ಹಾಸ್ಟೆಲ್ ಪ್ರವೇಶಕ್ಕೆ ಎದುರಾಯ್ತು ಕುತ್ತು!

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ಪ್ರವೇಶಕ್ಕೆ ಮಿತಿ •ಹಾಸ್ಟೆಲ್ ಕನಸು ಕಂಡಿದ್ದವರಿಗೆ ಸಂಕಷ್ಟ

Team Udayavani, Jul 8, 2019, 12:12 PM IST

ಚಿತ್ರದುರ್ಗ: ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ.

ಹರಿಯಬ್ಬೆ ಹೆಂಜಾರಪ್ಪ
ಚಿತ್ರದುರ್ಗ:
ಸರ್ಕಾರಿ ಎಸ್ಸಿ-ಎಸ್ಟಿ ಹಾಸ್ಟೆಲ್ಗಳಲ್ಲಿನ ವಿದ್ಯಾರ್ಥಿಗಳ ಮಂಜೂರಾತಿ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ತೆಗೆದುಕೊಳ್ಳುವಂತಿಲ್ಲ ಎಂದು ಸಮಾಜಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಿಂದ ಜಿಲ್ಲೆಯ ಸಾವಿರಾರು ಎಸ್ಸಿ-ಎಸ್ಟಿ ವರ್ಗಗಳ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ.

ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಹಿಂದುಳಿದ ಜಿಲ್ಲೆಯಲ್ಲಿ ಬಡತನದಿಂದ ಬದುಕುತ್ತಿರುವ ಜನರಿಗೆ ಸಮಾಜಕಲ್ಯಾಣ ಇಲಾಖೆಯ ಸುತ್ತೋಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಸ್ಟೆಲ್ ಸಿಗುತ್ತದೆ ಎಂದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ನಿರಾಸೆ ಅನುಭವಿಸುವಂತಾಗಿದೆ.

ಜಿಲ್ಲೆಯ ಬಡತನ, ಬರ, ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಗಮನಿಸಿದ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್. ಆಂಜನೇಯ ಅವರು ಹಾಸ್ಟೆಲ್ಗೆ ಅರ್ಜಿ ಸಲ್ಲಿಸಿದ ಯಾವುದೇ ವಿದ್ಯಾರ್ಥಿಯನ್ನು ವಾಪಸ್‌ ಕಳುಹಿಸದೆ ಇರುವ ಹಾಸ್ಟೆಲ್ಗಳಲ್ಲೇ ಪ್ರವೇಶ ನೀಡಿ ಶೈಕ್ಷಣಿಕವಾಗಿ ಅನುಕೂಲ ಕಲ್ಪಿಸುವಂತೆ 20-7-2013 ರಂದು ಆದೇಶ ಹೊರಡಿಸಿದ್ದರು. ಈ ಸುತ್ತೋಲೆಯನ್ನು ಈಗಿನ ಸಮಾಜಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರು ಮಾರ್ಪಡಿಸಿದ್ದಾರೆ. ಹೆಚ್ಚುವರಿ ಹಾಸ್ಟೆಲ್ ಸ್ಥಾನಗಳನ್ನು ತೆಗೆದುಕೊಳ್ಳದಂತೆ ಸುತ್ತೋಲೆ ಹೊರಡಿಸಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯ ಆರು ತಾಲೂಕುಗಳು ಮತ್ತು ಜಿಲ್ಲಾ ಕೇಂದ್ರದಲ್ಲಿ ಸಮಾಜಕಲ್ಯಾಣ ಇಲಾಖೆ ಅಡಿಯಲ್ಲಿ 21 ಮೆಟ್ರಿಕ್‌ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಿವೆ. ಒಟ್ಟು 1445 ಮಂಜೂರಾತಿ ಸ್ಥಾನಗಳಿದ್ದು, 2018-19ನೇ ಸಾಲಿನಲ್ಲಿ 2248 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ 803 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು.

15 ಮೆಟ್ರಿಕ್‌ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯಗಳಿದ್ದು, ಈ ಹಾಸ್ಟೆಲ್ಗಳಿಗೆ 1910 ಸ್ಥಾನಗಳು ಮಂಜೂರಾಗಿದ್ದವು. 2018-19ನೇ ಸಾಲಿನಲ್ಲಿ 3041 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಮೂಲಕ 1131 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಅವಕಾಶ ಕಲ್ಪಿಸಲಾಗಿತ್ತು.

ಅಲ್ಲದೆ ಜಿಲ್ಲೆಯಲ್ಲಿನ 7 ಪರಿಶಿಷ್ಟ ವರ್ಗದ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ 525 ಮಂಜೂರಾತಿ ಇತ್ತು. 543 ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿತ್ತು. ಅದೇ ರೀತಿ ಮೆಟ್ರಿಕ್‌ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳು 7 ಇದ್ದು, ಮಂಜೂರಾತಿ ಸಂಖ್ಯೆ 713 ಆಗಿತ್ತು. ಆದರೆ 936 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ ಶೈಕ್ಷಣಿಕವಾಗಿ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಸರ್ಕಾರದ ಸುತ್ತೋಲೆಯಿಂದಾಗಿ ಬಹಳಷ್ಟು ಬಡ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

ಮೆಟ್ರಿಕ್‌ಪೂರ್ವ ಮತ್ತು ನಂತರದ ವಸತಿ ನಿಲಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದಲ್ಲಿ ಹಾಸ್ಟೆಲ್ ಸ್ಥಾನಗಳ ಬೇಡಿಕೆಗೆ ತಕ್ಕಂತೆ ವಸತಿ ನಿಲಯಗಳಿಲ್ಲ. ಇರುವ ಹಾಸ್ಟೆಲ್ಗಳಲ್ಲೇ ಅವಕಾಶ ಕಲ್ಪಿಸಲಾಗುತ್ತಿತ್ತು. ಈಗ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲದಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಜಿಲ್ಲೆಯಲ್ಲಿ ಪದವಿ, ಪಿಯುಸಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕಾಲೇಜು, ನರ್ಸಿಂಗ್‌, ಐಟಿಐ, ಬಿಇಡಿ, ಎಂಜಿನಿಯರಿಂಗ್‌, ಮೆಡಿಕಲ್ ಕಾಲೇಜು ಸೇರಿದಂತೆ ಶೈಕ್ಷಣಿಕವಾಗಿ ಹೆಚ್ಚಿನ ಅವಕಾಶಗಳಿವೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಜಿಲ್ಲೆಗೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಹಾಸ್ಟೆಲ್ಗಳಿಲ್ಲ. ಹಾಗಾಗಿ ಮಕ್ಕಳು ಮತ್ತು ಪೋಷಕರು, ಜನಪ್ರತಿನಿಧಿಗಳ ಬೆನ್ನು ಬಿದ್ದು ಹಾಸ್ಟೆಲ್ನಲ್ಲಿ ಸ್ಥಾನ ಕೊಡಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಜನಪ್ರತಿನಿಧಿಗಳಿಗೂ ಸಮಸ್ಯೆಯಾಗುತ್ತಿದೆ.

ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ 1,500 ರೂ. ಪಾವತಿಸಲಾಗುತ್ತದೆ. ಆದರೆ ಹಾಸ್ಟೆಲ್ ವಂಚಿತ ಎಲ್ಲ ಮಕ್ಕಳಿಗೂ ‘ವಿದ್ಯಾಸಿರಿ’ ಯೋಜನೆ ಅನ್ವಯವಾಗುವುದಿಲ್ಲ. ವಿದ್ಯಾಸಿರಿ ಆಯ್ಕೆಗೆ ಮೆರಿಟ್ ಆಧರಿಸಿರುವುದರಿಂದ ಮಕ್ಕಳಿಗೆ ಸಾಕಷ್ಟು ತೊಂದರೆಯಾಗಿದೆ. ಇದರಿಂದ ಕೆಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಆತಂಕ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವು ವಿದ್ಯಾರ್ಥಿಗಳು ದುಬಾರಿ ಶುಲ್ಕ ಪಾವತಿಸಿ ಪಿಜಿಗಳ ಮೋರೆ ಹೋಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದವರು ಕೂಡಲೇ ಸಮಸ್ಯೆ ನಿವಾರಣೆಗೆ ಮುಂದಾಗಬೇಕಿದೆ.

ಮೂಲ ಸೌಲಭ್ಯ ಇರುವಂತಹ ಹಾಸ್ಟೆಲ್ಗಳಲ್ಲಿ ಹೆಚ್ಚುವರಿಯಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ಪ್ರವೇಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿತ್ತು. ಈಗ ಸರ್ಕಾರ ನಿರ್ಬಂಧಿಸಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಹೆಚ್ಚುವರಿ ಪ್ರವೇಶ ಕಲ್ಪಿಸಲು ಸಾಧ್ಯವಾಗದು.
ಕೆ. ನಾಗರಾಜ್‌,
ಉಪನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ