ಸೇತುವೆ ಕಾಮಗಾರಿ ಅರ್ಧಂಬರ್ಧ
•ಅನುದಾನದ ಕೊರತೆಯಿಂದ ನಿಂತ ಕಾಮಗಾರಿ•ಗ್ರಾಮಸ್ಥರ ಪರದಾಟ
Team Udayavani, Jun 11, 2019, 9:01 AM IST
ಮುರಿದು ಬಿದ್ದಿರುವ ಕರ್ಕೇಶ್ವರ ಬಳಿಯ ಹಳ್ಳದ ಸೇತುವೆ.
ಬಾಳೆಹೊನ್ನೂರು: ಸಮೀಪದ ಕರ್ಕೇಶ್ವರ ಗ್ರಾ.ಪಂ.ವ್ಯಾಪ್ತಿಯ ಮೇಲ್ಪಾಲ್ ಮುಖ್ಯ ರಸ್ತೆಯಿಂದ ಕಾಪಿಕೆರೆಹಕ್ಲು ಹಾಗೂ ಕಳ್ಳಿಕೊಪ್ಪ ಹಾಗೂ ಇತರೇ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯದ ಹಳ್ಳಕ್ಕೆ, 2016-17ನೇ ಸಾಲಿನಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿಯಿಂದ 2ಲಕ್ಷ ರೂ. ಅನುದಾನದಲ್ಲಿ ಮಂಜೂರಾಗಿದ್ದ ಸೇತುವೆ ಕಾಮಗಾರಿ ಅನುದಾನದ ಕೊರತೆಯಿಂದಾಗಿ ಅರ್ಧಕ್ಕೆ ನಿಂತಿದೆ. ಹಾಗಾಗಿ, ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಇನ್ನಿಲ್ಲದ ಸಮಸ್ಯೆಗಳು ತಲೆದೋರಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ಮಳೆಗಾಲದಲ್ಲಿ ಹಳ್ಳದಲ್ಲಿ ನೀರಿನ ಪ್ರಮಾಣ ಏರಿಕೆಯಾಗುವುದರಿಂದ ಕಾಪಿ ಕೆರೆ ಹಕ್ಲು ಹಾಗೂ ಕಳ್ಳಿಕೊಪ್ಪ, ಹರದಹಡ್ಲು ಗ್ರಾಮಗಳಿಗೆ ತೆರಳಲು ಗ್ರಾಮಸ್ಥರು ಹಾಗೂ ವಾಹನ ಸವಾರರು ಓಡಾಡಲು ಬಹಳಷ್ಟು ಸಮಸ್ಯೆಯುಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೂಡಲೇ ಸಮಸ್ಯೆ ಬಗೆಹರಿಸಿ: ಇದೇ ಹಳ್ಳಕ್ಕೆ ಮತ್ತೂಂದು ಕಡೆ ಕಾಲು ಸೇತುವೆ ನಿರ್ಮಿಸಿದ್ದು, ಅದೂ ಕೂಡ ಕಳೆದ ವರ್ಷ ಸುರಿದ ಮಳೆಯಿಂದಾಗಿ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕಾಲು ಸೇತುವೆ ಕುಸಿದು ಬಿದ್ದಿದೆ. ಇದರಿಂದ, ತಾತ್ಕಾಲಿಕವಾಗಿ ಗ್ರಾಮಗಳಿಗೆ ತೆರಳಲು ಅಡಕೆ ಮರಗಳ ಕಾಲುದಾರಿ ಸಂಪರ್ಕವನ್ನು ಗ್ರಾಮಸ್ಥರೇ ನಿರ್ಮಿಸಿಕೊಂಡು ಓಡಾಡುವಂತಾಗಿದೆ. ಹಾಗಾಗಿ, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.