ಉಪ ಕದನಕ್ಕೂ ಮೊದಲೇ ಲೋಕಲ್‌ ಫೈಟ್‌

Team Udayavani, Oct 21, 2019, 3:00 AM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ಉಪ ಚುನಾವಣೆಗೂ ಮೊದಲೇ ಜಿಲ್ಲೆಯ ಗೌರಿಬಿದನೂರು ಹಾಗೂ ಚಿಂತಾಮಣಿ ನಗರಸಭೆಯ ಒಟ್ಟು 62 ವಾರ್ಡ್‌ಗಳಿಗೆ ನ.11ಕ್ಕೆ ಚುನಾವಣೆ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಭಾನುವಾರ ಆದೇಶ ಹೊರಡಿಸಿದ್ದು, ಅ.24ಕ್ಕೆ ಚುನಾವಣಾ ಅಧಿಸೂಚನೆ ಹೊರ ಬೀಳಲಿದೆ. ನಾಮಪತ್ರಗಳ ಸಲ್ಲಿಕೆಗೆ ಈ ತಿಂಗಳ 31 ಕೊನೆ ದಿನವಾಗಿದೆ.

ತಕ್ಷಣದಿಂದ ನೀತಿ ಸಂಹಿತೆ: ಜಿಲ್ಲೆಯ ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆಗಳಿಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಟ್ಟು ಚುನಾವಣಾ ಮಾದರಿ ನೀತಿ ಸಂಹಿತೆ ನ.14 ರವರೆಗೂ ಜಾರಿಯಲ್ಲಿ ಇರಲಿದೆ. ಕಳೆದ ವಿಧಾನಸಭಾ ಚುನಾವಣೆಗೆ ಸಿದ್ಧಪಡಿಸಿದ್ದ ಮತದಾರರ ಪಟ್ಟಿಯನ್ನು ಬಳಸಿಕೊಂಡು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಆಯೋಗ ನಿರ್ದೇಶನ ನೀಡಿದೆ.

24ಕ್ಕೆ ಅಧಿಸೂಚನೆ ಪ್ರಕಟ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅ.24 ರಂದು ಗುರುವಾರ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಕಸೂಚನೆ ಹೊರಡಿಸಲಿದ್ದಾರೆ. ಅಖಾಡಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಅ.24 ರಿಂದ 31ರ ವರೆಗೂ ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ನ.2 ರಂದು ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, 4ರಂದು ಉಮೇದುವಾರಿಕೆ ವಾಪಸ್ಸು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 12 ರಂದು ಬೆಳಗ್ಗೆ 7 ರಿಂದ ಸಂಜೆ 5:30ರ ವರೆಗೂ ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯವಿದ್ದಲ್ಲಿ 13ಕ್ಕೆ ನಡೆಯಲಿದೆ. ನ.14 ರಂದು ಬೆಳಗ್ಗೆ 8 ಗಂಟೆಗೆ ಆಯಾ ತಾಲೂಕು ಕೇಂದ್ರಗಳಲ್ಲಿಯೇ ಮತ ಎಣಿಕೆ ನಡೆಯಲಿದೆ.

ಒಟ್ಟು 62 ವಾರ್ಡ್‌ಗಳು: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯ ಒಟ್ಟು 31 ವಾರ್ಡ್‌ಗಳು ಹಾಗೂ ಗೌರಿಬಿದನೂರು ನಗರಸಭೆಯ 31 ವಾರ್ಡ್‌ಗಳು ಸೇರಿ ಒಟ್ಟು 62 ವಾರ್ಡ್‌ಗಳಿಗೆ ಚುನಾವಣೆ ನಿಗದಿಯಾಗಿದೆ. ಅಧಿಕಾರ ಅವಧಿ ಮುಗಿದು ವರ್ಷವಾದರೂ ಮೀಸಲಾತಿ, ಕ್ಷೇತ್ರ ಪುನರ್‌ ವಿಂಗಡನೆ ಪ್ರಶ್ನಿಸಿ ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದರ ಪರಿಣಾಮ ಚುನಾವಣೆ ತಡವಾಗಿ ನಿಗದಿಯಾಗಿದೆ. ಕಳೆದ ಎರಡು, ಮೂರು ತಿಂಗಳ ಹಿಂದೆ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ನಗರಸಭೆ, ಪುರಸಭೆಗೆ ಚುನಾವಣೆ ನಡೆದಿತ್ತು. ಇದೀಗ ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆಗಳಿಗೆ ಚುನಾವಣೆ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎನ್‌.ಆರ್‌.ತ್ಯಾಗರಾಜ್‌ ಆದೇಶ ಹೊರಡಿಸಿದ್ದಾರೆ.

ಆಯೋಗದ ನಿರ್ದೇಶನ ಏನಿದೆ?: ಈಗಾಗಲೇ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸಿಕೊಳ್ಳುವುದು, ಚುನಾವಣೆ ನಡೆಸಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣಾ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಿ, ಚುನಾವಣೆಗೆ ಸಂಬಂಧಪಟ್ಟ ಸುತ್ತೋಲೆ, ದಾಖಲೆ, ನಿರ್ದೇಶನ ಪ್ರತಿಗಳನ್ನು ನೀಡಬೇಕು.

ಅಭ್ಯರ್ಥಿಗಳಿಂದ ಕಡ್ಡಾಯವಾಗಿ ಅಭ್ಯರ್ಥಿ ಹಿನ್ನೆಲೆ, ಚರಾಸ್ಥಿ, ಸ್ಥಿರಾಸ್ತಿ, ಸ್ವ ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪಡೆಯಬೇಕೆಂದು ತಿಳಿಸಿದೆ. ನೀತಿಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುವುದು, ಮತದಾನದ ವೇಳೆ ನೋಟಾ ಅವಕಾಶ ಕಲ್ಪಿಸುವಂತೆ ಸೂಚಿಸಿರುವ ಆಯೋಗ, ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ ಅಳವಡಿಸುವಂತೆ ಸೂಚಿಸಿದೆ.

ರಾಜಕೀಯ ಜಿದ್ದಾಜಿದ್ಧಿ: ಗೌರಿಬಿದನೂರು, ಚಿಂತಾಮಣಿ ನಗರಸಭೆಗಳ ಆಡಳಿತ ಮಂಡಳಿ ಅವಧಿ ಮುಗಿದು ವರ್ಷ ಕಳೆದಿದ್ದು, ಇದೀಗ ಚುನಾವಣೆ ನಿಗದಿಯಾಗಿದೆ. ಈ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಸಾಕಷ್ಟು ರಾಜಕೀಯ ಪರಿಸ್ಥಿತಿ ಜಿದ್ದಾಜಿದ್ದಿನಿಂದ ಕೂಡಿದೆ. ಚಿಂತಾಮಣಿಯಲ್ಲಿ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಜೆಡಿಎಸ್‌ ಆಡಳಿತ ಹಿಡಿದಿತ್ತು. ಗೌರಿಬಿದನೂರಲ್ಲಿ ಕಾಂಗ್ರೆಸ್‌ ತನ್ನ ಪ್ರಾಬಲ್ಯ ಮೆರೆದಿತ್ತು. ಈಗ ಚಿಂತಾಮಣಿ ನಗರಸಭೆ ಚುನಾವಣೆ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಅಲ್ಲಿ ಹಾಲಿ ಶಾಸಕ ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಸುಧಾಕರ್‌ ಬೆಂಬಲಿಗರ ನಡುವೆ ನೇರ ಹಣಾಹಣಿ ನಡೆಯಲಿದೆ.

ಚಿಕ್ಕಬಳ್ಳಾಪುರ ನಗರಸಭೆಗಿಲ್ಲ ಎಲೆಕ್ಷನ್‌: ಜಿಲ್ಲೆಯಲ್ಲಿ ಈಗ ಬಾಕಿ ಉಳಿದಿದ್ದ ಗೌರಿಬಿದನೂರು, ಚಿಂತಾಮಣಿ ನಗರಸಭೆಗಳ ತಲಾ 31 ವಾರ್ಡ್‌ಗಳಿಗೆ ಚುನಾವಣೆ ನಿಗದಿಯಾಗಿದೆ. ಆದರೆ ಚಿಕ್ಕಬಳ್ಳಾಪುರ ನಗರಸಭೆಗೆ ಮಾತ್ರ ಚುನಾವಣೆ ನಿಗದಿಯಾಗದಿರುವುದು ರಾಜಕೀಯವಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ನಗರಸಭೆಗೆ ಸಂಬಂಧಿಸಿದಂತೆ 17ನೇ ವಾರ್ಡ್‌ಗೆ ನಿಗದಿಪಡಿಸಿರುವ ಮೀಸಲಾತಿ ಪ್ರಶ್ನಿಸಿ ಇತ್ತೀಚೆಗೆ ಕೆಲವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಕೂಡ ಅರ್ಜಿ ವಜಾಗೊಂಡಿತ್ತು.

ಹೀಗಾಗಿ ಚಿಂತಾಮಣಿ, ಗೌರಿಬಿದನೂರು ಸೇರಿ ಚಿಕ್ಕಬಳ್ಳಾಪುರ ನಗರಸಭೆಗಳಿಗೆ ಒಂದೇ ಬಾರಿ ಚುನಾವಣೆ ನಿಗದಿಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಜೊತೆಗೆ ರಾಜ್ಯದಲ್ಲಿರುವ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಮಾತ್ರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಗದಿ ಮಾಡದಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.

* ಅ.24ಕ್ಕೆ ಜಿಲ್ಲಾಧಿಕಾರಿಗಳಿಂದ ಆಧಿಸೂಚನೆ ಪಕಟ
* ಅ.31 ನಾಮಪತ್ರಗಳ ಸಲ್ಲಿಕೆಗೆ ಕೊನೆ ದಿನ
* ನ.2ಕ್ಕೆ ನಾಮಪತ್ರಗಳ ಪರಿಶೀಲನಾ ಕಾರ್ಯ
* ನ.4ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನ
.* ನ.12ಕ್ಕೆ 62 ವಾರ್ಡ್‌ಗಳಿಗೆ ಚುನಾವಣೆ
* ನ.14ಕ್ಕೆ ಮತ ಎಣಿಕೆ ಕಾರ್ಯ, (ತಾಲೂಕು ಕೇಂದ್ರ)

ಚಿಕ್ಕಬಳ್ಳಾಪುರ ನಗರಸಭೆಗೆ ಚುನಾವಣೆ ನಿಗದಿಯಾಗಬೇಕಿತ್ತು. ಈಗಾಗಲೇ ವರ್ಷಕ್ಕೂ ಹೆಚ್ಚು ಚುನಾವಣೆ ನಡೆಸುವುದು ತಡವಾಗಿದೆ. ಯಾವ ಕಾರಣಕ್ಕೆ ಚುನಾವಣಾ ಆಯೋಗ ಚಿಕ್ಕಬಳ್ಳಾಪುರ ನಗರಸಭೆಗೆ ಚುನಾವಣೆ ನಿಗದಿ ಮಾಡಿಲ್ಲ ಎನ್ನುವುದು ಅರ್ಥವಾಗಿಲ್ಲ. ಸಿಎಂ ಯಡಿಯೂರಪ್ಪ, ರಾಜಕೀಯ ದುರುದ್ದೇಶದಿಂದ ಆಯೋಗದ ಮೇಲೆ ಒತ್ತಡ ಹೇರಿ ಅನರ್ಹ ಶಾಸಕರು ಇರುವ ಕ್ಷೇತ್ರಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆಸದಂತೆ ತಡೆ ಹಿಡಿಯಲಾಗಿದೆ.
-ಎಸ್‌.ಎಂ.ರಫೀಕ್‌, ಕಾಂಗ್ರೆಸ್‌ ಹಿರಿಯ ಮುಖಂಡರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ