ಲಾರಿ-ಬೈಕ್ ಡಿಕ್ಕಿ: ಪೇದೆ ಸಾವು
Team Udayavani, Apr 1, 2022, 5:12 PM IST
ಕಡೂರು: ಪಟ್ಟಣ ಸಮೀಪದ ಮಲ್ಲೇಶ್ವರ ಗ್ರಾಮದಲ್ಲಿ ಲಾರಿ ಮತ್ತು ಬೈಕ್ ನಡುವೆ ಬುಧವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಪೊಲೀಸ್ ಪೇದೆ ಮೃತಪಟ್ಟಿರುವ ಘಟನೆ ನಡೆದಿದೆ. ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ತಾಲೂಕಿನ ಯಳ್ಳಂಬಳಸೆ ಗ್ರಾಮದವರಾದ ವಸಂತ್‌ಕುಮಾರ್ (41) ಘಟನೆಯಲ್ಲಿ ಮೃತಪಟ್ಟಿದ್ದು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಕೂಡಲೇ ಗ್ರಾಮದ ಕೆಲವರು ವಸಂತ್ ಕುಮಾರ್ ಅವರನ್ನು ಬೀರೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನಂತರ ಶವವನ್ನು ಕಡೂರು ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿತ್ತು. ಕರ್ತವ್ಯದ ಮೇಲೆ ಕಡೂರಿಗೆ ಆಗಮಿಸಿದ್ದ ಅವರು ತಮ್ಮ ಸ್ವಗ್ರಾಮ ಯಳ್ಳಂಬಳಸೆಗೆ ತೆರಳುತ್ತಿದ್ದಾಗ ರಾತ್ರಿ 8.45ಕ್ಕೆ ಅಫಘಾತ ಸಂಭವಿಸಿದೆ. ಕೋಳಿ ಸಾಗಾಟದ ಖಾಲಿ ಲಾರಿ ಮಚ್ಚೇರಿಯಿಂದ ಕಡೂರು ಕಡೆ ಬರುತ್ತಿತ್ತು. ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಲಾರಿ ಚಾಲಕ ಸಂತೋಷ್ ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಡೂರು ಪಿಎಸ್‌ಐ, ಸಿಪಿಐ, ಬೀರೂರು ಪಿಎಸ್‌ಐ ಸೇರಿದಂತೆ ಪೊಲೀಸ್ ಇಲಾಖೆ ಅ ಧಿಕಾರಿಗಳು ಶವಾಗಾರಕ್ಕೆ ಆಗಮಿಸಿ ಪಾರ್ಥಿವ ಶರೀರವನ್ನು ವೀಕ್ಷಿಸಿ ಸಂತಾಪ ಸೂಚಿಸಿದರು. ಇಲಾಖೆಯ ಗೌರವಗಳನ್ನು ನೀಡಲಾಯಿತು. ಅಂತ್ಯಸಂಸ್ಕಾರ ಯಳ್ಳಂಬಳಸೆ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ಗುರುವಾರ ಸಂಜೆ ನೆರವೇರಿತು.