ಪೊಲೀಸರಿಂದ ಅಪರಾಧ ನಿಯಂತ್ರಣ ಜಾಗೃತಿ
Team Udayavani, Mar 2, 2020, 5:20 PM IST
ಚಳ್ಳಕೆರೆ: ನಗರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಳ್ಳತನ ಪ್ರಕರಣಗಳೂ ಸೇರಿದಂತೆ ಅಪರಾಧ ನಿಯಂತ್ರಣದ ಕುರಿತು ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದು ಉಪವಿಭಾಗದ ಡಿವೈಎಸ್ಪಿ ಎಸ್. ರೋಷನ್ ಜಮೀರ್ ಹೇಳಿದರು.
ಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಳ್ಳಕೆರೆ ನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಹಾಡಹಗಲೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಗ್ರಾಮೀಣ ಭಾಗದಿಂದ ಬರುವ ಮುಗ್ಧ ಮಹಿಳೆಯರು ಮತ್ತು ವೃದ್ಧೆಯರನ್ನು ನಯವಾದ ಮಾತಿನಿಂದ ವಂಚಿಸಿ ಪೊಲೀಸರು ಎಂದು ಹೇಳಿ ತೊಂದರೆ ಕೊಟ್ಟ ಪ್ರಕರಣಗಳೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಕಳ್ಳತನ ಪ್ರಕರಣಗಳಿಂದ ಎಚ್ಚೆತ್ತುಕೊಳ್ಳುವಂತೆ ಮಾಡಲು ರಸ್ತೆ ಬದಿ ಹಾಗೂ ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ವಿಶೇಷ ಕರ್ತವ್ಯಕ್ಕೆ ನಿಯೋಜನೆಗೊಂಡ ಎಎಸ್‌ಐ ಲಕ್ಷ್ಮೀನಾರಾಯಣ ಮಾತನಾಡಿ, ಡಿವೈಎಸ್ಪಿಯವರ ಸೂಚನೆಯಂತೆ ಶನಿವಾರ ಗಾಂಧಿ ನಗರ, ಅಂಬೇಡ್ಕರ್ ನಗರ, ಜನತಾ ಕಾಲೋನಿ ಮುಂತಾದ ಕಡೆಗಳಲ್ಲಿ ಸಾರ್ವಜನಿಕರ ಜಾಗೃತಿ ಸಭೆ ನಡೆಸಲಾಗಿದೆ. ಬಂಗಾರ ಪಡೆದು ನಕಲಿ ಬಂಗಾರ ನೀಡಿ ವಂಚನೆ ಮಾಡುವುದು, ಎಟಿಎಂ ಬಳಿ ಹಣ ವಿತ್‌ಡ್ರಾ ಮಾಡುವ ಮಹಿಳೆಯರನ್ನು ಗುರುತಿಸಿ ಅವರಿಗೆ ಮೋಸ ಮಾಡುವುದು, ಮುಂತಾದ ಕೃತ್ಯಗಳಲ್ಲಿ ಕಳ್ಳರು ತೊಡಗಿದ್ದಾರೆ. ಶೀಘ್ರದಲ್ಲೇ ಕಳ್ಳರನ್ನು ಬಂ ಸಲಾಗುವುದು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಪೇದೆಗಳಾದ ಎಲ್. ರತ್ನಮ್ಮ, ಸರಸ್ವತಿ, ಚಾಲಕ ವೆಂಕಟೇಶ್ ಇತರರು ಇದ್ದರು.