ಬಿಜೆಪಿಗೆ ರಾಮುಲು ಬಲ-ಮೈತ್ರಿಗೆ ಒಗ್ಗಟ್ಟಿನ ಬಲ

•ಮೊಳಕಾಲ್ಮೂರಲ್ಲಿ ಮೈತ್ರಿಕೂಟ-ಬಿಜೆಪಿ ಮಧ್ಯೆ ಸಮಬಲದ ಹೋರಾಟ•ಲೋಕಾ ಅಭ್ಯರ್ಥಿಗಿಂತ ಶ್ರೀರಾಮುಲು ಟಾರ್ಗೆಟ್?

Team Udayavani, Apr 26, 2019, 12:01 PM IST

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ

ಚಿತ್ರದುರ್ಗ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಶ್ರೀರಾಮುಲು ಸ್ಪರ್ಧೆಯಿಂದ ರಾಜ್ಯದ ಹೈವೋಲೆrೕಜ್‌ ಕ್ಷೇತ್ರಗಳಲ್ಲಿ ಒಂದಾಗಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಕಾವು ಮುಗಿದಿದೆ. ಆದರೆ ಈ ಬಾರಿ ಶ್ರೀರಾಮುಲು ಅವರನ್ನು ಮಣಿಸಲೇಬೇಕೆಂದು ಶತಾಯಗತಾಯ ಹೋರಾಟ ನಡೆಸುತ್ತಿರುವ ರಾಜಕೀಯ ವಿರೋಧಿಗಳೆಲ್ಲರೂ ಒಂದಾಗಿದ್ದಾರೆ. ಹಾಗಾಗಿ ಮೈತ್ರಿಕೂಟ ಹಾಗೂ ಬಿಜೆಪಿ ಮಧ್ಯೆ ಈ ಕ್ಷೇತ್ರದಲ್ಲಿ ಸಮಬಲದ ಹೋರಾಟ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

‘ಶತ್ರುವಿನ ಶತ್ರು ಮಿತ್ರ’ ಎನ್ನುವಂತೆ ಬಿಜೆಪಿ ವಿರೋಧಿಗಳೆಲ್ಲರೂ ಈ ಕ್ಷೇತ್ರದಲ್ಲಿ ಒಗ್ಗೂಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ರಾಜಕೀಯ ಗುರುವಿಗೇ ತಿರುಮಂತ್ರ ಹಾಕಿಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಜೊತೆಗೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಎಸ್‌. ತಿಪ್ಪೇಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದರು. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತದೆ ಎಂಬುದು ಫಲಿತಾಂಶದ ನಂತರ ಬಹಿರಂಗಗೊಳ್ಳಲಿದೆ.

ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಬಂಡಾಯ ಮತ್ತಿತರ ಸಮಸ್ಯೆಗಳ ಮಧ್ಯೆಯೂ ಬಿ. ಶ್ರೀರಾಮುಲು ಅಭೂತಪೂರ್ವ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಮುದಾಯದ ಮೇಲೆ ಶ್ರೀರಾಮುಲು ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿದ್ದರೂ ತಮ್ಮ ಮತ ಬ್ಯಾಂಕ್‌ ಭದ್ರವಾಗಿದೆ, ಈ ಸಲವೂ ಕೈಬಿಡುವುದಿಲ್ಲ ಎಂಬುದು ಶ್ರೀರಾಮುಲು ಅವರ ಅದಮ್ಯ ವಿಶ್ವಾಸ. ಹಾಗಾಗಿ ತಾವು ಪ್ರತಿನಿಧಿಸುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿಯವರಿಗೆ ಹೆಚ್ಚಿನ ಲೀಡ್‌ ಕೊಡಿಸಲು ಪಣ ತೊಟ್ಟಿದ್ದರು.

ಶೇ. 2.24 ರಷ್ಟು ಹೆಚ್ಚಿನ ಮತದಾನ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 72.88 ಮತದಾನವಾಗಿದ್ದು, ಸರಾಸರಿ ಮತದಾನಕ್ಕಿಂತ ಶೇ. 2.24ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ. ಕಳೆದ ಬಾರಿ ಶೇ. 65.45ರಷ್ಟಾಗಿತ್ತು. ಹಾಗಾಗಿ ಈ ಬಾರಿ ಶೇ. 7ರಷ್ಟು ಏರಿಕೆಯಾಗಿದೆ. ಕಳೆದ ವಿಧಾನಸಭೆ ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿರುವುದರಿಂದ ಫಲಿತಾಂಶ ಯಾರ ಕಡೆ ವಾಲಬಹುದು ಎಂಬುದನ್ನು ಊಹಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ.

ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಬಿ. ಶ್ರೀರಾಮುಲು ಸ್ವಕ್ಷೇತ್ರ ಬಳ್ಳಾರಿ ಜಿಲ್ಲೆಯನ್ನು ಬಿಟ್ಟು ಮೊಳಕಾಲ್ಮೂರು ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಣಳಿದಿದ್ದರು. ಟಿಕೆಟ್ ಆಕಾಂಕ್ಷಿಗಳ ವಿರೋಧ ಕಟ್ಟಿಕೊಂಡರೂ ಶ್ರೀರಾಮುಲು ಜಯಭೇರಿ ಬಾರಿಸಿದ್ದರು. ಅಲ್ಲದೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಮಲ ಅರಳಲು ತಮ್ಮದೇ ಆದ ಕೊಡುಗೆ ನೀಡಿದ್ದರು.

ಶ್ರೀರಾಮುಲು 84,018 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ| ಯೋಗೇಶ್‌ ಬಾಬು 41,973, ಪಕ್ಷೇತರ ಅಭ್ಯರ್ಥಿ ಎಸ್‌. ತಿಪ್ಪೇಸ್ವಾಮಿ 41,152 ಹಾಗೂ ಜೆಡಿಎಸ್‌ ಅಭ್ಯರ್ಥಿ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ 15,262 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಎಸ್‌. ತಿಪ್ಪೇಸ್ವಾಮಿ ಪಡೆದ ಮತಗಳನ್ನು ಸೇರಿಸಿದರೆ 98,387 ಮತಗಳಾಗುತ್ತವೆ. ಅಂದರೆ ಶ್ರೀರಾಮುಲು ಪಡೆದ ಮತಗಳಿಗಿಂತ 14,369 ಹೆಚ್ಚು. ಹೊರಗಿನಿಂದ ಬಂದು ಶಾಸಕರಾದ ಶ್ರೀರಾಮುಲು ವಿರುದ್ಧ ಕತ್ತಿ ಮಸೆಯುತ್ತಿದ್ದ ವಿರೋಧಿಗಳೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಹೋರಾಟ ಮಾಡಿದ್ದಾರೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಮತ್ತು ಕೊಂಡ್ಲಹಳ್ಳಿ ಹೋಬಳಿಗಳು ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಕಸಬಾ, ದೇವಸಮುದ್ರ ಮತ್ತು ರಾಂಪುರ ಹೋಬಳಿಗಳು ಬಿಜೆಪಿಗೆ ಹೆಚ್ಚಿನ ಲೀಡ್‌ ನೀಡಿದ್ದವು. ಹಾಗಾಗಿ ಯಾರಿಗೆ ಒಳೇಟು ಬಿದ್ದಿದೆ, ಇದನ್ನೆಲ್ಲ ಎದುರಿಸಿ ಯಾರು ವಿಜಯಮಾಲೆ ಧರಿಸುತ್ತಾರೆ ಎಂಬ ಕುತೂಹಲ ಮೂಡಿದ್ದು,ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.

ಕೋನಾಪುರ ಮತಗಟ್ಟೆಯಲ್ಲಿ ಹೆಚ್ಚು ಮತದಾನ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ಕೋನಾಪುರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 11 ರಲ್ಲಿ ಆಗಿದೆ. ಇಲ್ಲಿ ಶೇ. 90. 75 ರಷ್ಟು ಮತದಾನವಾಗಿದೆ. ಈ ಮತಗಟ್ಟೆಯಲ್ಲಿ 458 ಪುರುಷ, 461 ಮಹಿಳೆಯರು ಸೇರಿದಂತೆ ಒಟ್ಟು 919 ಮತದಾರರಿದ್ದಾರೆ. ಅವರಲ್ಲಿ 423 ಪುರುಷರು ಹಾಗೂ 411 ಮಹಿಳೆಯರು ಸೇರಿದಂತೆ ಒಟ್ಟು 834 ಮತದಾರರು ಮತ ಚಲಾಯಿಸಿದ್ದಾರೆ. ಅತಿ ಕಡಿಮೆ ಮತದಾನ ರಾಂಪುರ ಎಚ್ಪಿಬಿಎಸ್‌ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 38 ರಲ್ಲಿ ಅಂದರೆ ಶೇ. 59. 67 ರಷ್ಟಾಗಿದೆ. ಈ ಮತಗಟ್ಟೆಯಲ್ಲಿ 419 ಪುರುಷರು, 468 ಮಹಿಳೆಯರು ಸೇರಿ ಒಟ್ಟು 887 ಮತದಾರರಿದ್ದಾರೆ. ಈ ಪೈಕಿ 250 ಪುರುಷರು, 266 ಮಹಿಳೆಯರು ಸೇರಿದಂತೆ ಒಟ್ಟು 516 ಜನರು ಮತದಾನ ಮಾಡಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ