ಮುಳ್ಳಯ್ಯನಗಿರಿ ಬೆಟ್ಟ ಪ್ರದೇಶ ಕಾಪಾಡಿ

ಸರ್ಕಾರಕ್ಕೆ ಭದ್ರಾ ವೈಲ್ಡ್ ಲೈಫ್‌ ಕನ್ಸರ್ವೇಷನ್‌ ಟ್ರಸ್ಟ್ ಮುಖಂಡ ಡಿ.ವಿ.ಗಿರೀಶ್‌ ಆಗ್ರಹ

Team Udayavani, Oct 10, 2019, 1:32 PM IST

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಬೆಟ್ಟ ಪ್ರದೇಶ ಅತ್ಯಧಿಕ ಪ್ರವಾಸಿಗರಿಂದ ವಾರಾಂತ್ಯದ ಕೊನೆಯಲ್ಲಿ ತುಂಬಿ ತುಳುಕುತ್ತದೆ. ಇದರಿಂದ ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶ ತನ್ನ ಪರಿಸರ ಸೂಕ್ಷ್ಮತೆಯನ್ನು ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ, ಬೆಟ್ಟವನ್ನು ಕಾಪಾಡಬೇಕೆಂದು ಎಂದು ಹಿರಿಯ ಪರಿಸರವಾದಿ ಹಾಗೂ ಭದ್ರಾ ವೈಲ್ಡ್‌ಲೈಫ್‌ ಕನ್ಸರೆÌàಷನ್‌ ಟ್ರಸ್ಟ್‌ ಮುಖಂಡ ಡಿ.ವಿ.ಗಿರೀಶ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪರಿಸರಾಸಕ್ತ ಸಂಘಟನೆಗಳು ಕಳೆದ 5 ವರ್ಷದಲ್ಲಿ ಮುಳ್ಳಯ್ಯನಗಿರಿ ಸೇರಿದಂತೆ ಬಾಬಾಬುಡನ್‌ ಗಿರಿ ಬೆಟ್ಟ ಶ್ರೇಣಿಗೆ ಕೈಮರ ಚೆಕ್‌ಪೋಸ್ಟ್‌ ಮೂಲಕ ಬಂದಿರುವ ಪ್ರವಾಸಿಗರ ಸಂಖ್ಯಾ ಬಾಹುಳ್ಯವನ್ನು ಲೆಕ್ಕ ಹಾಕಿದ್ದು, ಪ್ರತಿವರ್ಷದ ಅಕ್ಟೋಬರ್‌ ತಿಂಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿರುವುದು ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಟ್ಟು ದ್ವಿಚಕ್ರ ವಾಹನಗಳು ಕಾರು ಮತ್ತು ಮಿನಿ ಬಸ್‌ ಹಾಗೂ ಸಾಮಾನ್ಯ ಬಸ್‌ಗಳು ಸೇರಿದಂತೆ 2014 ರಿಂದ 2018 ರವರೆಗೆ ತೆಗೆದುಕೊಂಡರೆ ಅಕ್ಟೋಬರ್‌ ತಿಂಗಳು ಹೆಚ್ಚಿನ ಪ್ರವಾಸಿಗರನ್ನು ಸೆಳೆದ ತಿಂಗಳಾಗಿದೆ.

ಮುಳ್ಳಯ್ಯನಗಿರಿಗೆ ಮೇ ಮತ್ತು ಜೂನ್‌ ತಿಂಗಳಲ್ಲೂ ಹೆಚ್ಚು ಪ್ರವಾಸಿಗರು ಬಂದಿದ್ದಾರೆ. 2014ರ ಮೇ ತಿಂಗಳಲ್ಲಿ 8800 ಪ್ರವಾಸಿಗರು ಬಂದಿದ್ದರೆ, 2015 ರಲ್ಲಿ 12 ಸಾವಿರ ಹಾಗೂ 2016ರಲ್ಲಿ 11 ಸಾವಿರ ಹಾಗೂ 2017ರಲ್ಲಿ 17 ಸಾವಿರ ಹಾಗೂ 2018ರಲ್ಲಿ 16 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. 2017ರ ಜೂನ್‌ ತಿಂಗಳಲ್ಲೂ 15500 ಮಂದಿ ಪ್ರವಾಸಿಗರು ಈ ಬೆಟ್ಟ ಪ್ರದೇಶಕ್ಕೆ ಬಂದಿದ್ದರೆ, 2018ರಲ್ಲಿ ಅದು 16,400ಕ್ಕೆ ಏರಿದೆ. 2017ರ ಜುಲೈ ತಿಂಗಳಲ್ಲಿ ಈ ಸಂಖ್ಯೆ 16,300ಕ್ಕೆ ಬಂದು ನಿಂತಿದೆ ಎಂದು ತಿಳಿಸಿದ್ದಾರೆ.

ಅತ್ಯಧಿಕ ಪ್ರವಾಸಿಗರನ್ನು ಸೆಳೆಯುವ ಈ ಪ್ರದೇಶಕ್ಕೆ 2014ರ ಅಕ್ಟೋಬರ್‌ ತಿಂಗಳಲ್ಲಿ 12,400 ಮಂದಿ ಪ್ರವಾಸಿಗರು ಬಂದು ಹೋಗಿದ್ದರೆ, 2015ರಲ್ಲಿ 11,600 ಮಂದಿ ಪ್ರವಾಸಿಗರು ಬಂದಿದ್ದಾರೆ.
2016ರಲ್ಲಿ ಈ ಸಂಖ್ಯೆ 19,700ಕ್ಕೆ ಏರಿದ್ದು, 2017ರಲ್ಲಿ ಇದು 16,400ಕ್ಕೆ ನಿಂತರೆ, 2018ರಲ್ಲಿ 18,600 ಮಂದಿ ಪ್ರವಾಸಿಗರು ಈ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರವಾಸಿಗರು ಕಳೆದ 5 ವರ್ಷಗಳಲ್ಲಿ ಭೇಟಿ ನೀಡಿರುವುದನ್ನು ಗಮನಿಸಿದರೆ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ನಂತರ ಎಲ್ಲಾ ತಿಂಗಳಲ್ಲೂ ಸಾಮಾನ್ಯವಾಗಿ 6 ಸಾವಿರದಿಂದ 19 ಸಾವಿರ ಮಂದಿ ಪ್ರವಾಸಿಗರು ಬಂದು ಹೋಗಿರುವುದು ಕಂಡು ಬರುತ್ತದೆ ಎಂದು ವಿವರಿಸಿದ್ದಾರೆ.

ರಾಜ್ಯದ ಅತಿ ಎತ್ತರದ ಪ್ರದೇಶ ಮುಳ್ಳಯ್ಯನಗಿರಿ. ಇದರ ತಪ್ಪಲಲ್ಲಿ ಇಳಿಜಾರಿನಲ್ಲಿ ನೂರಾರು ಕಾಫಿ ತೋಟಗಳಿವೆ. ಅನೇಕ ಹಳ್ಳಿಗಳು ಇದ್ದು, ಆ ಜನರಿಗೆ ಬೆಟ್ಟದಲ್ಲಿ ಹುಟ್ಟಿ ಕೆಳಗಿಳಿಯುವ ಹಳ್ಳಗಳ ನೀರೆ
ಬದುಕಿಗೆ ಜೀವಜಲ. ಆದರೆ, ಜಿಲ್ಲಾಡಳಿತ ಈ ಬೆಟ್ಟ ಪ್ರದೇಶ ಎಷ್ಟು ವಾಹನಗಳನ್ನು ತಡೆಯಬಲ್ಲದು ಹಾಗೂ ಈ ಪ್ರದೇಶಕ್ಕೆ ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ವಾಹನಗಳನ್ನು ಓಡಾಡಲು ಬಿಡಬೇಕೆಂಬ ಯಾವ ನಿಯಂತ್ರಣವನ್ನು ಈವರೆಗೂ ಹಾಕಲು ಮುಂದಾಗಿಲ್ಲ ಎಂದು ದೂರಿದ್ದಾರೆ.

ಪ್ರತಿ ಶನಿವಾರ ಭಾನುವಾರ ಈ ಬೆಟ್ಟದ ತಪ್ಪಲಲ್ಲಿ ಇರುವ ಕಾಫಿ ತೋಟಗಳು ಹಾಗೂ ಹಳ್ಳಿಗಳ ಜನಕ್ಕೆ ಅಲ್ಲಿಂದ ಚಿಕ್ಕಮಗಳೂರು ನಗರಕ್ಕೆ ಬಂದು ಹಿಂದಕ್ಕೆ ಹೋಗುವುದು ಒಂದು ದೊಡ್ಡ ಸವಾಲಾಗಿದೆ. ಮೊದಲು ಕೇವಲ ಅರ್ಧ ಅಥವಾ ಒಂದು ಗಂಟೆಯೊಳಗೆ ತಮ್ಮ ಮನೆ ಸೇರುತ್ತಿದ್ದ ಸ್ಥಳೀಯರು ಈಗ ವಾರಾಂತ್ಯದಲ್ಲಿ ಹಲವು ಗಂಟೆ ವಾಹನ ದಟ್ಟಣೆಯೊಳಗೆ ಸೇರಿ ನಿಧಾನವಾಗಿ ಮನೆ ತಲುಪಬೇಕಾಗಿದೆ. ವಾರಾಂತ್ಯದ ಎರಡು ದಿನದ ದೈನಂದಿನ ಚಟುವಟಿಕೆಗಳಿಗೂ ಸಮಸ್ಯೆಯಾಗಿದೆ.

ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಬೆಟ್ಟವನ್ನು ಕೆತ್ತಿ ಅಲ್ಲಿನ ರಸ್ತೆಗಳನ್ನು ಅಗಲಗೊಳಿಸಲು ಮುಂದಾಗಿ ಮೊನ್ನೆ ಬಂದ ಭಾರೀ ಮಳೆಗೆ ಅನೇಕ ಕಡೆ ಬೆಟ್ಟದಲ್ಲಿ ಮಣ್ಣು ಕುಸಿತ ಉಂಟಾಗಿತ್ತು. ಆನಂತರವೂ ಸಹ ಜಿಲ್ಲಾಡಳಿತ ಪ್ರವಾಸಿ ಸಂಖ್ಯೆಗೆ ಮಿತಿ ಹಾಕುವ ಹಾಗೂ ಹೋಗಿಬರಲು ಸಮಯ ನಿಗದಿ ಮಾಡುವ ಆಲೋಚನೆಯನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.

ಬಾಬಾಬುಡನ್‌ಬೆಟ್ಟ ಶ್ರೇಣಿಯ ಪ್ರೇಕ್ಷಣೀಯ ಸ್ಥಳಗಳಿಗೆ ಎಲ್ಲಾ ಪ್ರವಾಸಿ ವಾಹನಗಳನ್ನು ಬಿಡುವ ಬದಲು ಕೈಮರದ ಬಳಿ ವಾಹನ ನಿಲುಗಡೆಗೆ ಖಾಸಗಿಯವರ ಜಮೀನಿನಲ್ಲಿ ಅವರನ್ನು ಒಪ್ಪಿಸಿ ವಾಹನ ನಿಲುಗಡೆಗೆ ಅವಕಾಶ ಮಾಡಿ ಅಲ್ಲಿಂದ ಮಿನಿ ಬಸ್‌ಗಳಲ್ಲಿ ಬೆಟ್ಟ ಶ್ರೇಣಿಯ ವಿವಿಧ ಸ್ಥಳಗಳಿಗೆ ಪ್ರವಾಸಿಗರು ಹೋಗುವಂತೆ ಮಾಡಲು ಪರಿಸರಾಸಕ್ತರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಈವರೆಗೆ ಜಿಲ್ಲಾಡಳಿತ ಆ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.

ಮುಳ್ಳಯ್ಯನಗಿರಿ ಸೇರಿದಂತೆ ಬಾಬಾಬುಡನ್‌ ಬೆಟ್ಟ ಶ್ರೇಣಿ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶ. ಇಲ್ಲಿ ವಾರಾಂತ್ಯದಲ್ಲಿ ಸಾವಿರಾರು ವಾಹನಗಳು ಪ್ರವಾಸಿಗರನ್ನು ಹೊತ್ತು ಬರುವುದಕ್ಕೆ ಒಂದು ನಿಯಂತ್ರಣವಿರಬೇಕು. ವಾರಾಂತ್ಯ ಬಂತೆಂದರೆ ವಾಹನ ದಟ್ಟಣೆ, ಅವುಗಳ ಶಬ್ದ, ಜನರ ಗಲಾಟೆ, ಮೋಜು-ಮಸ್ತಿ ಎಲ್ಲವೂ ಸೇರಿ ಪ್ರಶಾಂತ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ. ವನ್ಯಜೀವಿಗಳ ಬದುಕಿಗೂ ಇದು ಮಾರಕ. ಜೊತೆಗೆ ಇಡಿ ಬೆಟ್ಟ ತ್ಯಾಜ್ಯ ವಸ್ತುಗಳ ಸಂಗ್ರಹಾಗಾರವೂ ಆಗಿದೆ. ಎಲ್ಲವನ್ನು ತಡೆಯುವ ಬಗ್ಗೆ ಜಿಲ್ಲಾಡಳಿತ ತಕ್ಷಣ ಆಲೋಚಿಸಬೇಕು ಎಂದು ಭದ್ರಾ ವೈಲ್ಡ್‌ ಲೈಫ್‌
ಕನ್ಸರ್ವೇಷನ್‌ ಟ್ರಸ್ಟ್‌ನ ಡಿ.ವಿ.ಗಿರೀಶ್‌ ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ