ಮೋದಿ ಭೇಟಿ ನಂತರ ರಾಜ್ಯದಲ್ಲಿ ಹೊಸ ಅಲೆ

Team Udayavani, May 11, 2018, 4:11 PM IST

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಭೇಟಿ ನಂತರ ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಯಾಗಿದ್ದು, ಶಿವಮೊಗ್ಗ ನಗರ ಹಾಗೂ ಜಿಲ್ಲೆ ಸೇರಿದಂತೆ ರಾಜ್ಯದ ಅತೀ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಮೂಹ ಈಗಾಗಲೇ ಬಿಜೆಪಿಯತ್ತ ಮುಖ ಮಾಡಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು. 

ಕಳೆದ ಬಾರಿ ಅನುಭವದ ಕೊರತೆ ಇತ್ತು. ಆದರೆ ಈ ಬಾರಿ ಅಧಿಕಾರಕ್ಕೆ ಬಂದು ದೇಶದಲ್ಲೆ ನಂ. 1 ಸ್ಥಾನಕ್ಕೆ ರಾಜ್ಯವನ್ನು ಕೊಂಡೊಯ್ಯಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಯಡಿಯೂರಪ್ಪ ಅವರನ್ನು ಬೆಂಬಲಿಸುವಂತಹ ಬಹುದೊಡ್ಡ ವರ್ಗ ಸೃಷ್ಟಿಯಾಗಿದೆ. ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.

ಪ್ರಚಾರ ಸಮಿತಿ ಹೇಳಿದಂತೆ ಸುರಪುರ, ಗದಗ ಜಿಲ್ಲೆ, ಸಿರುಗುಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದೇನೆ. ಕ್ಷೇತ್ರ ಬಿಟ್ಟು ಹೋಗೇ ಇಲ್ಲ ಎಂಬ ಆರೋಪ ಸತ್ಯಕ್ಕೆ ದೂರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

ಅಭಿವೃದ್ಧಿಗೆ ಒತ್ತು: ನಗರದ ಪರಿಸರ ಪ್ರೇಮಿಗಳು ಈಗಾಗಲೇ ತಮ್ಮನ್ನು ಭೇಟಿ ಮಾಡಿದ್ದು, ಕೆರೆ ಹಾಗೂ ಪಾರ್ಕ್‌ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದಾರೆ. ಚುನಾವಣೆ ಮುಗಿದ ನಂತರ ಈ ಎರಡೂ ಕಾರ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. 

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರಂಭದ ದಿನಗಳಲ್ಲಿಯೇ ರಾಜ್ಯದಲ್ಲಿನ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಕ್ರಮ
ಕೈಗೊಳ್ಳಲಾಗುವುದು. ಈ ಮೂಲಕ ಕೆರೆಗಳನ್ನು ಸಂರಕ್ಷಿಸಿ ನೀರನ್ನು ಉಳಿಸುವಂತಹ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಮತದಾರರ ನಕಲಿ ಕಾರ್ಡ್‌ಗಳನ್ನು ತಯಾರಿಸುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಇಂತಹ ಎಲ್ಲಾ ತಂತ್ರಗಾರಿಕೆಗಳು ಕಾಂಗ್ರೆಸ್‌ನವರಿಗೆ ಮಾತ್ರ ತಿಳಿದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಸ್‌. ರುದ್ರೇಗೌಡ ಮಾತನಾಡಿ, ಈಗಾಗಲೇ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ, ಪಕ್ಷದ ಪರವಾಗಿ ಮನವಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ, ಐಟಿ ಸೆಲ್‌ ಮುಂತಾದವುಗಳ ಮೂಲಕ ಪ್ರಚಾರ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ಏಳೂ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ. ಈ ಬಾರಿ ಎಲ್ಲಾ 7 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ
ವ್ಯಕ್ತಪಡಿಸಿದರು.

ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆಗೆ ಬಂದಿದೆ. ಬೇರೆ ಎಲ್ಲಾ ಪಕ್ಷಗಳಿಗಿಂತ ವಿಭಿನ್ನವಾದ ಪಕ್ಷ ಬಿಜೆಪಿ. ನಿರೀಕ್ಷೆಗೂ ಮೀರಿ ಮನೆ ಮನೆ ಭೇಟಿ ಕಾರ್ಯ ನಡೆದಿದೆ. ಪರಿವರ್ತನಾ ಯಾತ್ರೆ, ದಲಿತರ ಮನೆಗಳಲ್ಲಿ ಉಪಹಾರ, ಸ್ಲಂ ವಾಸ್ತವ್ಯದಂತಹ ವಿನೂತನ ಕಾರ್ಯಕ್ರಮಗಳು ಫಲ ನೀಡಲಿವೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಎಸ್‌. ದತ್ತಾತ್ರಿ, ಆರ್‌.ಕೆ.ಸಿದ್ದರಾಮಣ್ಣ, ಎನ್‌.ಜೆ. ರಾಜಶೇಖರ್‌, ಡಿ.ಎಸ್‌. ಅರುಣ್‌, ಪಿ.
ರುದ್ರೇಶ್‌, ಬಿ.ಆರ್‌. ಮಧುಸೂದನ್‌, ಹಿರಣ್ಣಯ್ಯ ಮತ್ತಿತರರು ಇದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ