ಶೃಂಗೇರಿ ಶಾರದಾ ಪೀಠದಲ್ಲಿ ಸರಳ ಶಂಕರ ಜಯಂತಿ
Team Udayavani, Apr 29, 2020, 5:04 PM IST
ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಶಂಕರ ಜಯಂತಿ ಅಂಗವಾಗಿ ಶ್ರೀ ಶಂಕರಾಚಾರ್ಯರ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು.
ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಶಿಲಾಮಯ ದೇವಸ್ಥಾನದಲ್ಲಿ ಮಂಗಳವಾರ ಶ್ರೀಶಂಕರ ಜಯಂತಿ ಉತ್ಸವ ಸರಳವಾಗಿ ಶ್ರದ್ಧಾಭಕ್ತಿಯಿಂದ ನಡೆಯಿತು.
ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನರಸಿಂಹವನದಲ್ಲಿ ದೈನಂದಿನ ಆಹಿ°ಕ ಕಾರ್ಯಕ್ರಮ ಮುಗಿಸಿ, ಅಧಿಷ್ಠಾನ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಸ್ವಾಮೀಜಿಗಳು ಶ್ರೀಮಠಕ್ಕೆ ಆಗಮಿಸಿದರು. ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀ ಶಂಕರಾಚಾರ್ಯ ದೇಗುಲಕ್ಕೆ ಆಗಮಿಸಿದರು.
ಶ್ರೀ ಶಂಕರ ದೇಗುಲದಲ್ಲಿ ಶ್ರೀ ಶಂಕರರಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಪ್ರಸ್ಥಾನತ್ರಯ ಭಾಷ್ಯ ಶ್ರೀ ಶಂಕರ ದಿಗ್ವಿಜಯ ಪಾರಾಯಣ, ಅಷ್ಟಾವಧಾನ ಸೇವೆ, ಕನಕಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು. ಶ್ರೀಮಠದ ಪ್ರವಚನ ಮಂದಿರದಲ್ಲಿ ಚತುರ್ವೇದ ಪಾರಾಯಣ ನಡೆಯಿತು. ಬುಧವಾರ ನಡೆಯಬೇಕಿದ್ದ ಶ್ರೀ ಶಂಕರಾಚಾರ್ಯ ಮಹಾರಥೋತ್ಸವ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರದ್ದಾಗಿದೆ.