ಜಿಲ್ಲಾಡಳಿತದಿಂದ ಗೂಡಂಗಡಿಗಳ ತೆರವು

Team Udayavani, Jul 8, 2019, 3:38 PM IST

ಚಿತ್ರದುರ್ಗ: ಜಿಲ್ಲಾಡಳಿತದ ವತಿಯಿಂದ ಗೂಡಂಗಡಿಗಳನ್ನು ತೆರವು ಮಾಡಲಾಯಿತು.

ಚಿತ್ರದುರ್ಗ: ನಗರದ ಗಾಂಧಿ ವೃತ್ತದಲ್ಲಿದ್ದ ಅಕ್ರಮ ಗೂಡಂಗಡಿಗಳನ್ನು ಜಿಲ್ಲಾಡಳಿತ ತೆರವುಗೊಳಿಸಿತು.

ಗಾಂಧಿ ವೃತ್ತ, ದಾವಣಗೆರೆ ರಸ್ತೆ, ಹೊಳಲ್ಕೆರೆ ರಸ್ತೆ ಹಾಗೂ ಮೆದೇಹಳ್ಳಿ ರಸ್ತೆಯ ಅಕ್ಕ ಪಕ್ಕದಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿ ನಗರದ ಹೊರಭಾಗದ ಬೆಂಗಳೂರು ರಸ್ತೆ ಬದಿಗೆ ಸ್ಥಳಾಂತರ ಮಾಡಲಾಯಿತು. ಗಾಂಧಿ ವೃತ್ತಕ್ಕೆ ಸಂಪರ್ಕ ಕಲ್ಪಿಸಿದ್ದ ನಾಲ್ಕು ರಸ್ತೆಗಳ ಬದಿಯಲ್ಲಿ ಶಾಶ್ವತ ರೀತಿಯಲ್ಲಿ ಗೂಡಂಗಡಿಗಳನ್ನು ನಿರ್ಮಿಸಿಕೊಂಡಿದ್ದ ಮಾಲೀಕರಿಗೆ ತೆರವುಗೊಳಿಸುವಂತೆ ನಗರಸಭೆ ಹಾಗೂ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿತ್ತು. ಆದರೆ ಮಾಲೀಕರು ಇದಕ್ಕೆ ಕ್ಯಾರೇ ಎಂದಿರಲಿಲ್ಲ. ಹಾಗಾಗಿ ಭಾನುವಾರ ಬೆಳಿಗ್ಗೆ ಪೊಲೀಸ್‌ ಬಂದೋಬಸ್ತ್ನಲ್ಲಿ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಯಿತು.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸಂಚಾರ ಸುಗಮಗೊಳಿಸಲು ತೆರವು ಅನಿವಾರ್ಯ. ಅಲ್ಲದೆ ಸುಪ್ರೀಂ ಕೋರ್ಟ್‌ ನಿರ್ದೇಶನ ಕೂಡ ಇದ್ದು ಮುಖ್ಯ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಗೂಡಂಗಡಿಗಳ ತೆರವು ಕಾರ್ಯ ಅನಿವಾರ್ಯವಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮನವರಿಕೆ ಮಾಡಿದರು.

ಗಾಂಧಿ ವೃತ್ತದಿಂದ ನೀಲಕಂಠೇಶ್ವರಸ್ವಾಮಿ ದೇವಸ್ಥಾನ, ಮೆದೇಹಳ್ಳಿ ರಸ್ತೆಯ ಆರಂಭದಿಂದ ಶಾದಿ ಮಹಲ್ವರೆಗೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದವರೆಗೆ ಹೂವು, ಹಣ್ಣು, ತರಕಾರಿ, ಹಣ್ಣು, ಹೂವು ಸೇರಿದಂತೆ ಮತ್ತಿತರ ಬೀದಿ ಬದಿಯ 70ಕ್ಕೂ ಹೆಚ್ಚು ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಗೂಡಂಗಡಿಗಳ ಮಾಲೀಕರು ಹಾಗೂ ಅವರ ಪರವಾಗಿ ಅಹಿಂದ ಮುಖಂಡರಾದ ಮುರುಘರಾಜೇಂದ್ರ ಒಡೆಯರ್‌, ಟಿಪ್ಪು ಖಾಸಿಂ ಅಲಿ, ಶಫಿವುಲ್ಲಾ ಮತ್ತಿತರರು ಗೂಡಂಗಡಿಗಳ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಅಧಿಕಾರಿಗಳು ಇದಕ್ಕೆ ಸೊಪ್ಪು ಹಾಕಲಿಲ್ಲ.

ನಗರದ ಮುಖ್ಯ ರಸ್ತೆಗಳಲ್ಲಿ ಎಷ್ಟೋ ಮಂದಿ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿ ಕಾಯಂ ಕಟ್ಟಡ ನಿರ್ಮಾಣ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಅಂತಹ ಕಟ್ಟಡಗಳನ್ನೂ ತೆರವುಗೊಳಿಸಬೇಕು, ಅದನ್ನು ಬಿಟ್ಟು ಬಡವರ ಹೊಟ್ಟೆ ಹೊಡೆಯಬೇಡಿ, ಬೀದಿ ಬದಿ ವ್ಯಾಪಾರ ಬಿಟ್ಟರೆ ಬೇರೆ ಮಾರ್ಗವಿಲ್ಲ, ಹತ್ತಾರು ವರ್ಷಗಳಿಂದ ಇಲ್ಲಿಯೇ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದೇವೆ, ಒಂದೆರೆಡು ದಿನ ಕಾಲಾವಕಾಶ ನೀಡುವುದಾಗಿ ಹೇಳಿ ಏಕಾಏಕಿ ತೆರವುಗೊಳಿಸಿದ್ದು ಎಷ್ಟು ಸರಿ ಎಂದು ಎಂದು ಅಂಗಡಿಕಾರರು ಆಕ್ಷೇಪಿಸಿದರು. ಆದರೆ ಅವರ ಅಹವಾಲನ್ನು ಯಾರೂ ಆಲಿಸಲಿಲ್ಲ.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಕಾನೂನು ಪ್ರಕಾರ ತೆರವು ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ, ಎಸ್‌ಐ, ಪಿಎಸ್‌ಐ ಹಾಗೂ ಸಿಬ್ಬಂದಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ