ರಾಯಣ್ಣ ಕೇಸರಿ ಪಡೆ ಅಸ್ತಿತ್ವಕ್ಕೆ : ಸಂಪತ್‌ಕುಮಾರ್
ರಾಯಣ್ಣ ಕೇಸರಿ ಪಡೆ ಅಧ್ಯಕ್ಷ ಸಂಪತ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Team Udayavani, Jan 22, 2021, 6:35 PM IST
ಚಿತ್ರದುರ್ಗ: ಶೋಷಿತರು, ತುಳಿತಕ್ಕೊಳಗಾದವರ ಪರ ಜಾತ್ಯಾತೀತವಾಗಿ ಹೋರಾಟ ನಡೆಸುವ ಉದ್ದೇಶದಿಂದ ರಾಯಣ್ಣ ಕೇಸರಿ ಪಡೆ ಹೆಸರಿನಲ್ಲಿ ಸಂಘಟನೆ ಸ್ಥಾಪಿಸಲಾಗಿದೆ ಎಂದು ಅಧ್ಯಕ್ಷ ಸಂಪತ್‌ಕುಮಾರ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನೇ ದಿನೇ ಜಾತಿ ಸಂಘಟನೆಗಳು ಹೆಚ್ಚಾಗುತ್ತಿವೆ. ಎಲ್ಲರೂ ತಮ್ಮ ಲಾಭಕ್ಕಾಗಿಯೇ ಹೋರಾಟ ಮಾಡುತ್ತಿದ್ದಾರೆ. ಆದರೆ ಆಶಕ್ತರ ನೋವು ಆಲಿಸುವವರು ಯಾರೂ ಇಲ್ಲವಾಗಿದ್ದಾರೆ. ಇದನ್ನು ಮನಗಂಡು ಎಲ್ಲಾ ಜಾತಿಯ ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ದೊರಕಿಸಕಿಸುವ ಉದ್ದೇಶದಿಂದ ಕಳೆದ ನ. 14 ರಂದು ರಾಯಣ್ಣ ಕೇಸರಿ ಪಡೆಯನ್ನು ಕಟ್ಟಲಾಯಿತು. ನಮ್ಮದು ಜಾತ್ಯಾತೀತ ರಾಜಕೀಯೇತರ ಸಂಘಟನೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ರಾಯಣ್ಣ ಕೇಸರಿ ಪಡೆ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ : ಲಸಿಕೆ ಪಡೆಯಲು ಬೇಡ ಹಿಂಜರಿಕೆ!
ಕುರುಬ ಸಮುದಾಯ ನಿಜವಾಗಿಯೂ ಅಲೆಮಾರಿಗಳು, ಕುರಿಗಳನ್ನು ಸಾಕಿಕೊಂಡು ಎಲ್ಲಿ ಮೇವು ನೀರು ಸಿಗುತ್ತದೋ ಅಲ್ಲಿಗೆ ಹೋಗುತ್ತಾರೆ. ಬುಡಕಟ್ಟು ಸಂಸ್ಕೃತಿಯುಳ್ಳ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ತರಲು ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಹೊರಟಿರುವುದು ಅರ್ಥಪೂರ್ಣ. ಗುರುವಾರ ಮಧ್ಯಾಹ್ನ ಚಿತ್ರದುರ್ಗ ಜಿಲ್ಲೆಗೆ ಪಾದಯಾತ್ರೆ ಪಾದಾರ್ಪಣೆ ಮಾಡಿದ್ದು, 27 ರವರೆಗೆ ಜಿಲ್ಲೆಯಲ್ಲಿ ಸಂಚರಿಸಲಿದೆ. ಐತಿಹಾಸಿಕ ಚಿತ್ರದುರ್ಗ ನಗರಕ್ಕೆ ಜ.23 ರಂದು ಆಗಮಿಸಲಿದೆ ಎಂದು ಹೇಳಿದರು.
ಹಿಂದುಳಿದ ವರ್ಗದಲ್ಲಿ ಸಾಕಷ್ಟು ಜನ ಸೌಲಭ್ಯ ವಂಚಿತರಾಗಿದ್ದಾರೆ. ಮೀಸಲಾತಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಅದಕ್ಕಾಗಿ ಕುರುಬ ಸಮುದಾಯದ ಪಾದಯಾತ್ರೆಯಲ್ಲಿ ಎಲ್ಲಾ ಹಿಂದುಳಿದವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಉಪ್ಪಾರ ಸಮಾಜದ ಬಸವರಾಜ್ ಮಾತನಾಡಿ ಅನ್ಯಾಯ, ಶೋಷಣೆ, ದಮನಿತರ ಪರವಾಗಿ ಹೋರಾಡಲು ರಾಯಣ್ಣ ಕೇಸರಿ ಪಡೆಯನ್ನು ರಚಿಸಲಾಗಿದೆ. ನಮ್ಮ ಸಮಾಜ ಅತ್ಯಂತ ಕೆಳ ಮಟ್ಟದಲ್ಲಿರುವುದರಿಂದ ಎಸ್‌ಟಿ ಪಾದಯಾತ್ರೆಯನ್ನು ಎಲ್ಲರೂ ಬೆಂಬಲಿಸುವಂತೆ ಕೋರಿದರು.
ಬಿಜೆಪಿ ಮುಖಂಡರಾದ ಶಿವಣ್ಣಾಚಾರ್, ಆರ್. ವೆಂಕಟೇಶ್, ಸಿ. ಚಂದ್ರಶೇಖರ್, ಗೋಪಾಲ್‌ರಾವ್ ಜಾಧವ್, ನಾಗರಾಜ್ ಬೇದ್ರೆ, ಮೆಹಬೂಬ್, ಅಬ್ದುಲ್ ರೆಹಮಾನ್, ರಜನಿ, ಶೀಲಾ ಶ್ರೀನಿವಾಸ್, ರಾಜು, ಕುರುಬರಹಳ್ಳಿ ನಾಗರಾಜ್, ಹೊನ್ನೂರಪ್ಪ ಮತ್ತಿತರರು ಇದ್ದರು.
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಾನರ್ V40 5G ಸ್ಮಾರ್ಟ್ ಪೋನ್ ವೈಶಿಷ್ಟ್ಯತೆಗಳೇನು?