ಜಿಲ್ಲೆಗೆ ಕುಡಿವ ನೀರು ಪೂರೈಕೆಗೆ 22 ಕೋಟಿ ರೂ.ಬಿಡುಗಡೆ

Team Udayavani, May 11, 2019, 3:00 AM IST

ಶಿಡ್ಲಘಟ್ಟ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಅದರ ಮೂಲಕ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡಿದ್ದೇವೆ. ವಿವಿಧ ಯೋಜನೆಯಡಿ 22 ಕೋಟಿ ರೂ. ಬಿಡುಗಡೆ ಆಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದರು.

ನಗರದ ಅಮಾನಿಕೆರೆಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಸರ್ಕಾರ ಜಿಲ್ಲಾಧಿಕಾರಿಗಳಿಗೆ 6 ಕೋಟಿ ರೂ. ಬಿಡುಗಡೆ ಮಾಡಿದೆ. ಜೊತೆಗೆ ಜಿಲ್ಲಾ ಪಂಚಾಯಿತಿಗೆ ಕೊಳವೆಬಾವಿಗಳನ್ನು ಕೊರೆಸಲು ಪೈಪ್‌ಲೈನ್‌ ಮತ್ತು ಮೋಟರ್‌ ಪಂಪ್‌ಸೆಟ್‌ಗಳನ್ನು ಅಳವಡಿಸಲು 9 ಕೋಟಿ ರೂ.ಬಿಡುಗಡೆಯಾಗಿದೆ.

ಹೆಚ್ಚುವರಿಯಾಗಿ ಎನ್‌.ಆರ್‌.ಡಬ್ಲೂಯುಪಿ ಯೋಜನೆಯಡಿ 7 ಕೋಟಿ ರೂ. ಬಿಡುಗಡೆಯಾಗಿದ್ದು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗಿದೆ. ಆದರೂ ಶೇ.60 ರ‌ಷ್ಟು ಕೊಳವೆ ಬಾವಿಗಳಲ್ಲಿ ನೀರು ಲಭಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮಳೆ ನೀರು ಇಂಗಿಸಲು ಕೆರೆ-ಕುಂಟೆಗಳನ್ನು ಸಂರಕ್ಷಣೆ ಮಾಡಲು ನಾಗರಿಕರು ಸಹಕಾರ ನೀಡಬೇಕೆಂದರು. ಜಿಲ್ಲೆಯಲ್ಲಿ ತೀರಾ ಅಗತ್ಯವಾಗಿರುವ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

6 ವಾರಗಳ ಕಾಲ ಮೇವು ದಾಸ್ತಾನು: ಸದ್ಯ ಮೇವು ಬ್ಯಾಂಕ್‌ ಆರಂಭಿಸುವ ಯೋಜನೆ ಹೊಂದಿಲ್ಲ. ಆದರೆ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಪೂರೈಕೆ ಮಾಡಲು ಗೋಶಾಲೆ ತೆರೆಯಲು ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಪಶು ಇಲಾಖೆಯ ಅಧಿಕಾರಿಗಳು ಮಾಹಿತಿಯಂತೆ ಜಿಲ್ಲೆಯಲ್ಲಿ ಮುಂದಿನ ಆರು ವಾರಗಳ ಕಾಲ ಜಾನುವಾರುಗಳಿಗೆ ಸರಬರಾಜು ಮಾಡಲು ಮೇವು ದಾಸ್ತಾನು ಇದೆ. ಗೋಶಾಲೆಯಲ್ಲಿ ಜಾನುವಾರುಗಳಿಗೆ ಔಷಧಿ, ಲಸಿಕೆ ಹಾಕಿಸುತ್ತೇವೆ. ಆದರೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಮೇವು ಪೂರೈಕೆ ಮಾಡುವುದು ಕಷ್ಟ ಎಂದು ಸ್ಪಷ್ಟಪಡಿಸಿದರು.

ದೇವರಮಳ್ಳೂರು-ವರದನಾಯಕನಹಳ್ಳಿಗೆ ಭೇಟಿ: ನಗರದ ಅಮಾನಿಕೆರೆ ಪ್ರದೇಶ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು ನಂತರ ತಾಲೂಕಿನ ವರದನಾಯಕನಹಳ್ಳಿ ಹಾಗೂ ದೇವರಮಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.

ಎಡಿಎಲ್‌ಆರ್‌ ಗಂಗಾಧರಪ್ಪ, ಉಪ ತಹಶೀಲ್ದಾರ್‌ ಹನುಮಂತರಾವ್‌, ಸರ್ವೇ ಮೇಲ್ವಿಚಾಲಕ ವಸಂತ ಕುಮಾರ್‌, ಸರ್ವೇಯರ್‌ ಗಿರೀಶ್‌, ಎಚ್‌.ಎನ್‌.ವ್ಯಾಲಿ ಯೋಜನೆಯ ಎಂಜಿನಿಯರ್‌ ಪ್ರದೀಪ್‌, ಗ್ರಾಮ ಲೆಕ್ಕಾಧಿಕಾರಿ ಅರುಣ್‌, ನಾಗೇಂದ್ರ, ನಾಗರಾಜ್‌ ಉಪಸ್ಥಿತರಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ತೆರೆಯಲು ಯೋಜನೆ ರೂಪಿಸಿದ್ದೇವೆ. ಈಗಾಗಲೇ ತಾಲೂಕಿನ ವರದನಾಯಕನಹಳ್ಳಿ ಬಳಿ ಕಸಾಯಿಖಾನೆ ನಿರ್ಮಿಸಲು ಚಿಂತನೆ ನಡೆಸಿದ್ದೇವೆ. ಮಾಂಸದ ಅಂಗಡಿಗಳನ್ನು ಒಂದೇ ಕಡೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಈಡೇರಿಸುವ ಉದ್ದೇಶ ಹೊಂದಿದ್ದೇವೆ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ


ಈ ವಿಭಾಗದಿಂದ ಇನ್ನಷ್ಟು

  • ಚಿಕ್ಕಬಳ್ಳಾಪುರ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ- 2009ರನ್ವಯ 6-14 ವಯೋಮಾನದ ಎಲ್ಲಾ ಮಕ್ಕಳಿಗೆ ತಾರತಮ್ಯವಿಲ್ಲದೇ ಕಡ್ಡಾಯ, ಉಚಿತ ಹಾಗೂ...

  • ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಫ‌ಲಿತಾಂಶ ಹೊರ ಬೀಳಲು ಕ್ಷಣಗಣನೆ ಆರಂಭಗೊಂಡಿದ್ದು, ಸತತ...

  • ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆರೋಗ್ಯದ ಮೇಲೆ ಮಾರಕವಾಗಿ ಪರಿಣಮಿಸುತ್ತಿರುವ ಡೆಂಘೀ ಹಾಗೂ ಚಿಕೂನ್‌ಗುನ್ಯ ಮತ್ತಿತರ ಸಾಂಕ್ರಮಿಕ ರೋಗಗಳನ್ನು...

  • ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಸ್ತುತ ಶೇ.45 ರಷ್ಟು ಮಳೆ ಕೊರತೆ ಉಂಟಾಗಿ ಭೀಕರ ಬರಗಾಲ ಉಂಟಾಗಿರುವ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ...

  • ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣಾ ಅಖಾಡದ ಮತ ಎಣಿಕೆಗೆ ಇನ್ನೂ ಕೇವಲ 24 ಗಂಟೆ ಮಾತ್ರ ಬಾಕಿ ಇದೆ. ಆದರೆ ಜಿಲ್ಲೆಯಲ್ಲಿ...

ಹೊಸ ಸೇರ್ಪಡೆ