ಅಬಕಾರಿ ಸಿಬ್ಬಂದಿಗೆ ಶಾಸಕರಿಂದ ತರಾಟೆ
Team Udayavani, Sep 22, 2018, 9:42 AM IST
ಎನ್.ಆರ್. ಪುರ: ತಾಪಂ ಸಾಮರ್ಥ್ಯ ಸೌಧದಲ್ಲಿ ತಾಪಂ ತ್ತೈಮಾಸಿಕ ಕೆಡಿಪಿ ಸಭೆ ಶಾಸಕ ಟಿ.ಡಿ. ರಾಜೇಗೌಡ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಟಿ.ಡಿ. ರಾಜೇಗೌಡ, ಅಕ್ರಮ ಮದ್ಯ ಮಾರಾಟ
ಮಾಡುತ್ತಿದ್ದವರಿಂದ 20 ಸಾವಿರ ರೂ ಲಂಚ ಪಡೆದಿದ್ದೀರಾ ಎಂದು ಅಬಕಾರಿ ಇಲಾಖಾ ಸಿಬ್ಬಂದಿ ಮೊಹಮ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಮೊಹಮ್ಮದ್, ಮಾಜಿ ಶಾಸಕರು ನಮ್ಮ ಮೇಲೆ ಲಂಚದ ಸುಳ್ಳು ಆರೋಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶೆಟ್ಟಿಕೊಪ್ಪ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆತನನ್ನು ಬಿಡುವಂತೆ ಮಾಜಿ ಶಾಸಕರು ಹೇಳಿದ್ದರು. ಆರೋಪಿಯನ್ನು ಬಿಡದಿದ್ದಕ್ಕೆ
ಮಾಜಿ ಶಾಸಕರು ಸಭೆಯಲ್ಲಿ ಲಂಚದ ಸುಳ್ಳು ಆರೋಪ ಹೊರಿಸಿದ್ದಾರೆ ಎಂದರು.
ತಾಲೂಕಿನಲ್ಲಿ ಶುದ್ಧಗಂಗಾ ಘಟಕಗಳ ಮಾಹಿತಿ ಮುಂದಿನ ಸಭೆಯೊಳಗೆ ನೀಡಿ ಎಂದು ಕುಡಿಯುವ ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರ ಎಇಇ ಮಲ್ಲಪ್ಪ ಅವರಿಗೆ ಶಾಸಕರು ಸೂಚಿಸಿದರು. ಸೀಗುವಾನಿ ಸರ್ಕಲ್
ಬಳಿ ನಿರ್ಮಿಸಿರುವ ವಾಟರ್ ಟ್ಯಾಂಕ್‌ಗೆ ನೀರು ಸರಬರಾಜು ಎಕೆ ಮಾಡಿಲ್ಲ ಎಂದು ತಾಪಂ ಸದಸ್ಯೆ ಕೆ.ಪಿ. ಮೀನಾಕ್ಷಿ ಕಾಂತರಾಜ್ ಪ್ರಶ್ನಿಸಿದರು. ಬಾಳೆ ಗ್ರಾಪಂ ಪಿಡಿಒ ಸೌಮ್ಯಾ ಪ್ರತಿಕ್ರಿಯಿಸಿ ಟ್ಯಾಂಕ್‌ನ್ನು ಗ್ರಾಪಂ ಸುಪರ್ದಿಗೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದರು.
ಇದಕ್ಕೆ ಶಾಸಕರು ಆಕ್ಷೇಪಿಸಿ ಕಾಮಗಾರಿ ಪೂರ್ಣವಾಗದೆ ಹೇಗೆ ಹಸ್ತಾಂತರ ಮಾಡಲಾಯಿತು. ಕಾನೂನು ಪಾಲಿಸದಿರುವುದರಿಂದ ಪಿಡಿಒ ಸೌಮ್ಯಾ, ಇಂಜಿನಿಯರ್ ಮಲ್ಲಪ್ಪ ಅವರಿಗೆ ನೋಟಿಸ್ ನೀಡುವಂತೆ ತಾಪಂ ಇಒ ಕೆ.ಹೊಂಗಯ್ಯ ಅವರಿಗೆ ಸೂಚಿಸಿದರು.
ಈಚಿಕೆರೆ ಗ್ರಾಮದ ಬನ್ಮಕ್ಕಿಯಲ್ಲಿ ಎಸ್ಸಿ, ಎಸ್ಟಿಯ 4 ಜನರಿಗೆ 5 ವರ್ಷದ ಹಿಂದೆ ಬೋರ್‌ವೆಲ್ ಕೊರೆಸಿಕೊಡಲಾಗಿದೆ. ತಂತಿ ಎಳೆಯಲಾಗಿದೆ. ಇದುವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಈಚಿಕೆರೆ ಸುಂದರೇಶ್ ಆರೋಪಿಸಿದರು. ತಾಲೂಕಿನಲ್ಲಿ 10 ಚಕ್ರ ಹಾಗೂ 16 ಚಕ್ರದ ಭಾರೀ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ತಾಪಂ ಉಪಾಧ್ಯಕ್ಷ ಮಂಜು ಒತ್ತಾಯಿಸಿದರು.
ತಾಲೂಕು ಕಚೇರಿಯಲ್ಲಿ ಪ್ರತಿ ಟೇಬಲ್‌ನಲ್ಲೂ ಹಣವಿಲ್ಲದೆ ಕೆಲಸಗಳಾಗುತ್ತಿಲ್ಲ. ಸರ್ಕಾರದ ವಿವಿಧ ವೇತನ, ಇನ್ನಿತರೆ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸುತ್ತಾರೆ. ವಯೋವೃದ್ಧರನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಮಧ್ಯವರ್ತಿಗಳು ಬಂದರೆ ತಕ್ಷಣ ಕೆಲಸ ಮಾಡಿಕೊಡುತ್ತಾರೆ ಎಂದು ಕೆಡಿಪಿ ಸದಸ್ಯ ಈಚಿಕೆರೆ ಸುಂದರೇಶ್ ಆರೋಪಿಸಿದರು.
ಇದಕ್ಕೆ ಮಹೇಶ್ ಆಚಾರಿ ಧ್ವನಿಗೂಡಿಸಿದರು. ಶಾಸಕ ರಾಜೇಗೌಡ ಮಾತನಾಡಿ, ಲಂಚ ಪಡೆದಿದ್ದು ಕಂಡು ಬಂದರೆ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದರು.
ತ್ತೈಮಾಸಿಕ ಕೆಡಿಪಿ ಸಭೆಗೆ ಪದೇಪದೇ ಗೈರಾಗುತ್ತಿರುವ ಚಿಕ್ಕಮಗಳೂರು ದೇವರಾಜು ಅರಸು ಅಭಿವೃದ್ಧಿ ನಿಗಮ ಹಾಗೂ ತರೀಕೆರೆ ಸಣ್ಣ ನೀರಾವರಿ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಇಲಾಖೆ ಸಚಿವರಿಗೆ, ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ಶಾಸಕ ರಾಜೇಗೌಡ ಅವರು ತಾಪಂ ಇಒ ಕೆ.ಹೊಂಗಯ್ಯ ಅವರಿಗೆ ಸೂಚಿಸಿದರು.
ತಾಲೂಕು ಕಚೇರಿಯ ಯಾವುದೇ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ನಮ್ಮನ್ನು ಆಹ್ವಾನಿಸುವುದಿಲ್ಲ. ಕೃಷಿ ಇಲಾಖೆಯ ಯಾವುದೇ ಯೋಜನೆಯ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಹಾಗೂ ರೈತ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಿಸುವಾಗ ಆಯಾ ಗ್ರಾಪಂ, ತಾಪಂ ವ್ಯಾಪ್ತಿಯ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಹಾಗಾದರೆ ನಾವೇನು ಭಿಕಾರಿಗಳಾ? ನನಗೆ ಮರ್ಯಾದೆ
ನೀಡದಿದ್ದರೂ ಪರವಾಗಿಲ್ಲ. ಸದಸ್ಯ ಸ್ಥಾನಕ್ಕೆ ಬೆಲೆ ಕೊಡಿ ಎಂದು ಸದಸ್ಯೆ ಮೀನಾಕ್ಷಿ ಕಾಂತರಾಜ್ ಮಾತನಾಡಿದರು.
ಶಾಸಕ ರಾಜೇಗೌಡ ಮಾತನಾಡಿ, ಯಾವುದೇ ಯೋಜನೆಗಳ ಫಲಾನುಭವಿಗಳ ಆಯ್ಕೆ ಹಾಗೂ ರೈತರ ಕುಟುಂಬಗಳಿಗೆ ಪರಿಹಾರ ವಿತರಿಸುವಾಗ ಆಯಾ ಗ್ರಾಪಂ, ತಾಪಂ, ಜಿಪಂ ಸದಸ್ಯರ ಗಮನಕ್ಕೆ ತನ್ನಿ. ಅವರು ಯಾವುದೇ ಪಕ್ಷದ ಸದಸ್ಯರಾಗಿರಲಿ ಎಂದು ಚರ್ಚೆಗೆ ತೆರೆ ಎಳೆದರು.
ತಾಪಂ ಅಧ್ಯಕ್ಷೆ ಜಯಶ್ರೀ ಮೋಹನ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್. ನಾಗೇಶ್, ಸದಸ್ಯೆ ಲಲಿತಾ ನಾಗರಾಜ್, ತಹಶೀಲ್ದಾರ್ ಗೋಪಿನಾಥ್, ಇಒ ಹೊಂಗಯ್ಯ, ಜಿಪಂ ಸದಸ್ಯರಾದ ಚಂದ್ರಮ್ಮ, ಕೆಡಿಪಿ ಸದಸ್ಯರಾದ ಇ.ಸಿ. ಸೇವಿಯಾರ್ ಮತ್ತಿತರರು ಇದ್ದರು.