70ಕ್ಕೂಹೆಚ್ಚು ಕೊಕ್ಕರೆ ಸಾವು
Team Udayavani, Jan 22, 2021, 1:14 PM IST
ಗೌರಿಬಿದನೂರು: ತಾಲೂಕಿನ ಕಸಬಾ ಹೋಬಳಿ ಕಾದಲವೇಣಿ ಗ್ರಾಮದ ಕೆರೆಯಲ್ಲಿ ಸುಮಾರು 70ಕ್ಕೂ ಹೆಚ್ಚು ವಲಸೆ ಕೊಕ್ಕರೆಗಳು ಸಾವನ್ನಪ್ಪಿದ್ದು, ಅವುಗಳ ಸಾವಿಗೆ ಕಾರಣವೇನೆಂಬುದಕ್ಕೆ ಬೆಂಗಳೂರಿಗೆ ಪಶುವೈದ್ಯ ಇಲಾಖೆಯ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಸಹಾಯಕ ಪಶುವೈದ್ಯಾಧಿಕಾರಿ ಡಾ. ರಾಘವೇಂದ್ರ ತಿಳಿಸಿದ್ದಾರೆ.
ಸಾವನ್ನಪ್ಪಿರುವ ಪಕ್ಷಿಗಳು ಆಹಾರಕ್ಕಾಗ ವಲಸೆ ಬಂದಿರುವ ಕೊಕ್ಕರೆಗಳಾಗಿದ್ದು, ಆಹಾರದ ಕೊರೆತಯಿಂದಲೋ ಅಥವಾ ಬೇರೆ ಯಾವ ಕಾರಣದಿಂದ ಸಾವನ್ನಪ್ಪಿದೆ ಎಂಬುದು ತಿಳಿದುಬಂದಿಲ್ಲವಾದರೂ ಹಕ್ಕಿಜ್ವರದಿಂದ ಸಾವನ್ನಪ್ಪಿಲ್ಲ. ರಾಜ್ಯದಲ್ಲಿ ಹಕ್ಕಿ ಜ್ವರದ ಬಗ್ಗೆ ಈ ವೆರೆಗೂ ವರದಿಯಾಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಅತ್ಯುತ್ತಮ ತಂತ್ರಜ್ಞಾನ ಕಂಡು ಹಿಡಿದ ಟ್ವಿಟ್ಟರ್ ಗೆ ಉದ್ಯಮಿ ಎಲೋನ್ ಮಸ್ಕ್ ಬಹುಮಾನ ಘೋಷಣೆ!
ವರದಿ ಬರಬೇಕಿದೆ: ಕಾದಲವೇಣಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಕೆರೆಯ ಬಳಿಗೆ ಹೋಗಬಾರದು ಎಂದು ಗ್ರಾಮದಲ್ಲಿ ಪಂಚಾಯ್ತಿ ವತಿಯಿಂದ ಡಂಗೂರ ಹಾಗೂ ಪ್ರಚಾರ ಮಾಡಲಾಗಿದೆ. ಬೆಂಗಳೂರಿನಿಂದ ವರದಿ ಬಂದ ನಂತರ ಯಾವ ರೋಗ ಎಂಬುದು ತಿಳಿಯಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸತ್ತ ಎಲ್ಲಾ ಪಕ್ಷಿಗಳನ್ನು ಭೂಮಿಯಲ್ಲಿ ಹೂಳಲಾಗಿದ್ದು, ಹಿಂದಿನ ದಿನ ನಾಯಿಯೊಂದು ಸತ್ತ ಕೊಕ್ಕರೆಯನ್ನು ಎಳೆದೊಯ್ಯುತ್ತಿದ್ದಾಗ ರೈತರು ಹಾಗೂ ಕುರಿ ಕಾಯುವವರು ಪತ್ತೆ ಹಚ್ಚಿ ಪಂಚಾಯ್ತಿ ಹಾಗೂ ಪಶು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ.