ಮತ್ತೆ ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ

Team Udayavani, Feb 4, 2019, 7:24 AM IST

ಚಿಕ್ಕಬಳ್ಳಾಪುರ: ಹಲವು ದಿನಗಳ ಹಿಂದೆಯಷ್ಟೇ ತನ್ನ ಬೆಲೆ ಹೆಚ್ಚಿಸಿಕೊಂಡು ಗ್ರಾಹಕರ ನಿದ್ದೆಗೆಡಿಸಿ ಅನ್ನದಾತರಿಗೆ ಬಂಪರ್‌ ಹೊಡೆದಿದ್ದ ಟೊಮೆಟೋ ಬೆಲೆ ಮಾರುಕಟ್ಟೆಯಲ್ಲಿ ಮತ್ತೆ ಪಾತಾಳಕ್ಕೆ ಕುಸಿದಿದೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾದ್ಯಂತ ಟೊಮೆ ಟೋ ಬೆಲೆ ಭಾರೀ ಕುಸಿತಗೊಂಡಿದ್ದು, 500, 600 ವರೆಗೂ ಮಾರಾಟಗೊಂಡಿದ್ದ 15 ಕೆ.ಜಿ ಟೊಮೆಟೋ ಬಾಕ್ಸ್‌ ಈಗ 30, 50 ರೂ.ಗೆ ಬಿಕರಿಯಾಗಿದೆ.

ಬರದ ಕಾರ್ಮೋಡಕ್ಕೆ ಸಿಲುಕಿ ತೀವ್ರ ಸಂಕಷ್ಟ ದಲ್ಲಿರುವ ಜಿಲ್ಲೆಯ ಅನ್ನದಾತರಿಗೆ ಇದೀಗ ಟೊಮೆಟೋ ಬೆಲೆ ಕುಸಿತ ಸಹಜವಾಗಿಯೇ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಉತ್ತಮ ಬೆಲೆ ನಿರೀ ಕ್ಷಿಸಿದ್ದ ರೈತರು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಹಲವು ದಿನಗಳ ಹಿಂದೆಯಷ್ಟೇ ರಾಜ್ಯದಲ್ಲಿ ಟೊಮೆ ಟೋ ಬೆಳೆಗೆ ಬಂಪರ್‌ ಬೆಲೆ ಬಂದಿತ್ತು. ಬೆಲೆ ಹೆಚ್ಚಳ ನೋಡಿ ಗ್ರಾಹಕರು ಕಂಗಾಲಾಗಿದ್ದರು. ಆದರೆ ಇದೀಗ ಟೊಮೆಟೋವನ್ನು ಮಾರುಕಟ್ಟೆಯಲ್ಲಿ ಕೇಳ್ಳೋರು ಇಲ್ಲವಾಗಿದೆ.

30, 50 ರೂ.ಗೆ ಮಾರಾಟ: ಜಿಲ್ಲೆಯಲ್ಲಿ ಸದ್ಯ 15 ಕೆಜಿ ಟೊಮೆಟೋ ಬಾಕ್ಸ್‌ ಬರೀ 30 ರಿಂದ 50 ರೂ.ಗೆ ಮಾತ್ರ ಮಾರಾಟಗೊಳ್ಳುತ್ತಿದೆ. ದೂರದ ಊರು ಗಳಿಂದ ಟೊಮೆಟೋವನ್ನು ದುಬಾರಿ ಬಾಡಿಗೆ ಕೊಟ್ಟು ಮಾರುಕಟ್ಟೆಗೆ ತರುವ ಸಾಗಾಣಿಕೆ ವೆಚ್ಚವು ಕೂಡ ಬೆಳೆಗಾರರ ಕೈ ಸೇರದ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣ ವಾಗಿದೆ.

ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಕೂಡ ದರ ಕುಸಿತದ ಪರ್ವ ಶುರವಾಗಿದೆ. ಚಿಂತಾ ಮಣಿ ಮಾರುಕಟ್ಟೆಗೆ ಬಾಗೇಪಲ್ಲಿ, ಶಿಡ್ಲಘಟ್ಟ, ಶ್ರೀನಿವಾಸಪುರ, ಹೆಚ್ಕ್ರಾಸ್‌ ಕೋಲಾರ ಜಿಲ್ಲೆಯ ಹಲವು ಭಾಗಗಳಿಂದ ಟೊಮೆಟೋ ಹರಿದು ಬರುತ್ತಿತ್ತು. ಆದರೆ ಇಲ್ಲಿ ಕೂಡ ದರ ಕುಸಿತಗೊಂಡಿದ್ದು 15 ಕೆ.ಜಿ ಬಾಕ್ಸ್‌ 100 ರೂ. ಗಡಿ ದಾಟಿಲ್ಲ. ಹೈಬ್ರಿಡ್ಜ್ ಟೊಮೆಟೋ ಗರಿಷ್ಠ 80 ರಿಂದ 90 ರೂ.ಗೆ ಮಾತ್ರ ಮಾರಾಟಗೊಳ್ಳುತ್ತಿದೆ.

ಉಳಿದಂತೆ ಎಲ್ಲಾ ರೀತಿಯ ಟೊಮೆಟೋ ದರ ಭಾರೀ ಕುಸಿತಗೊಂಡಿದೆ. ತಿಂಗಳ ಹಿಂದೆ ಚಿಂತಾಮಣಿ ಮಾರುಕಟ್ಟೆಯಲ್ಲಿ 15 ಕೆ.ಜಿ ಟೊಮೆಟೋ ಬಾಕ್ಸ್‌ ಬರೋಬ್ಬರಿ 600 ರಿಂದ 700 ರೂ.ಗೆ ಮಾರಾಟ ಗೊಂಡಿತು. ಚಿಕ್ಕಬಳ್ಳಾಪುರದಲ್ಲಿ 800 ರೂ. ಗಡಿ ದಾಟಿತ್ತು. ಆದರೆ ಒಂದೇ ವಾರದಲ್ಲಿ ಬೆಲೆ ಕುಸಿತ ವಾಗಿರುವುದು ರೈತರನ್ನು ಚಿಂತಗೆಗೀಡು ಮಾಡಿದೆ.

ಟೊಮೆಟೋ ಪ್ರಮುಖ ಬೆಳೆ: ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಟೊಮೆಟೋವನ್ನು ಸಾವಿ ರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವ ರೈತರು ಇದ್ದಾರೆ. ಸದ್ಯ ಜಿಲ್ಲಾದ್ಯಂತ ಬರದ ಕಾರ್ಮೋಡ ಆವರಿಸಿ ಮಳೆ ಬೆಳೆ ಇಲ್ಲದೇ ಅಂತರ್ಜಲ ಕುಸಿತ ಗೊಂಡು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ.

ಆದರೂ ರೈತರು ಉತ್ತಮ ಬೆಲೆ ಸಿಗುವ ನಿರೀಕ್ಷೆ ಯೊಂದಿಗೆ ಅಲ್ಪಸ್ವಲ್ಪ ಇರುವ ನೀರನ್ನು ಬಳಸಿಕೊಂಡು ಬೆಳೆದ ಟೊಮೆಟೋಗೆ ಇದೀಗ ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿರುವುದು ಲಕ್ಷಾಂತರ ರೂ. ಬಂಡವಾಳ ಹಾಕಿ ಟೊಮೆಟೋ ಬೆಳೆದ ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಹಳಷ್ಟು ತೋಟಗಳಲ್ಲಿ ಕೊಯ್ಲಿಗೆ ಬಂದಿರುವ ಟೊಮೆಟೋವನ್ನು ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಹಾಗೆ ಬಿಟ್ಟಿರುವ ದೃಶ್ಯಗಳು ಕಾಣುತ್ತಿವೆ.

ಒಟ್ಟಿನಲ್ಲಿ ಬರದಿಂದ ತತ್ತರಿಸಿರುವ ಜಿಲ್ಲೆಯ ಅನ್ನ ದಾತರಿಗೆ ಇದೀಗ ಟೊಮೆಟೋ ಬೆಲೆ ಮಾರು ಕಟ್ಟೆಯಲ್ಲಿ ಕುಸಿದಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಸಾಲ, ಸೂಲ ಮಾಡಿ ಟೊಮೆಟೋ ಬೆಳೆದಿರುವ ರೈತರ ಪರಿಸ್ಥಿತಿ ಹೇಳತೀರದಾಗಿದ್ದು, ಬೆಲೆ ಕುಸಿತದಿಂದ ಟೊಮೆಟೋ ಬೆಳೆಗಾರರು ಕಣ್ಣೀರು ಸುರಿಸು ವಂತಾಗಿದೆ.

* ಕಾಗತಿ ನಾಗರಾಜಪ್ಪ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ