ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಆ್ಯಂಬುಲೆನ್ಸ್ ಪ್ರಯಾಣ: 28 ಸಾವಿರ ಬಾಡಿಗೆ!
Team Udayavani, Apr 13, 2020, 2:26 PM IST
ಚಿಕ್ಕಮಗಳೂರು: ಕೋವಿಡ್-19 ವೈರಸ್ ಇಡೀ ಪ್ರಪಂಚವನ್ನೆ ತಲ್ಲಣಗೊಳಿಸುತ್ತಿದೆ. ಸರ್ಕಾರಗಳು ಸೋಂಕು ತಡೆಗಟ್ಟಲು ಹರಸಾಹಸ ಪಡುತ್ತಿವೆ. ಇಂತಹ ಹೊತ್ತಿನಲ್ಲಿಯೇ ಆ್ಯಂಬುಲೆನ್ಸ್ ಮಾಲೀಕರು ದುಬಾರಿ ಹಣ ಪಡೆದು ಸಾರ್ವಜನಿಕರನ್ನು ಒಂದೆಡೆಯಿಂದ ಮತ್ತೊಂದೆಡೆ ಕರೆದುಕೊಂಡು ಹೋಗುವ ಧಂದೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಇಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಐದು ಜನರನ್ನು ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿದ್ದ ಅಂಬುಲೆನ್ಸ್ ಅನ್ನು ಲಿಂಗದಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದು ತನಿಖೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹೊಸ ಗಂಗೂರು ಗ್ರಾಮಕ್ಕೆ ಕೆ ಎ 53, 3894 ನೊಂದಣಿಯ ಅಂಬುಲೆನ್ಸ್ ನಲ್ಲಿ ಐವರನ್ನು ಕರೆದುಕೊಂಡು ಬರುವ ವೇಳೆ ಲಿಂಗದಹಳ್ಳಿ ಚೆಕ್ ಪೋಸ್ಟ್ ನಲ್ಲಿ ತಡೆದು ವಿಚಾರಣೆ ನಡೆಸಿದಾಗ ಅಂಬುಲೆನ್ಸ್ ನಲ್ಲಿ ಪ್ರಯಾಣ ಮಾಡುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.
ಈತ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 28 ಸಾವಿರ ಪಡೆದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆ್ಯಂಬುಲೆನ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.