ಮೋದಿ ಆಯ್ತು, ದುರ್ಗಕ್ಕೆ ನಾಳೆ ರಾಹುಲ್‌

ಸರಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ ಭರ್ಜರಿ ಸಮಾವೇಶ, ವಾಕ್ಸಮರಕ್ಕೆ 100 ಅಡಿ ಅಗಲ, 150 ಅಡಿ ಉದ್ದದ ಬೃಹತ್‌ ವೇದಿಕೆ ಸಿದ್ಧ

Team Udayavani, Apr 12, 2019, 10:05 AM IST

ಚಿತ್ರದುರ್ಗ: ಸರ್ಕಾರಿ ವಿಜ್ಞಾನ ಕಾಲೇಜಿನ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ ಸಮಾವೇಶದ ಸಿದ್ಧತೆಯನ್ನು ಮಾಜಿ ಸಚಿವ ಆಂಜನೇಯ ಪರಿಶೀಲಿಸಿದರು.

ಚಿತ್ರದುರ್ಗ: ಮೀಸಲು ಲೋಕಸಭಾ ಕ್ಷೇತ್ರ ಚಿತ್ರದುರ್ಗದಲ್ಲಿ ಬಿಸಿಲು ಏರಿದಂತೆ ಚುನಾವಣೆ ಕಾವು ಏರತೊಡಗಿದ್ದು, ಪ್ರಚಾರ ರಂಗೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಮೂರು ದಿನಗಳ ಅಂತರದಲ್ಲಿಯೇ ಚಿತ್ರದುರ್ಗ ನಗರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆಗಮಿಸಲಿದ್ದು, ಕೋಟೆನಾಡಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.

ವೇಳಾಪಟ್ಟಿ ಪ್ರಕಾರ ರಾಹುಲ್‌ ಗಾಂಧಿ  ಏ. 13ರಂದು ಕರ್ನಾಟಕಕ್ಕೆ ಆಗಮಿಸಿ ಕೆ.ಆರ್‌. ನಗರ, ಕೋಲಾರ, ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ. ಪ್ರಧಾನಿ ಮೋದಿಯವರು ಪ್ರಚಾರ ಭಾಷಣ ಮಾಡಿದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲೇ ರಾಹುಲ್‌ ಗಾಂಧಿ ಪ್ರಚಾರ ಭಾಷಣ ಮಾಡಲಿದ್ದಾರೆ.

ಅದೇ ಶಾಮಿಯಾನ, ಅದೇ ಕುರ್ಚಿಗಳನ್ನು ಸಮಾವೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದು ವೇದಿಕೆ ಮಾತ್ರ ಬದಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ 80 ಅಡಿ ಅಗಲ 120 ಅಡಿ ಉದ್ದದ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಆದರೆ, ರಾಹುಲ್‌ ಗಾಂಧಿ ಕಾರ್ಯಕ್ರಮದ ವೇದಿಕೆ ವಿಸ್ತಾರ ಹೆಚ್ಚಿಸಲಾಗಿದೆ. 100 ಅಡಿ ಅಗಲ ಹಾಗೂ 150 ಅಡಿ ಉದ್ದದ ಬೃಹತ್‌ ವೇದಿಕೆ ಸಿದ್ಧವಾಗುತ್ತಿದ್ದು, ವೇದಿಕೆ ಉಸ್ತುವಾರಿಯನ್ನು ಮಾಜಿ ಸಚಿವ ಆಂಜನೇಯ ಹೊತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಹೊಳಲ್ಕೆರೆಗೆ ಆಗಮಿಸಿದ್ದ ರಾಹುಲ್‌ ಗಾಂಧಿ  ಮಾಜಿ ಸಚಿವ ಆಂಜನೇಯ ಪರ ಮತಯಾಚಿಸಿ ಹೋಗಿದ್ದರು. ಒಂದು ವರ್ಷದ ಅಂತರದಲ್ಲಿ ಚಿತ್ರದುರ್ಗಕ್ಕೆ ಮತ್ತೆ ರಾಹುಲ್‌ ಗಾಂಧಿ ಆಗಮಿಸುತ್ತಿದ್ದು, ಕೋಟೆನಾಡು ಮಧ್ಯ ಕರ್ನಾಟಕದ ರಾಜಕೀಯ ಶಕ್ತಿ ಕೇಂದ್ರವಾಗುತ್ತಿದೆ.

ಕಳೆದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಭಾಷಣ ಮಾಡಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು. ಈಗ ಅದೇ ಸ್ಥಳದಲ್ಲಿ ರಾಹುಲ್‌ ಭಾಷಣ ಮಾಡಲಿದ್ದು, ಮೋದಿ ಅವರ ಮಾತಿನೇಟಿಗೆ ತಿರುಗೇಟು ನೀಡಲಿದ್ದಾರೆ ಎಂಬುದು ಕಾಂಗ್ರೆಸ್‌ನವರ ನಿರೀಕ್ಷೆಯಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಉಳಿಸಿಕೊಳ್ಳುವ ಸಂಬಂಧ ಕಾಂಗ್ರೆಸ್‌ ಸಾಕಷ್ಟು ಕಸರತ್ತು ನಡೆಸುತ್ತಿದ್ದು, ರಾಹುಲ್‌ ಗಾಂಧಿ ಆಗಮನದಿಂದ ಕ್ಷೇತ್ರದಲ್ಲಿರುವ ಮೋದಿ ಹವಾ ತಗ್ಗಿಸಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ರಾಹುಲ್‌ ಗಾಂಧಿಯವರ ಚುನಾವಣಾ ಪ್ರಚಾರ ಸಭೆ ಪೂರ್ವ ನಿಗದಿಯಂತೆ ಮೊದಲೇ ನಿಗದಿಯಾಗಿತ್ತು. ಹಿರಿಯೂರಿನಲ್ಲಿ ಮಾಡುವುದೋ ಅಥವಾ ಚಿತ್ರದುರ್ಗದಲ್ಲಿ ಆಯೋಜಿಸುವುದೋ ಎಂಬ ಗೊಂದಲ ಉಂಟಾಗಿತ್ತು. ಭದ್ರತೆ ಹಾಗೂ ಕಾರ್ಯಕರ್ತರನ್ನು ಸೇರಿಸುವ ದೃಷ್ಟಿಯಿಂದ ಚಿತ್ರದುರ್ಗವೇ ಸೂಕ್ತವೆಂದು ಭಾವಿಸಿ ಸ್ಥಳವನ್ನು ಅಂತಿಮಗೊಳಿಸಲಾಗಿದೆ.

ಮೋದಿ ಭಾಷಣ ಮಾಡಿದ್ದ ವೇದಿಕೆ ಬಳಸಲು ನಕಾರ
ಏ. 13ರಂದು ರಾಹುಲ್‌ ಗಾಂಧಿ ಚುನಾವಣಾ ಪ್ರಚಾರ ಸಭೆ ಹಿನ್ನೆಲೆಯಲ್ಲಿ ಎಸ್‌ಪಿಜಿ ಅಧಿಕಾರಿ ರಾಜೇಶ್‌ ಕುಮಾರ್‌ ಮೈದಾನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಭದ್ರತೆ ದೃಷ್ಟಿಯಿಂದ ಬಿಜೆಪಿಯವರು ನಿರ್ಮಿಸಿದ್ದ ವೇದಿಕೆಯನ್ನೇ ಬಳಸಿಕೊಳ್ಳುವಂತೆ ಮನವಿ ಮಾಡಿದ್ದು, ಅದಕ್ಕೆ ಕಾಂಗ್ರೆಸ್‌ ಮುಖಂಡರು ನಿರಾಕರಿಸಿದ್ದಾರೆ. ಇದೇ ವೇದಿಕೆಯಲ್ಲಿ ಸಮಾವೇಶ ನಡೆಸಲು ಪಕ್ಷದ ಹೈಕಮಾಂಡ್‌ ನಿರಾಕರಿಸಿದೆ. ಹಾಗಾಗಿ ಬದಲಿ ವೇದಿಕೆ ಸೃಷ್ಟಿಸುವುದು ಅನಿವಾರ್ಯ ಎಂದು ಅಧಿ ಕಾರಿಗಳಿಗೆ ಹೇಳಿದ್ದಾರೆ. ಭದ್ರತೆ ಹಿನ್ನೆಲೆಯಲ್ಲಿ ವೇದಿಕೆ ಮೇಲೆ 30 ಜನಕ್ಕೆ ಮಾತ್ರ ಅವಕಾಶ ಕಲ್ಪಿಸುತ್ತೇವೆ. ಅದಕ್ಕಿಂತ ಜಾಸ್ತಿ ಅಸಾಧ್ಯವೆಂದು ಎಸ್‌ಪಿಜಿ ಅಧಿಕಾರಿಗಳು ಮಾಡಿದ ಮನವಿಗೆ ಕಾಂಗ್ರೆಸ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿ ನಮ್ಮದು ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಧುರೀಣರು ಆಗಮಿಸುತ್ತಾರೆ. ಕನಿಷ್ಟ ನೂರು ಜನರು ವೇದಿಕೆ
ಮೇಲೆ ಕೂರಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ಮನವಿಯನ್ನು ಎಸ್ಪಿಜಿ ಅಧಿ ಕಾರಿಗಳು ನಿರಾಕರಿಸಿದ್ದು, ವೇದಿಕೆ ಮೇಲೆ ಎಷ್ಟು ಜನ ಇರಬೇಕು ಎಂಬುದು ತೀರ್ಮಾನವಾಗಿಲ್ಲ. ವಿಧಾನ ಪರಿಷತ್‌ ಸದಸ್ಯ ರಘುಆಚಾರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್‌. ಮಂಜುನಾಥ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ -ಫಾತ್ಯರಾಜನ್‌ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ