ಹದಗೆಟ್ಟ ರಸ್ತೆಯಲ್ಲಿ ಓಡಾಡೋದೇ ದುಸ್ತರ!

Team Udayavani, Nov 5, 2019, 4:34 PM IST

ಶೃಂಗೇರಿ: ತಾಲೂಕಿಲ್ಲಿ ನಕ್ಸಲೀಯರ ಹೋರಾಟದ ಸಂದರ್ಭದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಈಗ ಸಾರ್ವಜನಿಕರ ಕೂಗೇ ಕೇಳಿಸುತ್ತಿಲ್ಲ ಎಂಬ ಮಾತು ಕೇಳಿಬರತೊಡಗಿದೆ. ಮಳೆಗಾಲದಲ್ಲಿ ಹೊಂಡ ಗುಂಡಿಗಳಿಂದ ಕೂಡಿದ ಕೆಸರು, ಬೇಸಿಗೆಯಲ್ಲಿ ಧೂಳು, ಅಲ್ಲಲ್ಲಿ ಡಾಂಬರಿನ ಕುರುಹು ದುರಸ್ತಿ ಕಾಣದ ರಸ್ತೆ, ಜೆಲ್ಲಿ ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ವಾಹನಗಳು ಸಂಚರಿಸುವ ಮಾತು ಇರಲಿ, ನಡೆದಾಡುವುದೇ ದುಸ್ತರವಾಗಿದೆ.

ಇದು ತಾಲೂಕಿನ ಬೇಗಾರು ಹಾಗೂ ಮರ್ಕಲ್‌ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಥೆ-ವ್ಯಥೆ. ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮಳೆಯ ದೇವರೆಂದೇ ಪ್ರಸಿದ್ಧಿಯಾಗಿರುವ ಕಿಗ್ಗಾಕೆ ತೆರಳುವ ಕೆಲ್ಲಾರ್‌ ಬೈಪಾಸ್‌ ರಸ್ತೆಯಿಂದ ಸಾಗುವ ಕೋಗಿನ್‌ಬೈಲ್‌ ಮಾರ್ಗದಿಂದ ಸುಮಾರು 7-8 ಕಿ.ಮೀ. ದೂರವಿರುವ ನಕ್ಸಲ್‌ ಪೀಡಿತ ಪ್ರದೇಶವಾಗಿದ್ದ ತಲವಂತಿಕುಡಿಗೆ, ತಾರುಳ್ಳಿಕೊಡಿಗೆ, ದೇವಾಲೆಕೊಪ್ಪ, ಬೆಳಗೋಡುಕೊಡಿಗೆ ಮತ್ತಿತರ ಹಳ್ಳಿಗಳು ಈ ರಸ್ತೆಯನ್ನು ಆಶ್ರಯಿಸಬೇಕಾಗಿದೆ. ಆಸ್ಪತ್ರೆ, ಶಿಕ್ಷಣ, ಸರ್ಕಾರಿ ಕಚೇರಿಗಳ ಕೆಲಸಕ್ಕಾಗಿ ಪಟ್ಟಣವನ್ನೇ ಅವಲಂಬಿಸಬೇಕಾದ ಗ್ರಾಮೀಣ ಭಾಗದ ಜನ ಈ ಹದಗೆಟ್ಟ ರಸ್ತೆಯಿಂದ ತೀವ್ರ ತೊಂದರೆಗೊಳಗಾಗಿದ್ದಾರೆ.

ವಿಶೇಷವೆಂದರೆ, ಪಕ್ಕದ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸುವ ಕಲಿಗೆ, ದೇವಾಲೆಕೊಪ್ಪ ರಸ್ತೆಯವರೆಗೆ ಒಂದಷ್ಟು ದೂರ ಡಾಂಬರೀಕರಣವಾಗಿದೆ. ಇಲ್ಲಿಯೇ ಸಮೀಪದ ದೇವಾಲೆಕೊಪ್ಪದಲ್ಲಿ ಎ.ಎನ್‌.ಎಫ್‌. ಪಡೆಯ ಕ್ಯಾಂಪ್‌ ಇರುವುದರಿಂದ ಉತ್ತಮ ರಸ್ತೆಯಾಗಿದೆ ಎನ್ನುತ್ತಾರೆ ಸಾರ್ವಜನಿಕರು. ಇದರಿಂದ ಮುಂದಿನ ರಸ್ತೆ ಸ್ಥಿತಿ ಅಧೋಗತಿಯಾಗಿದೆ. ಈ ಭಾಗದ ಜನರು ಶೃಂಗೇರಿ ಪಟ್ಟಣವನ್ನೇ ಆಶ್ರಯಿಸಬೇಕಾಗಿರುವುದರಿಂದ ಇಲ್ಲಿನ ರಸ್ತೆ ಅಭಿವೃದ್ಧಿ ಕಾಣಬೇಕಾಗಿದೆ. ಈ ಭಾಗದಲ್ಲಿ 28 ಪರಿಶಿಷ್ಟ ಪಂಗಡದ ಕುಟುಂಬಗಳಿದ್ದು, ರಸ್ತೆ ದುರಸ್ತಿಯಾಗದೆ ಪರದಾಡುವಂತಾಗಿದೆ. ಕಳೆದ 2ದಶಕಗಳ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ ಈ ಭಾಗದ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು, ಡಾಂಬರೀಕರಣಗೊಳ್ಳಲು ಜಲ್ಲಿ ಹಾಕಲಾಗಿತ್ತು. ಆದರೆ ಡಾಂಬರೀಕರಣಗೊಳ್ಳದೆ ರಸ್ತೆ ಅಲ್ಲಿಂದ ಇಲ್ಲಿಯವರೆಗೂ ಅಭಿವೃದ್ಧಿಗೊಳ್ಳಲೇ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮೀಣ ಭಾಗದಲ್ಲಿ ಬಸ್‌ ಸಂಚಾರ ಇಲ್ಲದಿರುವ ಕಾರಣ ಗ್ರಾಮಸ್ಥರಿಗೆ ಸ್ವಂತ ವಾಹನ ಅವಶ್ಯಕ ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳನ್ನು ಪೋಷಕರು ಕರೆದೊಯ್ಯುವ ಅನಿವಾರ್ಯತೆ ಇದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ದುಸ್ತರವಾಗಿದೆ. ರಸ್ತೆಯಲ್ಲಿ ಎದ್ದಿರುವ ಜಲ್ಲಿ ಕಲ್ಲುಗಳು ಹೊಂಡ-ಗುಂಡಿಗಳನ್ನು ತಪ್ಪಿಸಿ ವಾಹನ ಓಡಿಸುವುದೇ ಗ್ರಾಮಸ್ಥರಿಗೆ ಸಾಹಸದ ಕೆಲಸವಾಗಿದೆ. ರಸ್ತೆ ದುರಸ್ತಿ ಸಾರ್ವಜನಿಕರ ಪ್ರಮುಖ ಬೇಡಿಕೆ‌ಯಾಗಿದ್ದರೂ ಪ್ರತೀ ಚುನಾವಣೆಯಲ್ಲಿಯೂ ಜನಪ್ರತಿನಿ ಧಿಗಳ ಭರವಸೆ ಮಾತ್ರ ಕೇಳುವಂತಾಗಿದೆ.

ಅರಣ್ಯ ಇಲಾಖೆ ಅಡ್ಡಿ: ಈ ಭಾಗವು ಅರಣ್ಯ ಇಲಾಖಾ  ವ್ಯಾಪ್ತಿಯೊಳಗೆ ಇರುವುದರಿಂದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಅರಣ್ಯ ಇಲಾಖೆ ಅಡ್ಡಿ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಮಂಜೂರಾದ ಅನುದಾನದ ಕಾಮಗಾರಿ ಅರ್ಧಕ್ಕೆ ನಿಂತಿದೆ.

ತಾಲೂಕಿನ ಪ್ರಸಿದ್ಧ ಸಿರಿಮನೆ ಜಲಪಾತಕ್ಕೆ ದ.ಕ. ಜಿಲ್ಲೆಯಿಂದ ಬರುವ ಪ್ರವಾಸಿಗರು ಈ ರಸ್ತೆಯಲ್ಲಿಯೇ ಸಂಚರಿಸಿದಲ್ಲಿ ಬಿದರಗೋಡಿನಿಂದ ಕಿಗ್ಗಕ್ಕೆ ಹೋಗುವ ದೂರ ಬಹಳ ಕಡಿಮೆಯಾಗುತ್ತದೆ. ಅಲ್ಲಿಂದ 5ಕಿ.ಮೀ. ದೂರ ಮಾತ್ರ ಸಿರಿಮನೆ ಜಲಪಾತ ತಲುಪಲು ಅನುಕೂಲವಾಗುತ್ತದೆ.

ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಪ್ರತಿಕ್ರಿಯೆ: ಈ ಭಾಗದ ರಸ್ತೆ ಅಭಿವೃದ್ಧಿಗೆ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಇದು ಅರಣ್ಯ ಇಲಾಖೆ 4(1) ವ್ಯಾಪ್ತಿಯಲ್ಲಿರುವುದರಿಂದ ರಸ್ತೆ ಅಭಿವೃದ್ಧಿಗೆ ತೊಡಕು ಉಂಟಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಜಿಪಂ ಇಂಜಿನಿಯರ್‌.

 

-ರಮೇಶ್ಕರುವಾನೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ