ವಾಹನಗಳ ಎಫ್‌ಸಿ ದಂಡ ಶುಲ್ಕ ಕಡಿತ

ಲಘು ವಾಹನ- ಬೈಕ್‌ ಎರಡಕ್ಕೂ ಕೇವಲ 100 ರೂ. ದಂಡ: ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರಪ್ಪ ಶಿರೋಡ್ಕರ್‌

Team Udayavani, Sep 12, 2019, 3:39 PM IST

ಚಿಕ್ಕಮಗಳೂರು: ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ.

ಚಿಕ್ಕಮಗಳೂರು: ವಾಹನಗಳ ಎಫ್‌ಸಿ (ಅರ್ಹತಾ ಪ್ರಮಾಣಪತ್ರ)ಅವಧಿ ಪೂರ್ಣಗೊಂಡ ನಂತರ ಅದನ್ನು ನವೀಕರಿಸಲು ಹಿಂದೆ ಇದ್ದ ದಂಡ ಶುಲ್ಕವನ್ನು ಈಗ ಕಡಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರಪ್ಪ ಶಿರೋಡ್ಕರ್‌ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ವಾಹನವೊಂದನ್ನು ಖರೀದಿಸಿದರೆ 15 ವರ್ಷಗಳ ಚಾಲನಾ ಅರ್ಹತೆಯನ್ನು ಅದು ಹೊಂದಿರುತ್ತದೆ. ಆ ನಂತರ ಮತ್ತೆ ನವೀಕರಿಸಲು ಮಾಲಿಕ ವಿಫಲವಾದಲ್ಲಿ ನವೀಕರಿಸುವವರೆಗೂ ಪ್ರತಿ ತಿಂಗಳು ಲಘು ವಾಹನವಾದರೆ 500 ರೂ. ಹಾಗೂ ದ್ವಿಚಕ್ರ ವಾಹನವಾದರೆ ತಿಂಗಳಿಗೆ 300 ರೂ.ನಂತೆ ಹಿಂದೆ ದಂಡ ವಿಧಿಸಲಾಗುತ್ತಿತ್ತು. ಈಗ ಆ ರೀತಿ ದಂಡ ವಿಧಿಸುವುದನ್ನು ರದ್ದು ಮಾಡಿ, ನವೀಕರಿಸಲು ಕೇವಲ 100 ರೂ. ದಂಡ ಮಾತ್ರ ವಿಧಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆನ್‌ಲೈನ್‌ ಮೂಲಕ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಿ ಆ ನಂತರ ಒಮ್ಮೆ ವಾಹನ ತಂದರೆ ಪರಿಶೀಲಿಸಿ ವಾಹನ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದರಿಂದ ವಾಹನ ಖರೀದಿಸಿದವರಿಗೆ ಹಾಗೂ ಕಚೇರಿ ಸಿಬ್ಬಂದಿಗೂ ಸಮಯ ವ್ಯಯವಾಗುವುದಿಲ್ಲ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಆದರೆ, ತಪಾಸಣೆಯಿಂದ ಹಿಡಿದು ಕಚೇರಿ ಕೆಲಸದವರೆಗೂ ತ್ವರಿತವಾಗಿ ಕಾರ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ತೀವ್ರವಾಗಿದೆ. ಕಚೇರಿಯಲ್ಲಿ 7 ಮಂದಿ ವಾಹನ ಪರಿವೀಕ್ಷಕರು ಇರಬೇಕು. ಆದರೆ, ಖಾಯಂ ಆಗಿ ಈ ಕಚೇರಿಯಲ್ಲಿ ಒಬ್ಬರೂ ಇಲ್ಲ. ಎರವಲು ಸೇವೆ ಮೇಲೆ ಪಕ್ಕದ ಜಿಲ್ಲೆಗಳಿಂದ ಬಂದು ವಾರದಲ್ಲಿ ಎರಡು ಅಥವಾ ಮೂರು ದಿನ ಕಾರ್ಯ ನಿರ್ವಹಿಸಿ ತೆರಳುತ್ತಿದ್ದಾರೆ ಎಂದರು.

ಜಿಲ್ಲೆಗೆ ವರ್ಗಾಯಿಸಿದ್ದ ವಾಹನ ನಿರೀಕ್ಷಕರನ್ನು ಬೇರೆ ಜಿಲ್ಲೆಗೆ ನಿಯೋಜಿಸಲಾಗಿದೆ. ತರೀಕೆರೆ ಮತ್ತು ಕಡೂರು ತಾಲೂಕುಗಳ ಜನರಿಗಾಗಿ ತರೀಕೆರೆಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ತೆರೆಯಲಾಗಿದೆ. ಆ ಕಚೇರಿಗೆ ಕನಿಷ್ಟ ಇಬ್ಬರು ವಾಹನ ಪರಿವೀಕ್ಷಕರ ಅಗತ್ಯವಿದೆ. ಆ ನೇಮಕಾತಿಯೂ ನಡೆದಿಲ್ಲ ಎಂದು ಹೇಳಿದರು.

ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸಗಳು ತ್ವರಿತಗತಿಯಲ್ಲಿ ನಡೆಯಲು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಜನ ಆನ್‌ಲೈನ್‌ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸಿಕೊಂಡಲ್ಲಿ ಕಚೇರಿಗೆ ಬಂದು ಸಮಯ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಬಹುದು. ಅಗತ್ಯ ಬಿದ್ದಾಗ ಮಾತ್ರ ಅವರ ಉಪಸ್ಥಿತಿ ಅವಶ್ಯಕ. ಈ ಹಿನ್ನೆಲೆಯಲ್ಲಿ ಜನ ಇಲಾಖೆಯೊಂದಿಗೆ ಸಹಕರಿಸಬೇಕಾಗಿದೆ. ಸಿಬ್ಬಂದಿ ಹಾಗೂ ಐಎಂವಿ ಇನ್ಸ್‌ಪೆಕ್ಟರ್‌ಗಳ ಕೊರತೆ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದ್ದು, ನೇಮಕವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ