ಫೆಬ್ರವರಿಯಲ್ಲಿ ಬೆಂಗಳೂರಲ್ಲಿ ಪ್ರಮಥರ ಗಣ ಮೇಳ

Team Udayavani, Nov 2, 2019, 10:55 AM IST

ಚಿತ್ರದುರ್ಗ: 2020ರ ಫೆಬ್ರವರಿ 2 ರಂದು ಬೆಂಗಳೂರಿನಲ್ಲಿ 1.96 ಲಕ್ಷ ಜನರ ಪ್ರಮಥರ ಗಣಮೇಳ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾ ಮಠದ ಅನುಭವ ಮಂಟಪದಲ್ಲಿ ಗುರುವಾರ 2019ರ ಶರಣ ಸಂಸ್ಕೃತಿ ಉತ್ಸವದ ದಾಸೋಹ ಸೇವಾರ್ಥಿಗಳಿಗೆ ಮತ್ತು ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಈ ವರ್ಷದ ಶರಣ ಸಂಸ್ಕೃತಿ ಉತ್ಸವ ಅತ್ಯಂತ ಅರ್ಥಪೂರ್ಣವಾಗಿ ಜರುಗಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ.

ಮುಖ್ಯಮಂತ್ರಿ ಸೇರಿದಂತೆ ರಾಜಕೀಯ ಗಣ್ಯರು, ಚಿಂತಕರು ಬಂದು ಹೋಗಿದ್ದಾರೆ. ಪ್ರತಿ ದಿನ ಅಪಾರ ಸಂಖ್ಯೆಯ ಭಕ್ತರಿಗೆ ದಾಸೋಹ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ. ಈ ಕಾರ್ಯಕ್ಕೆ ಹಲವು ಸಮಾಜಗಳ ಮುಖಂಡರು ತಮ್ಮದೇ ತಂಡದೊಂದಿಗೆ ಬಂದು ಒಂದೊಂದು ದಿನ ಪ್ರಸಾದ ವಿತರಣೆ ಮಾಡಿದ್ದಾರೆ ಎಂದರು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಡಾ| ಶಿವಮೂರ್ತಿ ಮುರುಘಾ ಶರಣರು ಶೂನ್ಯಪೀಠದ ಹಿರಿಮೆಯನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ರಗತಿಪರ ಚಿಂತನೆಗಳು, ಜನಸಾಮಾನ್ಯರ ಪರವಾದ ವಿಚಾರಗಳ ಚರ್ಚೆ ನಡೆದು ಅರ್ಥಪೂರ್ಣ ಉತ್ಸವವಾಗಿ ನಡೆದಿದೆ. 12ನೇ ಶತಮಾನ ಸಮಾನತೆಯ ಪರ್ವಕಾಲ. ಮುರುಘಾ ಪರಂಪರೆಯಲ್ಲಿ 12ನೇ ಶತಮಾನದ ಸಮಾನತೆಯ ಪರ್ವಕಾಲವನ್ನು ಮತ್ತೆ ಇಲ್ಲಿ ಸ್ಥಾಪಿಸಲಾಗಿದೆ. ನಮ್ಮಂತಹ ಅನೇಕ ಸ್ವಾಮೀಜಿಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಮುಂದೆ ನಡೆಯಲಿರುವ ಬೃಹತ್‌ ಗಣಮೇಳಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

2019ರ ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷರಾಗಿದ್ದ ಹನುಮಲಿ ಷಣ್ಮುಖಪ್ಪ ಮಾತನಾಡಿ, ಈ ಉತ್ಸವದಿಂದ ನನ್ನ ಜೀವನದಲ್ಲಿ ವಿಶಿಷ್ಟ ಅನುಭವಗಳನ್ನು ಪಡೆದಿದ್ದೇನೆ. ಬೆಳಗಿನ ಸಹಜ ಶಿವಯೋಗದಿಂದ ಅಂಗದ ಮೇಲೆ ಲಿಂಗ ಧರಿಸಿ ನನ್ನ ಪತ್ನಿ, ಮಗ, ಮೊಮ್ಮಗ ಸೇರಿದಂತೆ ಎಲ್ಲರೂ ನಿತ್ಯ ಲಿಂಗಪೂಜೆ ಮಾಡುತ್ತಿದ್ದೇವೆ. ಇಂತಹ ಅವಕಾಶವನ್ನು ನೀಡಿದ ಶರಣರಿಗೆ ಧನ್ಯವಾದಗಳು ಎಂದು ಹೇಳಿದರು.

ಹೊಸದುರ್ಗ ಕುಂಚಿಟಿಗ ಗುರುಪೀಠದ ಡಾ| ಶಾಂತವೀರ ಸ್ವಾಮೀಜಿ ಮಾತನಾಡಿದರು. ಶ್ರೀ ಶಿವಬಸವ ಸ್ವಾಮಿಗಳು, ಶ್ರೀ ಬಸವ ರಮಾನಂದ ಸ್ವಾಮಿಗಳು, ಶ್ರೀ ಬಸವ ನಾಗಿದೇವ ಸ್ವಾಮಿಗಳು, ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮಿಗಳು, ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಶ್ರೀ ಬಸವ ನಿರಂಜನ ಸ್ವಾಮಿಗಳು, ಶ್ರೀ ಬಸವಪ್ರಭು ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಸೇರಿದಂತೆ ಹರಗುರು ಚರಮೂರ್ತಿಗಳು ಇದ್ದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಶರಣ ಸಂಸ್ಕೃತಿ ಉತ್ಸವದ ಜಮಾ-ಖರ್ಚು ವೆಚ್ಚಗಳ ಮಾಹಿತಿ ನೀಡಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಡಾ| ಬಸವಕುಮಾರ ಸ್ವಾಮೀಜಿ ಸ್ವಾಗತಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ