ಅಧಿಕಾರಕ್ಕೆ ಬಂದ ವರ್ಷದಲ್ಲೇ ಸಕ್ಕರೆ ಕಾರ್ಖಾನೆ

ದತ್ತಾತ್ರೇಯನಿಗೆ ಪೂಜೆ ಸಲ್ಲಿಸಿದ್ರೆ ಅಪ್ಪ, ಮಗ, ಅಣ್ಣನ ಮಗ ಗೆಲ್ತಾರೆ ಅಂತ ಸಿಎಂ ಬಂದಿದ್ರು: ಯತ್ನಾಳ

Team Udayavani, May 16, 2019, 10:14 AM IST

ಕಾಳಗಿ: ಬಹಿರಂಗ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾಳಗಿ: ಅಧಿಕಾರಕ್ಕೆ ಬಂದ ವರ್ಷದಲ್ಲಿ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಮಾಡ್ತೇವೆ. ಕೋಲಿ ಸಮಾಜವನ್ನು ಎಸ್‌ಟಿ ಸಮಾಜಕ್ಕೆ ಸೇರಿಸೋ ಜವಾಬ್ದಾರಿ ನನ್ನದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ಪಟ್ಟಣದಲ್ಲಿ ಚಿಂಚೋಳಿ ವಿಧಾನಸಭೆ ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು,

ರಾಜ್ಯದಲ್ಲಿ ತುಘಲಕ್‌ ದರ್ಬಾರ್‌, ಹಗಲು ದರೋಡೆ ಮಾಡೋ ಸರ್ಕಾರ ಅಧಿಕಾರದಲ್ಲಿ ಬಂದಿದೆ. ಹಣದ ಕೊರತೆ ನಮ್ಮ ಕಾಲದಲ್ಲಿ ಕಾಣಲಿಲ್ಲ. ಇವರು ಹಣ ಇಲ್ಲ ಅಂತಾರೆ. ಬಜೆಟ್‌ನಲ್ಲಿಟ್ಟ ಹಣ ಏನಾಯ್ತು ಎಂದು ಪ್ರಶ್ನಿಸಿದರು. ಹಣಕಾಸಿನ ಕೊರತೆ ರಾಜ್ಯದಲ್ಲಿಲ್ಲ, ಪ್ರಾಮಾಣಿತ ಕೈಗಳ ಕೊರತೆಯಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿಯ 22 ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ಬಾರಿ 25 ಸಾವಿರ ಮತಗಳ ಅಂತರದಿಂದ ಖರ್ಗೆ ಮನೆಗೆ ಹೋಗೋದು ಖಚಿತವಾಗಿದೆ. ದೇವೇಗೌಡ, ವೀರಪ್ಪ ಮೊಯ್ಲಿ ಸೋಲುವುದು ನಿಶ್ಚಿತ. ಮಂಡ್ಯದಲ್ಲಿ ಸುಮಲತಾ ಗೆಲ್ಲಲಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್‌ ಕೊಟ್ಟ ಕೊಡುಗೆ ಮತದಾನ. ಪ್ರತಿಬೂತ್‌ ಮತದಾರರನ್ನು ಬದಲಾಯಿಸಿ ಡಾ| ಅವಿನಾಶ ಜಾಧವ ಅವರನ್ನು ಗೆಲ್ಲಿಸಿ. ನಿಮ್ಮ ಕ್ಷೇತ್ರಕ್ಕೆ ಬೇಕಾದ ಅಭಿವೃದ್ಧಿ ಮಾಡಿ ಚಿಂಚೋಳಿಯನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇವೆ ಎಂದು ಅಶ್ವಾಸನೆ ನೀಡಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಈ ಭಾಗದ ಜನರ ಕಷ್ಟ ಕೇಳಲಿಕ್ಕಾಗಲಿ, ಪ್ರಚಾರಕ್ಕಾಗಿ ಆಗಲಿ ಕಲಬುರಗಿಗೆ ಬಂದಿಲ್ಲ. ದತ್ತಾತ್ರೇಯ ದೇವಸ್ಥಾನದಲ್ಲಿ ಪೂಜೆ ಮಾಡಿದ್ರೆ ಮಗ, ಅಣ್ಣನ ಮಗ, ಅವರಪ್ಪ ಗೆಲ್ತಾರೆ ಅಂತಾ ಜ್ಯೋತಿಷ್ಯ ಹೇಳಿದ್ದಾರೆ ಅದಕ್ಕೆ ಬಂದಿದ್ದಾರೆ ಎಂದು ವ್ಯಂಗವಾಡಿದರು.

ಶಾಸಕ ಪಿ. ರಾಜೀವ ಮಾತನಾಡಿ, ಖರ್ಗೆ ಕುಟುಂಬ ಪೋಲಿಸರು ಹಾಗೂ ಚುನಾವಣೆ ಅಧಿಕಾರಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡ್ತಾರೆ. ಪೊಲೀಸರ ಗಾಡಿಯಲ್ಲೇ ಹಣ, ಹೆಂಡ ಸಾಗಿಸ್ತಿರಿ. ಅದರ ದಾಖಲೆ ಸಿಕ್ರೆ ಆರು ಗಂಟೆಯಲ್ಲಿ ಸೀಜ್‌ ಮಾಡಿಸ್ತೇನೆ ಎಂದರು.

ಜಾಧವ ಪಕ್ಷ ಬಿಟ್ಟ ಮೇಲೆ ಖರ್ಗೆ ಕೋಟೆ ಬಿರುಕು ಬಿಟ್ಟಿದೆ. ಮೇ 23ರಂದು ಆ ಕೋಟೆ ಒಡೆಯಲಿದೆ. ರೆಸಾರ್ಟ್‌ ರಾಜಕೀಯ ಮಾಡೋ ಸಿಎಂ ಅವರಿಂದ ಅಪವಿತ್ರ ಮೈತ್ರಿ ಯಾವಾಗ ಮುರಿಯುತ್ತದೆ ಎಂದು ಕಾಯುತ್ತಿದ್ದೆವೆ ಎಂದು ಹೇಳಿದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರ, ಸುನೀಲ ವಲ್ಯಾಪುರೆ, ಮಾಜಿ ಶಾಸಕ ಡಾ| ಉಮೇಶ ಜಾಧವ, ಅಭ್ಯರ್ಥಿ ಅವಿನಾಶ ಜಾಧವ, ಶಾಸಕ ಎ.ಎಸ್‌ ನಡಹಳ್ಳಿ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿದರು.

ಶಾಸಕ ವಿ. ಸೋಮಣ್ಣ, ಸಂಸದ ಭಗವಂತ ಖೂಬಾ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಸವರಾಜ ಮತ್ತಿಮಡು, ಸುಭಾಷ ಗುತ್ತೇದಾರ, ಸುವರ್ಣಾ ಮಲಾಜಿ, ದಿವ್ಯಾ ಹಾಗರಗಿ, ಶಶಿಲ್ ನಮೋಶಿ, ಅಮರನಾಥ ಪಾಟೀಲ, ವಾಲ್ಮೀಕಿ ನಾಯಕ, ಸಂತೋಷ ಪಾಟೀಲ ಮಂಗಲಗಿ, ರಮೇಶ ಕಿಟ್ಟದ, ಪ್ರಶಾಂತ ಕದಂ, ಶರಣು ಚಂದಾ, ಗಂಗಾಧರ ಮೈಲಾರ, ಶೇಖರ ಪಾಟೀಲ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ