ಘನತ್ಯಾಜ್ಯ ನಿರ್ವಹಣಾ ಘಟಕ ನಿಷ್ಕ್ರಿಯ

Team Udayavani, Jun 12, 2019, 3:00 AM IST

ಗೌರಿಬಿದನೂರು: ಸಿಬ್ಬಂದಿ ಕೊರತೆಯಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ನಿರ್ವಹಣಾ ನೆಲಭರ್ತಿ ಘಟಕವು ಕಳೆದ 3-4 ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದು, ಪ್ರತಿದಿನ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವಾದ್ದರಿಂದ ನಗರ ವ್ಯಾಪ್ತಿಯಲ್ಲಿ ಕಸ ಮತ್ತು ಚರಂಡಿ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದ್ದು, ಜನತೆ ರೋಗಭೀತಿಯಲ್ಲಿ ನರಳುವಂತಾಗಿದೆ.

ನಗರಕ್ಕೆ 6 ಕಿ.ಮೀ.ಸಮೀಪವಿರುವ ಇಡಗೂರು ರಸ್ತೆಯಲ್ಲಿ ಸುಮಾರು 10 ಎಕರೆಯಲ್ಲಿ ಪ್ರಾರಂಭಿಸಲಾಗಿದ್ದ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಈ ಹಿಂದೆ ಪುರಸಭೆ ಇದ್ದಾಗ ದೊಡ್ಡಬಳ್ಳಾಪುರದ ಗುತ್ತಿಗೆದಾರರೋರ್ವರಿಗೆ ಹೊರಗುತ್ತಿಗೆ ನೀಡಿ ಸಂಸ್ಕರಣಾ ಘಟಕದಲ್ಲಿ ಉತ್ಪಾದನೆಯಾಗುವ ಗೊಬ್ಬರ ಮಾರಿಕೊಂಡು ವಾರ್ಷಿಕ ನಿರ್ವಹಣೆ ಶುಲ್ಕ ನೀಡಬೇಕೆಂಬ ಷರತ್ತು ವಿಧಿಸಿ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆದಾರ ಕೇವಲ 3 ತಿಂಗಳಲ್ಲಿ ಘಟಕವನ್ನು ನಿರ್ವಹಿಸಲಾಗದೆ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಅನಾಥವಾಗಿದ್ದು, ಇದಕ್ಕೆ ಬದಲಿ ವ್ಯವಸ್ಥೆ ಮಾಡಬೇಕಿದೆ.

ಯಶಸ್ವಿಯಾಗದ ವಿಧಾನ: ಪ್ರಾರಂಭದಲ್ಲಿ ಮನೆ ಮತ್ತು ಅಂಗಡಿಗಳಲ್ಲಿಯೇ ಎರಡು ಪ್ಲಾಸ್ಟಿಕ್‌ ಬುಟ್ಟಿಗಳಲ್ಲಿ ಒಣ ಕಸ ಬೇರೆ ಹಾಗೂ ಹಸಿ ಕಸ ಬೇರೆಯಾಗಿ ಬೇರ್ಪಡಿಸಿ ಅದನ್ನು ಎರಡು ಟಿಪ್ಪರ್‌ ಆಟೋಗಳ ಮೂಲಕ ತ್ಯಾಜ್ಯ ಘಟಕಕ್ಕೆ ಸಾಗಿಸಿ ಅಲ್ಲಿ ಬೇರೆ ಬೇರೆಯಾಗಿ ಸಂಗ್ರಹಿಸಲಾಗುತ್ತಿತ್ತು. ಹಸಿ ಕಸಕ್ಕೆ ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ಅದಕ್ಕೆ ನೀರು ಸಿಂಪಡಿಸಿ 15ರಿಂದ 40 ದಿನಗಳ ನಂತರ ಯಂತ್ರದ ಮೂಲಕ ಬೇರ್ಪಡಿಸಿ ಗುಣಮಟ್ಟದ ಕೊಟ್ಟಿಗೆ ಗೊಬ್ಬರ ತಯಾರಿಸಲಾಗುತ್ತಿತ್ತು.

ಆದರೆ ಗ್ರಾಹಕರಿಂದ ಸೂಕ್ತ ಸಹಕಾರ ಸಿಗದಿದ್ದರಿಂದ ಎಲ್ಲಾ ರೀತಿಯ ಕಸವನ್ನೂ ಒಟ್ಟಿಗೆ ಸಂಗ್ರಹಿಸಿ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ತಂದು ಅಲ್ಲಿ ಗುಂಡಿ ತೆಗೆದು ಕಸ ತುಂಬಿ 2 ತಿಂಗಳ ನಂತರ ಕೊಳೆತಿರುವ ಕಸವನ್ನು ಜೆಸಿಬಿ ಮೂಲಕ ಕಸದಲ್ಲಿರುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬೇರ್ಪಡಿಸಿ ಗೊಬ್ಬರ ಮಾರಾಟ ಮಾಡುವ ವಿಧಾನವನ್ನು 2010ರಿಂದ 2016ರವರೆಗೂ ನಿರ್ವಹಿಸಲಾಗುತ್ತಿತ್ತು. ಈಗ ಅದೂ ಸಹ ಸ್ಥಗಿತಗೊಂಡಿದೆ.

ಕಾರ್ಮಿಕರ ಕೊರತೆ: ಜೂನ್‌ 2017ರಲ್ಲಿ 700 ಜನಕ್ಕೆ ಒಬ್ಬ ಕಾರ್ಮಿಕನಿರಬೇಕು ಹಾಗೂ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಾರದು ಎಂಬ ಕಾನೂನು ಜಾರಿಗೆ ಬಂದಮೇಲೆ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆಯುಂಟಾಗಿ ಕಸ ತ್ಯಾಜ್ಯ ನಿರ್ವಹಣಾ ಘಟಕವು ಸಂಪೂರ್ಣ ಸ್ಥಗಿತಗೊಂಡಿದೆ.

ಕಳೆದ 3 ವರ್ಷದಿಂದ ಖಾಲಿ ಇದ್ದ ಪರಿಸರ ಅಭಿಯಂತರರ ಸ್ಥಾನಕ್ಕೆ ಈಗ ಹೊಸದಾಗಿ ವೈಶಾಲಿ ಎಂಬುವವರು ನಿಯುಕ್ತಿಯಾಗಿದ್ದು, ಈ ಘಟಕದ ಪ್ರಾರಂಭಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದೇವೆ ಎಂದು ಪರಿಸರ ಅಭಿಯಂತರರಾದ ಮೈತ್ರಿ ಅವರು ತಿಳಿಸಿದ್ದಾರೆ.

ನಗರಸಭೆಗೆ ಅನುಗುಣವಾಗಿ ಸಿಬ್ಬಂದಿ ಇಲ್ಲ: ಗೌರಿಬಿದನೂರು ಪುರಸಭೆಯು ನಗರಸಭೆಯಾಗಿ ಮೇಲ್ದಜೇìಗೇರಿರುವುದರಿಂದ ಪ್ರಸ್ತುತ ನಗರದ ಜನಸಂಖ್ಯೆ 53 ಸಾವಿರ ಇದ್ದು ಪ್ರತಿದಿನದ ನಗರದ ನೈರ್ಮಲ್ಯ ನಿರ್ವಹಣೆ ಮಾಡಲು 82 ಜನ ಪೌರ ಕಾರ್ಮಿಕರಿರಬೇಕು. ಆದರೆ 36 ಗುತ್ತಿಗೆ ನೌಕರರು ಮತ್ತು 24 ಕಾಯಂ ನೌಕರರು ಮಾತ್ರ ಇದ್ದು,

ಅದರಲ್ಲಿ ನೇರ ನೇಮಕಾತಿಯ ಮೂಲಕ 12 ಜನ ನೇಮಕಗೊಂಡಿದ್ದು, ತ್ಯಾಜ್ಯ ನಿರ್ವಹಣಾ ಘಟಕ ನಿರ್ವಹಿಸಬೇಕಾದರೆ ಕನಿಷ್ಟ 10 ಜನ ಸಿಬ್ಬಂದಿ ಅವಶ್ಯಕತೆ ಇದೆ. ಸ್ವಚ್ಛಗಾರರು 82, ಮೇಸ್ತ್ರಿಗಳು 5 ಜನ ಅವಶ್ಯಕತೆ ಇದ್ದರೂ ಪ್ರಸ್ತುತ ಇರುವುದು ಕೇವಲ 52 ಸ್ವಚ್ಛಗಾರರು 2 ಮೇಸ್ತ್ರಿಗಳು ಮಾತ್ರ. 7 ಆಟೋ ಟಿಪ್ಪರ್‌ಗಳ ಅವಶ್ಯಕತೆಯಿದ್ದರೂ ಈಗ ಕೇವಲ 2 ಆಟೋ ಟಿಪ್ಪರ್‌ಗಳು ಮಾತ್ರವಿದ್ದು, 5 ಟಿಪ್ಪರ್‌ಗಳ ಅವಶ್ಯಕತೆ ಇದ್ದು ಅದು ಟೆಂಡರ್‌ ಪ್ರಕ್ರಿಯೆಯಲ್ಲಿದೆ.

ನಗರಸಭಾ ಕಚೇರಿ ಸಿಬ್ಬಂದಿ ಕೊರತೆ: ನಗರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರು 3 ಜನ ಇರಬೇಕು, ಒಬ್ಬರಿದ್ದಾರೆ. ಕಿರಿಯ ಆರೋಗ್ಯ ನಿರೀಕ್ಷಕರು 3 ಜನ ಇರಬೇಕು, ಒಬ್ಬರಿದ್ದಾರೆ. ಪರಿಸರ ಅಭಿಯಂತರರು ಹುದ್ದೆಗೆ 3 ತಿಂಗಳ ಹಿಂದೆ ನಿಯೋಜನೆಗೊಂಡಿದ್ದಾರೆ. ಅಕೌಂಟೆಂಟ್‌ ಹುದ್ದೆಯೂ ಖಾಲಿ ಇದೆ.

ಮಲ ತ್ಯಾಜ್ಯ ವಸ್ತು ಸಂಸ್ಕರಣ ಘಟಕಕ್ಕೆ ತಯಾರಿ: ಯುಜಿಡಿ ಪದ್ಧತಿಯನ್ನು ಅಳವಡಿಸಲು ಹಲವಾರು ವರ್ಷಗಳಿಂದ ಪ್ರಯತ್ನ ಪಟ್ಟರೂ ಸಾಧ್ಯವಾಗದಿರುವುದರಿಂದ ಹಾಗೂ ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಮಲ ವಿಲೇವಾರಿಗೆ ಬದಲಿ ಯೋಜನೆ ರೂಪಿಸಿದ್ದು, ಪ್ರಾಯೋಗಿಕವಾಗಿ ದೇವನಹಳ್ಳಿಯಲ್ಲಿ ಪ್ರಾರಂಭಿಸಿದೆ.

ಅದೇ ರೀತಿಯಲ್ಲಿ ಪ್ರತಿ ನಗರಸಭೆಯಲ್ಲಿ ಪ್ರಾರಂಭಿಸುವಂತೆ ಸೂಚಿಸಿದ್ದು, ಸಮಗ್ರ ಕ್ರಿಯಾ ಯೋಜನೆಯನ್ನು ತಯಾರು ಮಾಡಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿದ್ದು, ಅನುಮೋದನೆ ನಂತರ ನ‌ಗರೋತ್ಥಾನ ಯೋಜನೆಯಲ್ಲಿ ಅಂದಾಜು 2 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಲಾಗುವುದು ಎಂದು ಪರಿಸರ ಅಭಿಯಂತರರಾದ ವೈಶಾಲಿ ತಿಳಿಸಿದ್ದಾರೆ.

4 ಕೋಟಿ ಹಣ ಬಿಡುಗಡೆ: ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ವಹಣೆಗಾಗಿ ತಯಾರಿಸಿ ಸಲ್ಲಿಸಲಾಗಿದ್ದ ಸಮಗ್ರ ಯೋಜನಾ ವರದಿಗೆ ಪೌರಾಡಳಿತ ನಿರ್ದೇಶನಾಲಯದಿಂದ ಅನುಮೋದನೆ ಸಿಕ್ಕಿದೆ ಎಂದು ಆರೋಗ್ಯ ತನಿಖಾಧಿಕಾರಿ ಸುರೇಶ್‌ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಶೇ.37, ರಾಜ್ಯ ಸರ್ಕಾರದ ಶೇ. 11.67 ಹಾಗೂ ನಗರಸಭೆ ಶೇ. 53ರಂತೆ ಹಣ ಭರಿಸುವ ವಿಧಾನದ ಮೂಲಕ ಒಟ್ಟು 4 ಕೋಟಿ ಹಣ ಬಿಡುಗಡೆಯಾಗಿದ್ದು, ಯಂತ್ರೋಪಕರಣ ಖರೀದಿಗೆ 1.93 ಕೋಟಿ, ಸಿವಿಲ್‌ ಕಾಮಗಾರಿಗೆ 2.9 ಕೋಟಿ ವೆಚ್ಚ ಮಾಡಬೇಕಾಗಿದ್ದು, ಈಗಾಗಲೇ ಹಂತ ಹಂತವಾಗಿ ಟೆಂಡರ್‌ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತಿದೆ.

ಮತ್ತೆ ಒಣಕಸ ಹಸಿ ಕಸ ಬೇರೆ ಬೇರೆಯಾಗಿ ಸಂಗ್ರಹಿಸಲು 30.55 ಲಕ್ಷಗಳಲ್ಲಿ 19,100 ಕಸದ ಪ್ಲಾಸ್ಟಿಕ್‌ ಬುಟ್ಟಿಗಳನ್ನು ಖರೀದಿ ಪ್ರಕ್ರಿಯೆ ನಡೆಸಲಾಗಿದ್ದು, ಅದರಲ್ಲಿ 12,500 ಕಸದ ಬುಟ್ಟಿಗಳು ಸಿದ್ಧವಿದೆ ಎಂದು ಆರೋಗ್ಯ ತನಿಖಾಧಿಕಾರಿ ಸುರೇಶ್‌ ತಿಳಿಸಿದ್ದಾರೆ.

ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಪ್ರತಿದಿನ ನಡೆಯುತ್ತಿದೆ. ಕಸವೇ ಬೇರೆ, ಪ್ಲಾಸ್ಟಿಕ್‌ ಬೇರೆ ಮಾಡುವ ಹೊಸ ಯಂತ್ರ (ಬೇಯ್ಲಿಂಗ್‌ ಮಿಷನ್‌ನ್ನು) ಖರೀದಿಸಲಾಗಿದ್ದು ಹೊಸ ಸಿಬ್ಬಂದಿ, ಯಂತ್ರಗಳೊಂದಿಗೆ ಶೀಘ್ರದಲ್ಲಿಯೇ ಘಟಕ ಪ್ರಾರಂಭಿಸಲಾಗುವುದು.
-ಉಮಾಕಾಂತ್‌, ಆಯುಕ್ತರು ನಗರಸಭೆ ಗೌರಿಬಿದನೂರು

ಹೊಸ ಯಂತ್ರೋಪಕರಣಗಳನ್ನು ಖರೀದಿಸಿ ಹೊಸ ಸಿಬ್ಬಂದಿಯೊಂದಿಗೆ ಕಸವೇ ಬೇರೆ ಹಾಗೂ ಪ್ಲಾಸ್ಟಿಕ್‌ ವಸ್ತುವೇ ಬೇರೆ ಮಾಡುವ ಆಧುನಿಕ ಯಂತ್ರಗಳೊಂದಿಗೆ ಘಟಕ ಪ್ರಾರಂಭಿಸಲಾಗುವುದು. ಬೃಹತ್‌ ಗಾತ್ರದಲ್ಲಿ ಉತ್ಪಾದನೆಯಾಗುವ ಕಸ ಮತ್ತು ಪ್ಲಾಸ್ಟಿಕ್‌ ಉಂಡೆಗಳನ್ನು ಟೆಂಡರ್‌ ಮೂಲಕ ಹರಾಜು ಹಾಕಲಾಗುವುದು. ಇಲಾಖೆಯ ಮತ್ತು ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಕಾಯಲಾಗುತ್ತಿದೆ.
-ವೈಶಾಲಿ, ಪರಿಸರ ಅಭಿಯಂತರರು, ಗೌರಿಬಿದನೂರು ನಗರಸಭೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೇಂದ್ರೀಯ ಪ್ರತ್ಯಕ್ಷ ತೆರಿಗೆ ಮಂಡಳಿ ವಾರ್ಷಿಕ ತೆರಿಗೆ ಸಂಗ್ರಹದ ಅಂಕಿಅಂಶವನ್ನು ಇಂದು ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರ, ದಿಲ್ಲಿ ಮತ್ತು ಕರ್ನಾಟಕ ಈ ಮೂರು...

  • ಉಡುಪಿ: ಮಣಿಪಾಲ ಕೆಎಂಸಿಯ ಫಾರ್ಮಕಾಲಜಿ ವಿಭಾಗ ಮತ್ತು ಎಂಐಟಿಯ ಮಾಹಿತಿ ಮತ್ತು ಸಂವಹನ ವಿಭಾಗಗಳು ರೋಗಿಗಳ ಸುರಕ್ಷೆಗಾಗಿ ಔಷಧಗಳ ಪ್ರತಿಕೂಲ ಪರಿಣಾಮಗಳನ್ನು ವರದಿ...

  • ಜಲಮುನಿಗಳು ಅನ್ನುವ ಒಬ್ಬ ಗುರುಗಳಿದ್ದರು. ಅವರು ನೀರಿನ ಮೇಲೆ ನಡೆದಾಡುವ, ಓಡುವ, ಕುಳಿತುಕೊಳ್ಳುವ, ನಿದ್ದೆ ಮಾಡುವ ಸಿದ್ದಿಯನ್ನು ಗಳಿಸಿಕೊಂಡಿದ್ದರು. ಅದನ್ನು...

  • ಮಂಗಳೂರು: ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರು ಚೆನ್ನೈಯ ಗೇರುಗಂಬಕ್ಕಂನಲ್ಲಿ ನಿರ್ಮಿಸುತ್ತಿರುವ ಬೃಹತ್‌ ಹನುಮಾನ್‌ ದೇವಸ್ಥಾನಕ್ಕೆ ಅಗತ್ಯವಾಗಿರುವ ಮರದ...

  • ಬಂಟ್ವಾಳ/ ಮಂಗಳೂರು: ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಅ. 24ರಂದು ದ.ಕ. ಜಿಲ್ಲಾ ಪ್ರವಾಸ ನಡೆಸಲಿದ್ದು, ಬೆಳಗ್ಗೆ 8.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ...