ದತ್ತ ಜಯಂತಿ ವೇಳೆ ಕಟ್ಟೆಚ್ಚರಕ್ಕೆ ಡಿಸಿ ಸೂಚನೆ

Team Udayavani, Nov 20, 2019, 4:22 PM IST

ಚಿಕ್ಕಮಗಳೂರು: ದತ್ತ ಜಯಂತಿ ಕಾರ್ಯಕ್ರಮ ಡಿ.10 ರಿಂದ 12 ರವರೆಗೆ ಮೂರು ದಿನ ನಡೆಯಲಿದ್ದು, ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ದತ್ತ ಜಯಂತಿ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನಸೂಯ ಜಯಂತಿಯು ಡಿ.10 ರಂದು ಹಾಗೂ ಡಿ.12 ರಂದು ದತ್ತ ಜಯಂತಿ ನಡೆಯಲಿದೆ. ದತ್ತಜಯಂತಿಗೆ ಬರುವ ಭಕ್ತಾದಿ ಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಯಂತಿಯಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಬಂದೋಬಸ್ತ್ ಮಾಡುವುದರ ಜತೆಗೆ ಗಣ್ಯರಿಗೆ ಹಾಗೂ ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.

ಗಾಳಿಕೆರೆ ಮತ್ತು ಮಾಣಿಕ್ಯಧಾರ ರಸ್ತೆಗಳನ್ನು ದುರಸ್ತಿಪಡಿಸಿ ಸೂಚನಾ ಫಲಕಗಳನ್ನು ಅಳವಡಿಸುವುದು ಲೋಕೋಪಯೋಗಿ ಇಲಾಖೆ ಪಂಚಾಯತ್‌ ರಾಜ್‌ ಇಲಾಖೆಯ ಜವಾಬ್ದಾರಿ. ರಸ್ತೆ ಪಕ್ಕದಲ್ಲಿನ ಗಿಡಗಂಟಿಗಳನ್ನು ತೆಗೆಯಬೇಕು. ಅಗತ್ಯವಿರುವ ಕಡೆ ಬ್ಯಾರಿಕೇಡ್‌ ಹಾಕಬೇಕು ಎಂದು ಸೂಚಿಸಿದರು.

ತಾತ್ಕಾಲಿಕ ಶೌಚಾಯಲಯ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ವಹಿಸಿದ ಅವರು, ಹೊನ್ನಮ್ಮನಹಳ್ಳದ ಬಳಿಯ ಸ್ನಾನಘಟ್ಟ ದುರಸ್ತಿಪಡಿಸಿ ಸ್ವತ್ಛಗೊಳಿಸುವಂತೆ ಅತ್ತಿಗುಂಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು. ಜಯಂತಿ ಆಚರಣೆ ನಡೆಯುವ 3 ದಿನ ವಿದ್ಯುತ್‌ ಸಮಸ್ಯೆ ಉಂಟಾಗದಂತೆ ನಿರಂತರ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ, ತಾತ್ಕಾಲಿಕ ಆಸ್ಪತ್ರೆ ತೆರೆದು ಅಗತ್ಯ ಔಷಧಿ, ಆ್ಯಂಬುಲೆನ್ಸ್‌ನೊಂದಿಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. ಭಕ್ತಾದಿಗಳ ಅಗತ್ಯಕ್ಕೆ ತಕ್ಕಂತೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಮಿನಿ ಬಸ್‌ ಸೌಕರ್ಯ ಏರ್ಪಡಿಸುವಂತೆ ಕೆಎಸ್‌ಆರ್‌ಟಿಸಿ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ಎರಡು ಕ್ರೇನ್‌ ಗಳನ್ನು ಸ್ಥಳದಲ್ಲಿ ನಿಯೋಜಿಸುವಂತೆ ತಿಳಿಸಿದರು.

ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ನೀರಿನ ಟ್ಯಾಂಕರ್‌ಗಳನ್ನು ಹೆಚ್ಚಾಗಿ ಒದಗಿಸಬೇಕು. ದೂರವಾಣಿ ಸಂಪರ್ಕ ವ್ಯವಸ್ಥೆಯನ್ನು ಸಮಪರ್ಕವಾಗಿ ಕಲ್ಪಿಸುವಂತೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಗೆ ಆದೇಶಿಸಿದರು.

ದತ್ತ ಪೀಠಕ್ಕೆ ಬರುವ ಸ್ವಯಂ ಸೇವಕರಿಗೆ ಮತ್ತು ಭಕ್ತರಿಗೆ ಜಿಲ್ಲಾಡಳಿತದಿಂದ ಪ್ರಸಾದ ವಿತರಿಸಲಾಗುವುದು. ಜಯಂತಿಯು ಶಾಂತಿಯುತವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು. ಹೊರ ಜಿಲ್ಲೆಯಿಂದ ಬರುವ ಸ್ವಯಂ ಸೇವಕರಿಗೆ ಶಾಂತಿಯಿಂದ ಕಾರ್ಯಕ್ರಮ ನಡೆಯಲು ಸಹಕರಿಸುವಂತೆ ತಿಳಿಸಬೇಕು ಎಂದು ಮುಖಂಡರಲ್ಲಿ ಮನವಿ ಮಾಡಿದರು.

ಚಿಕ್ಕಮಗಳೂರು ಪ್ರವಾಸಿ ತಾಣವಾಗಿದ್ದು, ಪ್ರತಿನಿತ್ಯ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಆದರೆ ದತ್ತ ಜಯಂತಿ ಕಾರ್ಯಕ್ರಮದ ವೇಳೆಯಲ್ಲಿ ದತ್ತಪೀಠಕ್ಕೆ ಡಿ.10, 11 ಮತ್ತು 12 ರಂದು ಪ್ರವಾಸಿಗರನ್ನು ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.

ಕಾರ್ಯಕ್ರಮದ ಭದ್ರತಾ ವ್ಯವಸ್ಥೆ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಮಾಹಿತಿ ನೀಡಿ, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲು ಎಲ್ಲರ ಸಹಕಾರ ಅತೀ ಮುಖ್ಯ. ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲು ಅಗತ್ಯ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ಉಪವಿಭಾಗಾಧಿಕಾರಿ ರೂಪ, ತಹಶೀಲ್ದಾರ್‌ ನಂದಕುಮಾರ್‌, ನಗರಸಭೆ ಪೌರಾಯುಕ್ತ ಪರಮೇಶಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರು ಮತ್ತಿತರರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಾಪುರ: ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಮಂಗಳವಾರದಿಂದ ಆರಂಭವಾಗಿದೆ. ಕೆಲವು ವರ್ಷಗಳಿಂದ ನಿಂತಿದ್ದ ಮರಳುಗಾರಿಕೆಗೆ ಅನುಮತಿ ದೊರೆತು...

  • ಸುಳ್ಯ: ಅಂತರ್ಜಲದ ಸಂರಕ್ಷಣೆ ಅಗತ್ಯ ಈ ಕಾಲಘಟ್ಟದಲ್ಲಿ ದೇಶದ ಭವಿಷ್ಯದಷ್ಟೇ ಮಹತ್ವದ್ದು. ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜತೆಗೂಡಿಸಿ...

  • ಉಡುಪಿ: ಮ್ಯಾನ್‌ ಹೋಲ್‌ಗ‌ಳ್ಳೋ ಅಥವಾ ಮರಣಶ್ಯೆ ದಿಬ್ಬಗಳ್ಳೋ! ಇವುಗಳನ್ನು ಏನೆಂದು ಹೆಸರಿಸಿದರೆ ಸೂಕ್ತ ಎನ್ನುವ ಜಿಜ್ಞಾಸೆ ನಗರವಾಸಿಗಳನ್ನು ಕಾಡುತ್ತಿದೆ. ನೆಲದೊಳಗೆ...

  • ಶೀತ, ಕೆಮ್ಮು ಇದ್ದಾಗ ಏನೇನು ಮಾಡಬೇಕು ಅಂತೆಲ್ಲಾ ಗೊತ್ತೇ ಇದೆ. ಕಷಾಯ ಕುಡಿಯಬೇಕು, ದೇಹವನ್ನು ಬೆಚ್ಚಗಿಡಬೇಕು ಇತ್ಯಾದಿ. ಆದರೆ, ಏನೇನೆಲ್ಲಾ ತಿನ್ನಬಾರದು ಅಂತ...

  • 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...