ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ: ಸಿಎಂ

Team Udayavani, Jan 6, 2018, 2:58 PM IST

ಚಿಕ್ಕಮಗಳೂರು: ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಶುಕ್ರವಾರ ಮೂಡಿಗೆರೆಯ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲರ ಜೀವವೂ ಅಮೂಲ್ಯ. ಗಲಭೆಗಳಿಂದ ಯಾರೂ ಸಾಯಬಾರದು. ಸತ್ತವರ ಕುಟುಂಬದ ಬಗ್ಗೆ ನಮಗೆ ಅನುಕಂಪ ಇದೆ. ದೀಪಕ್‌ ಕುಟುಂಬಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರಲ್ಲದೇ ಸತ್ತವರನ್ನು ಹಿಂದೂ ಎಂದು ಹೇಳಿಕೊಂಡು ಗಲಾಟೆ ಮಾಡಲು ಬಿಜೆಪಿಯವರಿಗೆ ಅಧಿಕಾರ ಕೊಟ್ಟವರು ಯಾರು? ಹಿಂದುತ್ವವನ್ನು ಇವರು ಗುತ್ತಿಗೆ ಪಡೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪಗೆ ಎಷ್ಟು ರಕ್ತವಿದೆ: ದಕ್ಷ, ಪ್ರಾಮಾಣಿಕ, ಸ್ವಚ್ಛ ಆಡಳಿತ ನಡೆಸುತ್ತೇನೆಂದು ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಹೇಳಿಕೆಯನ್ನು ಟೀಕಿಸಿದ ಸಿದ್ದರಾಮಯ್ಯ, ಯಡಿಯೂರಪ್ಪಗೆ ಎಷ್ಟು ರಕ್ತವಿದೆ, ಹೋದ ಕಡೆಯಲ್ಲೆಲ್ಲ ರಕ್ತದಲ್ಲಿ ಬರೆದು ಕೊಡುತ್ತೇನೆಂದ್ರೆ ಏನರ್ಥ. ಅಧಿಕಾರ ದೊರೆತ ನಂತರ ಏನು ಮಾಡುತ್ತಾರೆ ಎಂಬುದಕ್ಕಿಂತ, ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆಂಬುದು ಮುಖ್ಯ ಎಂದರು. 

ಜೈಲಿಗೆ ಹೋಗಿದ್ದನ್ನು ಜನ ಮರೆತಿಲ್ಲ: ಹಿಂದೆ ಅಧಿಕಾರದಲ್ಲಿದ್ದಾಗ ಅವರು ಜೈಲಿಗೆ ಹೋಗಿ ಬಂದಿದ್ದು, ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ್ದು, ಇದಾವುದನ್ನೂ ಜನತೆ ಮರೆತಿಲ್ಲ. ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಟ್ರೆ ಜನ ನಂಬುವುದಿಲ್ಲ ಎಂದು ವ್ಯಂಗ್ಯವಾಡಿದರು. ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಿಜೆಪಿಯವರು ನಾಟಕವಾಡುತ್ತಿದ್ದಾರೆ. ಗೋವಾ ಸಿಎಂಗೆ ತಾವು ಎಷ್ಟು ಬಾರಿ ಪತ್ರ ಬರೆದರೂ ಉತ್ತರ ಕೊಟ್ಟಿಲ್ಲ. ಒಮ್ಮೆ ನ್ಯಾಯಯುತವಾಗಿ ನೀರು ಹಂಚಿಕೆ ಯಾಗಬೇಕು ಎನ್ನುತ್ತಾರೆ, ಮತ್ತೂಮ್ಮೆ ಟ್ರಿಬ್ಯುನಲ್‌ನಲ್ಲಿ ತೀರ್ಮಾನವಾಗಬೇಕು ಎನ್ನುತ್ತಾರೆ. ಅವರು ಕೇವಲ
ನಾಟಕವಾಡುತ್ತಿದ್ದಾರೆಯೇ ಹೊರತು ಬೇರೇನೂ ಇಲ್ಲ ಎಂದರು.

ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಕೊಡುವ ಗೋಧಿಯನ್ನು ಬಳಸಿಕೊಳ್ಳುತ್ತಿಲ್ಲ. ಈ ರೀತಿ ಮಾಡಿದರೆ ಗೋಧಿ ವಿತರಣೆ ಸ್ಥಗಿತಗೊಳಿಸಲು ಕೇಂದ್ರ
ಸಚಿವರೊಂದಿಗೆ ಚರ್ಚಿಸುವುದಾಗಿ ಬಿಎಸ್‌ವೈ ಹೇಳಿದ್ದಾರೆ. ಅವರಿಗೆ ಕಾನೂನು ಅರಿವಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಆಹಾರ ಭದ್ರಾ ಕಾಯ್ದೆ ಜಾರಿಗೆ ತಂದಿದೆ. ಅದರನ್ವಯ ಆಹಾರ ಪದಾರ್ಥ ಕೊಡಲೇಬೇಕು. ಗೋಧಿ ಕೊಡುತ್ತಿಲ್ಲ ಎಂದು ಇವರಿಗೆ ಹೇಳಿದವರು ಯಾರು?
ಗೋಧಿ ಬೇಕು ಎನ್ನುವವರಿಗೆ ಕೊಡಲಾಗುತ್ತಿದೆ. ಬೇಡ ಎಂದವರಿಗೆ ಬಲವಂತವಾಗಿ ಕೊಡಲು ಸಾಧ್ಯವಿಲ್ಲ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ