ಮುಖ್ಯಮಂತ್ರಿ ಕುಮಾರಸ್ವಾಮಿ ಪೇಪರ್ ಟೈಗರ್: ಸಿ.ಟಿ.ರವಿ
Team Udayavani, Nov 5, 2018, 6:05 AM IST
ಚಿಕ್ಕಮಗಳೂರು: ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪೇಪರ್ ಟೈಗರ್ ಆಗಿದ್ದಾರೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾದ ಕುರಿತು ಸರಕಾರ ಬ್ಯಾಂಕ್‌ಗಳಿಗೆ ಆದೇಶ ನೀಡಲಿ. ಕೇವಲ ಸಾಲಮನ್ನಾ ಮಾಡುತ್ತೇವೆಂದು ಪತ್ರಿಕಾ ಹೇಳಿಕೆ ನೀಡಿದರೆ ಬ್ಯಾಂಕ್‌ನವರು ಸುಮ್ಮನಿರುತ್ತಾರಾ? ಆದೇಶ ಹೊರಡಿಸುವವರೆಗೂ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್ ನೀಡುತ್ತಾರೆ ಎಂದು ತಿಳಿಸಿದರು.
ರೈತರ ಸಾಲವನ್ನು ಸರ್ಕಾರವೇ ಪಾವತಿ ಮಾಡಲಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಯಿಂದ ಆದೇಶ ಹೊರಡಿಸಬೇಕು. ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದರೆ ಬ್ಯಾಂಕ್‌ನವರು ಯಾಕೆ ನೋಟಿಸ್ ನೀಡುತ್ತಾರೆ ಎಂದು ಪ್ರಶ್ನಿಸಿದರು. ರೈತರ ಸಾಲಕ್ಕೆ ಸರ್ಕಾರವೇ ಜವಾಬ್ದಾರಿ ಎಂದು ಬ್ಯಾಂಕ್‌ಗೆ ಸರ್ಕಾರವೇ ಹೇಳಬೇಕು. ಸರ್ಕಾರ ಬರಿ ಪೇಪರ್ ಹೇಳಿಕೆ ನೀಡಿದರೆ ಸಾಲದು, ರೈತರ ಸಾಲಮನ್ನಾ ಮಾಡಬೇಕು ಎಂಬುದು ನಮ್ಮ ಆಗ್ರಹ ಎಂದರು.