ಅಕಾಲಿಕ ಮಳೆ: ಕಾಫಿ ಬೀಜ ನದಿಪಾಲು
ಸಂಕಷ್ಟಕ್ಕೊಳಗಾದ ಕಾಫಿ ಬೆಳೆಗಾರರು|ಸರ್ಕಾರದ ನೆರವಿಗೆ ರೈತರ ಒತ್ತಾಯ
Team Udayavani, Feb 23, 2021, 5:59 PM IST
ಕೊಟ್ಟಿಗೆಹಾರ: ಭಾನುವಾರ ರಾತ್ರಿ ಸುರಿದ ಮಳೆಗೆ ಬಣಕಲ್‌ನಲ್ಲಿ ಕಣದಲ್ಲಿ ಒಣ ಹಾಕಿದ ಕಾಫಿಬೀಜ ಕೊಚ್ಚಿ ಹೋಗಿ ನದಿಪಾಲಾಗಿದೆ. ಬಣಕಲ್‌ನ ಜಿಪಂ ಸದಸ್ಯ ಶಾಮಣ್ಣ ಬಣಕಲ್ ಅವರ ಕಣದಲ್ಲಿ ಒಣ ಹಾಕಿದ್ದ ಕಾಫಿಬೀಜ ಭಾನುವಾರ ಸುರಿದ ಮಳೆಗೆ ಕೊಚ್ಚಿ ಹೋಗಿ ಹೇಮಾವತಿ ನದಿ ಪಾಲಾಗಿದೆ.
ಈ ಬಗ್ಗೆ ಮಾತನಾಡಿದ ಜಿಪಂ ಸದಸ್ಯ ಶಾಮಣ್ಣ ಬಣಕಲ್, ಭಾನುವಾರ ರಾತ್ರಿ ದಿಢೀರ್ ಸುರಿದ ಮಳೆಯಿಂದ ಒಣ ಹಾಕಿದ ಕಾಫಿ ಬೀಝ ರಕ್ಷಿಸಲು ಹರಸಾಹಸ ಪಡಬೇಕಾಯಿತು. ಸುಮಾರು 10 ಮೂಟೆಯಷ್ಟು ಕಾಫಿಬೀಜ ಕೊಚ್ಚಿ ಹೋಗಿ ಹೇಮಾವತಿ ನದಿ ಸೇರಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ ಎಂದರು.
ಸೋಮವಾರವೂ ಬಣಕಲ್, ಕೊಟ್ಟಿಗೆಹಾರ, ಗುತ್ತಿ, ಹೆಸಗೋಡು ಸುತ್ತಮುತ್ತ ಮಳೆ ಮುಂದುವರಿದಿದ್ದು ಹೆಸಗೋಡಿನ ಕಾಫಿ ಬೆಳೆಗಾರ ರಾಹುಲ್ ಎಂಬುವವರು ಕಣದಲ್ಲಿ ಒಣ ಹಾಕಿದ ಕಾಫಿಬೀಜ ಬಹುತೇಕ ಕೊಚ್ಚಿ ಹೋಗಿದ್ದು ಕಾಫಿಗಿಡದಲ್ಲಿ ಹಣ್ಣಾಗಿದ್ದ ಕಾಫಿಬೀಜ ಮಣ್ಣು ಪಾಲಾಗಿದೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾಫಿ ಬೆಳೆಗಾರ ರಾಹುಲ್, ವರ್ಷ ಪೂರ್ತಿ ಜತನದಿಂದ ಕೃಷಿ ಮಾಡಿ ಫಸಲು ಕೈಸೇರುವ ವೇಳೆಗೆ ಅಕಾಲಿಕ ಮಳೆ ಸುರಿದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಬರಬೇಕು ಎಂದರು.