187 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ

ಅತಿವೃಷ್ಟಿ ಪರಿಹಾರಕ್ಕೆ ಹಣ ನೀಡಲು ರಾಜ್ಯ ಸರ್ಕಾರಕ್ಕೆ ಪತ್ರ: ಅಪರ ಡಿಸಿ ಡಾ| ಕುಮಾರ

Team Udayavani, Nov 17, 2019, 4:36 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾಮಳೆಯಿಂದ ಆಗಿರುವ ಹಾನಿಯ ಪರಿಹಾರಕ್ಕಾಗಿ 187 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಕುಮಾರ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಮೂರು ಹಂತದಲ್ಲಿ ಸರ್ಕಾರ 76 ಕೋಟಿ ರೂ. ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ರಸ್ತೆ, ಸೇತುವೆಗಳ ದುರಸ್ತಿಗೆ 31 ಕೋಟಿ ರೂ., ಹಾನಿಗೊಳಗಾದ ಮನೆ ಪರಿಹಾರಕ್ಕೆ 25 ಕೋಟಿ ರೂ. ಮತ್ತು ಶಾಲೆ, ಅಂಗನವಾಡಿ ಸೇತುವೆಗಳು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು 20 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ಮನೆಗಳಿಗೆ ಪರಿಹಾರ ಹೆಚ್ಚಳ: ಅತಿವೃಷ್ಟಿಯಿಂದ ಶೇ.76ರಿಂದ 100 ರಷ್ಟು ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ರೂ., ಬಿ.ವರ್ಗದಲ್ಲಿ ಶೇ.25 ರಿಂದ 75 ರಷ್ಟು ಹಾನಿಗೊಳಗಾದ ಮನೆಗೆ ಮೊದಲು ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಈಗ ಸರ್ಕಾರ ಅದನ್ನು 5 ಲಕ್ಷ ರೂ.ಗೆ ಏರಿಸಿದೆ. ಸಿ.ವರ್ಗದಲ್ಲಿ ಅಲ್ಪಸ್ವಲ್ಪ ಹಾನಿಗೀಡಾದ ಮನೆಗಳಿಗೆ ಈಗ 50 ಸಾವಿರ ರೂ. ಪರಿಹಾರ ನೀಡಲು ಸರ್ಕಾರ ಸೂಚಿಸಿದೆ.

ಒಟ್ಟು ಈ ಮೂರು ವರ್ಗದ ಮನೆಗಳ ಹಾನಿಗೆ ಪರಿಹಾರ ರೂಪದಲ್ಲಿ 12 ಕೋಟಿ ರೂ. ಬಂದಿದೆ. ಮನೆ ಕಳೆದುಕೊಂಡವರಿಗೆ 10 ತಿಂಗಳ ಕಾಲ ಬಾಡಿಗೆ ಮೊತ್ತವಾಗಿ ಒಟ್ಟು 16 ಲಕ್ಷ ರೂ. ನೀಡಲಾಗಿದೆ ಎಂದು ವಿವರಿಸಿದರು.

ಅತಿವೃಷ್ಟಿ ಹಾನಿ ಸಂತ್ರಸ್ತರಲ್ಲಿ ಕೆಲವರು ಮನೆ ಮತ್ತು ಪರ್ಯಾಯ ಭೂಮಿ ನೀಡಲು ಕೇಳಿದ್ದಾರೆ. ಮತ್ತೆ ಕೆಲವರು ಮನೆ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಇನ್ನು ಕೆಲವರು ಪರ್ಯಾಯ ಭೂಮಿ ಮಾತ್ರ ನೀಡಲು ಮನವಿ ಸಲ್ಲಿಸಿದ್ದಾರೆ. ಮನೆ ಮತ್ತು ಭೂಮಿ ಬೇಕೆಂದು 54 ಕುಟುಂಬ ಮನವಿ ಸಲ್ಲಿಸಿ ಒಪ್ಪಿಗೆ ನೀಡಿದ್ದರೆ, 5 ಕುಟುಂಬಗಳು ಯಾವುದಕ್ಕೂ ಒಪ್ಪದೇ ಹಾನಿಗೊಳಗಾದ ಪ್ರದೇಶದಲ್ಲೇ ವಾಸಿಸುವುದಾಗಿ ಹೇಳುತ್ತಿವೆ. ಒಟ್ಟು 216 ಕುಟುಂಬಗಳು ಕೇವಲ ಮನೆ ನಿರ್ಮಿಸಿಕೊಳ್ಳಲು ನಿವೇಶನ ಒದಗಿಸಲು ಬೇಡಿಕೆ ಇಟ್ಟಿದ್ದರೆ, 25 ಕುಟುಂಬಗಳು ಪರ್ಯಾಯ ಭೂಮಿ ನೀಡಲು ಕೇಳಿವೆ. ಉಳಿದಂತೆ 79 ಕುಟುಂಬಗಳು ತಾವು ಹಿಂದೆ ಇದ್ದ ಸ್ಥಳದಲ್ಲೇ ಮನೆ ನಿರ್ಮಿಸಿಕೊಳ್ಳಲು ಒಪ್ಪಿಗೆ ನೀಡಿವೆ ಎಂದು ತಿಳಿಸಿದರು.

ನಿವೇಶನ ಹಾಗೂ ಪರ್ಯಾಯ ಭೂಮಿ ನೀಡಲು ಜಾಗ ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. ನೇರವಾಗಿ ಆ ಭೂಮಿಯನ್ನು ಫಲಾನುಭವಿಗಳಿಗೆ ನೀಡಿದಲ್ಲಿ ಮುಂದೆ ಅದು ಅರಣ್ಯ ಇಲಾಖೆಯದ್ದೆಂಬ ವಿವಾದ ಸೃಷ್ಟಿಯಾಗುವುದನ್ನು ತಡೆಯಲು ಅರಣ್ಯ ಇಲಾಖೆ ಅಭಿಪ್ರಾಯ ಪಡೆದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಇತ್ತೀಚೆಗೆ ಬಂದ ಮಳೆಯಿಂದ ಕಡೂರು ಮತ್ತು ತರೀಕೆರೆ ತಾಲೂಕಿನಲ್ಲೂ ಮಳೆ ಹೆಚ್ಚಾಗಿರುವ ಹಿನ್ನೆಲೆ ಯಲ್ಲಿ ಆ ಎರಡೂ ತಾಲೂಕುಗಳನ್ನು ಅತಿವೃಷ್ಟಿ ತಾಲೂಕು ಗಳೆಂದು ಸರ್ಕಾರ ಪರಿಗಣಿಸಿದೆ ಎಂದರು.

ಈಗ ಸರ್ಕಾರ ಬೆಳೆ ಮತ್ತು ಭೂಮಿ ಎರಡಕ್ಕೂ ಹಾನಿ ಸಂಭವಿಸಿರುವ ಪ್ರಕರಣಗಳಲ್ಲಿ ಹೆಕ್ಟೇರ್‌ಗೆ 33 ಸಾವಿರದಂತೆ ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ನೀಡಲು ನಿರ್ಧರಿಸಿದೆ. ಜಿಲ್ಲೆಯಲ್ಲಿ ಒಟ್ಟು 32 ಸಾವಿರ ಹೆಕ್ಟೇರ್‌ ಬೆಳೆ ನಷ್ಟವಾಗಿದ್ದು, ಈ ಪೈಕಿ 26 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ಹಾನಿಯಾಗಿದೆ.

ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹೆಚ್ಚಿನ ಭೂ ಕುಸಿತಗೊಂಡಿರುವ ಹಾಗೂ ಮನೆ-ಭೂಮಿ ಕೊಚ್ಚಿ ಹೋಗಿರುವ ಪ್ರಕರಣಗಳು ಹೆಚ್ಚಾಗಿವೆ. ಅಲ್ಲಿ ಪರ್ಯಾಯ ಭೂಮಿ ನೀಡಲು ಹಾಗೂ ಮನೆ ನಿರ್ಮಾಣಕ್ಕೆ ಭೂಮಿ ಗುರುತಿಸಲಾಗಿದ್ದು, ಕೆಲವು ಕಡೆ ಗುರುತಿಸಲಾಗಿರುವ ಪ್ರದೇಶಗಳು ಅರಣ್ಯ ಇಲಾಖೆಗೆ ಸೇರಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಡತವನ್ನು ಅರಣ್ಯ ಇಲಾಖೆ ಅಭಿಪ್ರಾಯ ಪಡೆಯಲು ಕಳುಹಿಸಲಾಗಿದೆ ಎಂದು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ