟಿಕೆಗಳ ಮೇಲೆ ಕೂಡ ಬರದ ಕರಿ ನೆರಳು ಬಿದ್ದು, ಕೃಷಿ ಉತ್ಪನ್ನಗಳ ಉತ್ಪಾದನೆ ಕುಸಿತವಾಗಿದೆ.

ಮಾರುಕಟ್ಟೆಯಲ್ಲಿ ಅಗತ್ಯ ವಸ್ತಗಳ ಬೆಲೆ ದಿಢೀರ್‌ನೆ ಏರಿಕೆಯಾಗಿ ರೈತಾಪಿ ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನತೆ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಕೊಳವೆ ಬಾವಿಗಳನ್ನೇ ಆಶ್ರಯಿಸಿಸಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ರೈತರಿಗೆ ಈಗ ಬೇಸಿಗೆ ಪರಿಣಾಮ ಕೊಳವೆ ಬಾವಿಗಳು ಕೈಕೊಟ್ಟಿದೆ.

ತರಕಾರಿ ಬೆಳೆಗಳ ಉತ್ಪಾದನೆಯಲ್ಲಿ ಭಾರಿ ಇಳಿಮುಖ ಕಂಡಿರುವ ಪರಿಣಾಮ ಜಿಲ್ಲೆಯ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ತರಕಾರಿ ಬಾರದೇ ಕಳೆದೊಂದು ವಾರದಿಂದ ಜಿಲ್ಲಾದ್ಯಂತ ತರಕಾರಿ ಬೆಳೆಗಳ ಬೆಲೆ ಸಾಕಷ್ಟು ಏರಿಕೆಯಾಗಿ ಗ್ರಾಹಕರನ್ನು ಕಂಗಾಲಾಗಿಸಿದೆ.

ಬೆಳೆಯುವರೇ ಖರೀದಿಸುವ ಸ್ಥಿತಿ: ವಿಪರ್ಯಾಸದ ಸಂಗತಿ ಎಂದರೆ ತಮ್ಮ ಕೊಳವೆ ಬಾವಿಗಳಲ್ಲಿ ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ತಂದು ಕೈ ತುಂಬ ಹಣ ಸಂಪಾದಿಸುತ್ತಿದ್ದ ಗ್ರಾಮೀಣ ಪ್ರದೇಶದ ಸಣ್ಣ, ಪುಟ್ಟ ರೈತರು ಕೂಡ ಇಂದು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವ ದುಸ್ಥಿತಿ ಜಿಲ್ಲೆಯಲ್ಲಿ ಎದುರುರಾಗಿದೆ.

ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿರುವ ಬೆನ್ನಲ್ಲೇ ರೈತರ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಕೃಷಿ ಚಟುವಟಿಕೆಗಳು ಸ್ತಬ್ದಗೊಂಡಿದ್ದು, ಕನಿಷ್ಠ ಹೂವು, ಹಣ್ಣು, ತರಕಾರಿ ಬೆಳೆಯಲು ನೀರಾವರಿ ಇಲ್ಲದೇ ರೈತರು ತಮ್ಮ ಕುಟುಂಬ ನಿರ್ವಹಣೆಗೆ ಬೇಕಾದ ತರಕಾರಿಯನ್ನು ದುಬಾರಿ ಬೆಲೆ ಕೊಟ್ಟು ಮಾರುಕಟ್ಟೆಯಲ್ಲಿ ಖರೀದಿಸುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ.

ಬೆಲೆ ಏರಿಕೆ ಲಾಭ ರೈತರಿಗಿಲ್ಲ: ಬರಗಾಲದ ಪರಿಣಾಮ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು. ಇದರ ಪರಿಣಾಮ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಆದರೂ ಅಲ್ಪಸ್ವಲ್ಪ ತರಕಾರಿ ಬೆಳೆದಿರುವ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಲಾಭ ಸಿಗುತ್ತಿಲ್ಲ ಎಂಬ ಆರೋಪಗಳು ರೈತ ವಲಯದಿಂದ ಕೇಳಿ ಬರುತ್ತಿದೆ.

ಮಾರುಕಟ್ಟೆ ದಲ್ಲಾಳಿಗಳು, ವ್ಯಾಪಾರಸ್ಥರು ರೈತರಿಂದ ಅಗ್ಗದ ದರದಲ್ಲಿ ತರಕಾರಿ ಖರೀದಿಸಿ ಬಳಿಕ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಬೆಲೆ ಏರಿಕೆಯ ಲಾಭ ನ್ಯಾಯಯುತವಾಗಿ ರೈತನಿಗೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಮಾರುಕಟ್ಟೆಯ ಪೈಕಿ ಈರುಳ್ಳಿ, ಆಲೂಗಡ್ಡೆ ಹೊರತಪಡಿಸಿದರೆ ಎಲ್ಲಾ ತರಕಾರಿ ಬೆಳೆಗಳು ಗಗನಕ್ಕೇರಿವೆ.

ಹೋಟೆಲ್‌ ಮಾಲೀಕರಿಗೂ ಗಾಯದ ಮೇಲೆ ಬರೆ: ಜಿಲ್ಲೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿರುವುದು ಸಹಜವಾಗಿಯೇ ಹೋಟೆಲ್‌ ಮಾಲೀಕರಿಗೆ ಹಾಗೂ ಮದುವೆ, ಗೃಹ ಪ್ರವೇಶ, ನಾಮಕರಣ ಮತ್ತಿತರ ಶುಭ ಕಾರ್ಯಗಳನ್ನು ನಡೆಸುತ್ತಿರುವ ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೋಟೆಲ್‌ ಮಾಲೀಕರಿಗೆ ತರಕಾರಿ ಬೆಲೆ ಏರಿಕೆ ಸಹಜವಾಗಿಯೇ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇನ್ನೂ ಮದುವೆ, ನಾಮಕರಣ ಸೇರಿದಂತೆ ಇನ್ನಿತರ ಕಾರ್ಯಕ್ರಮ ನಡೆಸುವ ಸಾರ್ವಜನಿಕರಿಗೂ ತರಕಾರಿ ಬೆಲೆ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಕಾಸು ಕೊಟ್ಟರೂ ಬೇಡಿಕೆಗೆ ತಕ್ಕಂತೆ ತರಕಾರಿ ಸಿಗದೇ ಪರದಾಡುವಂತಹ ಸ್ಥಿತಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿದೆ.

ಕಳೆದೊಂದು ವಾರದಿಂದ ತರಕಾರಿ ಬೆಲೆ ಮಾರುಕಟ್ಟೆಯಲ್ಲಿ ವಿಪರೀತ ಹೆಚ್ಚಾಗಿದೆ. ಬೀನ್ಸ್‌, ಟೊಮೆಟೋ, ಮೆಣಸಿನಕಾಯಿ, ನುಗ್ಗೇಕಾಯಿ ಬೆಲೆ ಏರಿಕೆಯಾಗಿದೆ. ಮಳೆ ಕೊರತೆಯಿಂದ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಹೋಟೆಲ್‌ ನಡೆಸುವುದೇ ಕಷ್ಟ. ತರಕಾರಿ ಬೆಲೆ ಹೆಚ್ಚಳ ಆದರೆ ಆರ್ಥಿಕ ಹೊರೆ ಆಗುತ್ತದೆ. ಟೊಮೆಟೋ ಕೆ.ಜಿಗೆ 40 ರೂ. ಮುಟ್ಟಿದೆ. 50 ರೂ. ದಾಟಿದರೂ ಆಶ್ಚರ್ಯ ಪಡಬೇಕಿಲ್ಲ.
-ಮುರಳೀಧರ್‌, ಹೋಟೆಲ್‌ ಮಾಲೀಕ, ಚಿಂತಾಮಣಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ