ಜೈವಿಕ ಗೊಬ್ಬರ ಬಳಸಿದ ರೈತನ ಕೈ ಹಿಡಿದ ದ್ರಾಕ್ಷಿ

Team Udayavani, Jun 9, 2019, 3:00 AM IST

ಚಿಕ್ಕಬಳ್ಳಾಪುರ: ರಾಸಾಯನಿಕ ರಸಗೊಬ್ಬರಗಳನ್ನು ಬಳಸದೇ ಸಾವಯವ ಜೈವಿಕ ಗೊಬ್ಬರಗಳನ್ನು ಬಳಸಿಯೇ ಬಂಪರ್‌ ದ್ರಾಕ್ಷಿ ಬೆಳೆದಿರುವ ತಾಲೂಕಿನ ಪ್ರಗತಿಪರ ರೈತ ನಾಯನಹಳ್ಳಿ ಗ್ರಾಮದ ಆಂಜನೇಯರೆಡ್ಡಿ ದ್ರಾಕ್ಷಿ ತೋಟಕ್ಕೆ ಶನಿವಾರ ಜಪಾನ್‌ ದೇಶದ ಪ್ರಗತಿಪರ ರೈತರ ತಂಡ ಆಗಮಿಸಿ ವೀಕ್ಷಿಸಿತು.

ದೇಶದ ಸಹಸ್ರಾರು ಮಂದಿ ದ್ರಾಕ್ಷಿ ಬೆಳೆಗಾರರ ಪಾಲಿಗೆ ಸಲಹೆಗಾರರಾಗಿರುವ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತಿಯಾದರೂ ಕರ್ನಾಟಕ ಹಾಗೂ ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರಿಗೆ ಮಾರ್ಗದರ್ಶಕರಾಗಿರುವ ಡಾ.ಪ್ರಕಾಶ್‌ ನೇತೃತ್ವದಲ್ಲಿ ಆಗಮಿಸಿದ್ದ ಜಪಾನ್‌ ರೈತರ ತಂಡ, ದ್ರಾಕ್ಷಿ ಬೆಳೆ ನೋಡಿ ಕುತೂಹಲ ಭರಿತರಾದರು.

ದಿಲ್‌ ಖುಷ್‌ ದ್ರಾಕ್ಷಿ: ರೈತ ಆರ್‌.ಆಂಜನೇಯರೆಡ್ಡಿ ಕಳೆದ ಆರೇಳು ವರ್ಷಗಳಿಂದ ದ್ರಾಕ್ಷಿ ತೋಟಕ್ಕೆ ರಾಸಾಯನಿಕ ರಸಗೊಬ್ಬರ ಹಾಕುವುದಕ್ಕೆ ಕಡಿವಾಣ ಹಾಕಿ ಕೇವಲ ಜೈವಿಕ ರಸಗೊಬ್ಬರ ಬಳಸಿ ಗುಣಮಟ್ಟದ ದಿಲ್‌ ಖುಷ್‌ ದ್ರಾಕ್ಷಿ ಬೆಳೆಸಿದ್ದು, ತೋಟದಲ್ಲಿ ಹರಡಿದ್ದ ದ್ರಾಕ್ಷಿ ಗೊಂಚಲುಗಳಿಗೆ ಜಪಾನಿ ಪ್ರಗತಿಪರ ರೈತರ ತಂಡ ಮನಸೋತಿತು.

ಆಂಜನೇಯರೆಡ್ಡಿ ಸಲಹೆ: ತೋಟದಲ್ಲಿ ಸುಮಾರು ಒಂದೂವರೆ ಗಂಟೆಕಾಲ ತಿರುಗಾಗಿ ದ್ರಾಕ್ಷಿ ಬೆಳೆಯನ್ನು ರಾಸಾಯನಿಕ ಗೊಬ್ಬರ ಇಲ್ಲದೇ ಸಾವಯುವ ರಸಗೊಬ್ಬರಗಳನ್ನು ಬಳಸಿ ಬೆಳೆಯುವ ವಿಧಾನಗಳ ಕುರಿತು ಆಂಜನೇಯರೆಡ್ಡಿ ಸಲಹೆಗಳನ್ನು ರೈತರು ಪಡೆದುಕೊಂಡರು. ಈ ಸಂದರ್ಭದಲ್ಲಿ ಜಪಾನಿ ರೈತರ ತಂಡಕ್ಕೆ ದ್ರಾಕ್ಷಿ ಬೆಳೆಗಾರರ ಮಾರ್ಗದರ್ಶಕ ಡಾ.ಪ್ರಕಾಶ್‌ ವಿವರಿಸಿದರು.

ತೋಟ ರೋಗ ಮುಕ್ತ: ಆಂಜನೇಯರೆಡ್ಡಿ ತಮ್ಮ ದ್ರಾಕ್ಷಿ ತೋಟದಲ್ಲಿ ಜೈವಿಕ ರಸಗೊಬ್ಬರ ಬಳಕೆ ಮಾಡಿ ಬೆಳೆದಿರುವ ದ್ರಾಕ್ಷಿಯಿಂದ ಆಗುತ್ತಿರುವ ಲಾಭದ ಬಗ್ಗೆ ಜಪಾನ್‌ ದೇಶದ ರೈತರಿಗೆ ಮನವರಿಕೆ ಮಾಡಿಕೊಟ್ಟರು. ಜೈವಿಕ ರಸಗೊಬ್ಬರ ಬಳಕೆ ಬಳಿಕ ಇಡೀ ತೋಟ ರೋಗ ಮುಕ್ತವಾಗಿದ್ದು, ಕಡಿಮೆ ನೀರಿನ ಬಳಕೆ, ಉತ್ತಮ ಗುಣಮಟ್ಟದ ದ್ರಾಕ್ಷಿ, ಉತ್ತಮ ತೂಕ, ಸ್ವಾದಿಷ್ಟ ರುಚಿ, ದ್ರಾಕ್ಷಿ ಎಲೆಗಳಲ್ಲಿ ಹೆಚ್ಚಿರುವ ರೋಗ ನಿರೋಧ ಶಕ್ತಿ ಬಗ್ಗೆ ವಿವರಿಸಿದರು.

ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯುವ ಕುರಿತು ರೈತ ತಂಡಕ್ಕೆ ವಿವರಿಸಿದರು. ಜೊತೆಗೆ ಈ ಹಿಂದೆ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆಯುತ್ತಿದ್ದ ದ್ರಾಕ್ಷಿಗೂ ಹಾಗೂ ಜೈವಿಕ ಗೊಬ್ಬರ ಬಳಕೆ ಬಳಿಕ ಬೆಳೆಯುತ್ತಿರುವ ದ್ರಾಕ್ಷಿ ತೋಟದಿಂದ ಲಾಭ, ನಷ್ಟದ ಬಗ್ಗೆ ಮಾಹಿತಿ ನೀಡಿದರು.

ಬೆಳೆಗಾರರಿಗೆ ವರವಾದ ಬೇಡು ಕಾಂಡ: ಜಪಾನ್‌ ಪ್ರಗತಿ ಪರ ರೈತರ ತಂಡದ ನೇತೃತ್ವ ವಹಿಸಿದ್ದ ತೋಟಗಾರಿಕಾ ವಿಜ್ಞಾನಿ ಡಾ.ಪ್ರಕಾಶ್‌, ತಾನು 1975 ರಲ್ಲಿ ಅಮೆರಿಕಾಗೆ ತೆರಳಿದ್ದ ವೇಳೆ ಅಲ್ಲಿನ ಕಾಡಿನಲ್ಲಿ ರೂಟ್‌ಸ್ಟ್ರಕ್‌ (ಬೇರುಕಾಂಡ)ವನ್ನು ತಂದು ಸಂಶೋಧನೆ ಮೂಲಕ ದ್ರಾಕ್ಷಿ ತೋಟದ ಗಿಡಗಳಿಗೆ ಕಸಿ ಮಾಡಿ ನಂತರ ದ್ರಾಕ್ಷಿ ಬೆಳೆಯುವ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿಯೇ ನಡೆದು ಹೋಯಿತು ಎಂದರು.

ರೂಟ್‌ಸ್ಟ್ರಕ್‌ನಿಂದ ಈಗ ದ್ರಾಕ್ಷಿ ತೋಟಗಳು ರೈತರಿಗೆ ಸಾಕಷ್ಟು ವರವಾಗಿವೆ. ಬೇರು ಕಾಂಡ ತಾಯಿ ಇದ್ದಂತೆ. ನಿಸ್ವಾರ್ಥಿಯಾಗಿದೆ. ತನ್ನ ಒಡಲಿನಿಂದ ದ್ರಾಕ್ಷಿ ತೋಟಗಳಿಗೆ ಬೇಕಾದ ಪೋಷಕಾಂಶ, ನೀರು, ರೋಗ ನಿರೋಧ ಶಕ್ತಿ ಸೇರಿ ಎಲ್ಲಾವನ್ನು ಪೂರೈಸುತ್ತದೆ. ರೂಟ್‌ಸ್ಟ್ರಾಕ್‌ ಭೂಮಿಯೊಳಗೆ ಸುಮಾರು 25 ರಿಂದ 30 ಅಡಿ ಆಳ ಹೋಗಿರುತ್ತದೆ.

ಎಷ್ಟೇ ಬರಗಾಲ ಇದ್ದರೂ ದ್ರಾಕ್ಷಿ ತೋಟಗಳಿಗೆ ಅದು ನೀರು ಕೊಡುತ್ತದೆ. ಬಯಲು ಸೀಮೆ ಪಾಲಿಗೆ ರೂಟ್‌ಸ್ಟ್ರಾಕ್‌ ತುಂಬಾ ಪ್ರಯೋಜನವಾರಿ. ದೇಶದಲ್ಲಿ ಒಟ್ಟು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆ ಪೈಕಿ 3.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರೂಟ್‌ಸ್ಟ್ರಾಕ್‌ (ಬೇರು ಕಾಂಡ)ವನ್ನು ಕಸಿ ಮಾಡಿದ್ದಾರೆ. ಇದರಿಂದ ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಗುಣಮಟ್ಟದ ಫ‌ಸಲು ಬರುತ್ತಿದೆ ಎಂದರು.

ಒಂದು ಸ್ಟ್ರಾಬೇರಿ 35 ಸಾವಿರ: ಚಿಕ್ಕಬಳ್ಳಾಪುರದ ಪ್ರಗತಿಪರ ರೈತ ನಾಯನಹಳ್ಳಿ ಆಂಜನೇಯರೆಡ್ಡಿ ದ್ರಾಕ್ಷಿ ತೋಟ ವೀಕ್ಷಣೆಗೆ ಆಗಮಿಸಿದ್ದ ಜಪಾನ್‌ ದೇಶದ ಪ್ರಗತಿಪರ ರೈತರು ತಮ್ಮ ಕೃಷಿಯ ಶೋಧಗಾದೆಯನ್ನು ಬಿಚ್ಚಿಟ್ಟರು. ಅಲ್ಲಿನ ತೋಟಗಾರಿಕಾ ಬೆಳೆ ಪದ್ಧತಿಯನ್ನು ವಿವರಿಸಿದ ಜಪಾನ್‌ ರೈತ ಒಕುಡ ಮಿಕಿಯೋ, ತಮ್ಮ ಪಾಲಿ ಹೌಸ್‌ನಲ್ಲಿ ಕ್ರಿಕೆಟ್‌ ಬಾಲ್‌ ಗಾತ್ರದ ಸ್ಟ್ರಾಬೇರಿ ಬೆಳೆಯಲಾಗುತ್ತಿದ್ದು, ಒಂದು ಸ್ಟ್ರಾಬೇರಿ ಅಲ್ಲಿನ ಮಾರುಕಟ್ಟೆಯಲ್ಲಿ 500 ಡಾಲರ್‌ (35 ಸಾವಿರ ರೂ)ಗೆ ಮಾರಾಟವಾಗುತ್ತಿದೆ. ಇನ್ನೂ ರುಬಿ ರೋಮನ್‌ ಎಂಬ ದ್ರಾಕ್ಷಿ ಒಂದು ಗೊಂಚಲು 2 ಸಾವಿರ ಡಾಲರ್‌ಗೆ ಮಾರಾಟಗೊಳ್ಳುತ್ತದೆ ಎಂದಾಗ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಮೂಗಿನ ಮೇಲೆ ಕೈ ಇಟ್ಟುಕೊಂಡರು.

ಜಿಲ್ಲೆಯ ದ್ರಾಕ್ಷಿಗೆ ಬಾಂಗ್ಲಾದಲ್ಲಿ ಬೇಡಿಕೆ: ಬಯಲು ಸೀಮೆ ಜಿಲ್ಲೆಗಳಲ್ಲಿ ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆಯುವ ಟನ್‌ಗಟ್ಟಲೇ ದ್ರಾಕ್ಷಿ ನೆರೆಯ ಬಾಂಗ್ಲಾ ದೇಶಕ್ಕೆ ಮಾರಾಟಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ದ್ರಾಕ್ಷಿ ಕೆಜಿ 40 ರೂ.ಗೆ ಮಾರಾಟವಾದರೂ ಬಾಂಗ್ಲಾ ದೇಶಕ್ಕೆ ಜಿಲ್ಲೆಯ ದ್ರಾಕ್ಷಿ ತಲುಪುಬೇಕಾದರೆ ಅಲ್ಲಿನ ರಫ್ತುದಾರರು ಕೆಜಿ ಮೇಲೆ 40 ರೂ. ಸುಂಕ ಕಟ್ಟುತ್ತಾರೆಂದು ದ್ರಾಕ್ಷಿಬೆಳೆಯ ವಿಜ್ಞಾನಿ ಡಾ.ಪ್ರಕಾಶ್‌ ತಿಳಿಸಿದರು.

ದ್ರಾಕ್ಷಿ ಬೆಳೆಯಲು ರೂಟ್‌ಸ್ಟ್ರಾಕ್‌ ದ್ರಾಕ್ಷಿ ಬೆಳೆಗಾರರ ಕೈ ಹಿಡಿಯಿತು. ಅದನ್ನು ಅಮೆರಿಕಾದರಿಂದ ತರಲು ಸಾಕಷ್ಟು ಶ್ರಮಪಟ್ಟಿರುವೆ. ಇದರಿಂದ ಇಂದು ದ್ರಾಕ್ಷಿ ಬೆಳೆಗಾರರು ನೆಮ್ಮದಿಯಿಂದ ಇದ್ದಾರೆ. ರಾಸಾಯನಿಕ ರಸಗೊಬ್ಬರಗಳು ತಾತ್ಕಲಿಕವಾಗಿ ತೃಪ್ತಿಕೊಟ್ಟರೂ ಅದು ಭೂಮಿಯ ಫ‌ಲವತ್ತತೆಯನ್ನು ನಾಶ ಮಾಡುತ್ತದೆ. ದ್ರಾಕ್ಷಿ ತೋಟಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ವ್ಯಾಪಕವಾಗಿ ಕೀಟ ನಾಶಕಗಳನ್ನು ಬಳಕೆ ಮಾಡಬೇಕಾಗುತ್ತದೆ. ಆದರೆ ಜೈವಿಕ ಗೊಬ್ಬರ ಬಳಕೆಯಿಂದ ದ್ರಾಕ್ಷಿ ಬೆಳೆದರೂ ಆದಾಯದ ಜೊತೆಗೆ ಇಳುವರಿ ಕೂಡ ಕೈ ಹಿಡಿಯುತ್ತದೆ ಎಂದರು.

25 ಟನ್‌ ನಿರೀಕ್ಷಿಸಿದ್ದೆ 33 ಟನ್‌ ದ್ರಾಕ್ಷಿ ಬಂತು: ರಾಸಾಯನಿಕ ರಸಗೊಬ್ಬರಗಳಿಂದ ವಿಮುಕ್ತವಾಗಿ ಜೈವಿಕ ರಸಗೊಬ್ಬರಗಳನ್ನು ಬಳಸಿದ್ದರಿಂದ ನನಗೆ ಸಾಕಷ್ಟು ಖರ್ಚು ಕಡಿಮೆ ಆಗಿದೆ. ತೋಟದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಾಗಿದೆ. ಫ‌ಸಲಿನ ಜೊತೆಗೆ ತೂಕದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. 2017 ರಲ್ಲಿ ನಾನು 25 ಟನ್‌ ಮಾತ್ರ ನಿರೀಕ್ಷಿಸಿದ್ದೆ. ಆದರೆ 33 ಟನ್‌ ದ್ರಾಕ್ಷಿ ಕೊಯ್ಲು ಆಯಿತು. ಬೆಲೆ ಕೂಡ ಕೆಜಿ 130 ರೂ.ಗೆ ಮಾರಾಟಗೊಂಡಿತು ಎಂದು ಜೈವಿಕ ರಸಗೊಬ್ಬರ ಬಳಸಿ ಬಂಪರ್‌ ದ್ರಾಕ್ಷಿ ಬೆಳೆದಿರುವ ನಾಯನಹಳ್ಳಿಯ ಪ್ರಗತಿಪರ ರೈತ ಆರ್‌.ಆಂಜನೇಯರೆಡ್ಡಿ ಉದಯವಾಣಿಗೆ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ