ಹೊಳಲ್ಕೆರೆ ತಾಲೂಕಲ್ಲಿ ಉತ್ತಮ ಮಳೆ
Team Udayavani, Jun 27, 2020, 9:51 AM IST
ಹೊಳಲ್ಕೆರೆ: ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಸುರಿದ ಆರಿದ್ರಾ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಾಡುತ್ತಿರುವ ಬೆಳೆಗಳಲ್ಲಿ ಮಳೆ ಜೀವಕಳೆ ತಂದಿದೆ.
ಅಡಿಕೆ, ತೆಂಗು, ಬಾಳೆ ತೋಟಗಳಲ್ಲಿ ಭಾರಿ ಮಳೆಯಿಂದ ನೀರು ನಿಂತಿದ್ದು, ಮಳೆಯ ಹೊಡೆತಕ್ಕೆ ಜಮೀನುಗಳಲ್ಲಿ ಹಾಕಲಾಗಿದ್ದ ಬದುಗಳು ಒಡೆದು ಹೋಗಿವೆ. ಕೆಲವೆಡೆ ಹಳ್ಳಗಳಲ್ಲಿ ನೀರು ಹರಿಯುತ್ತಿದ್ದು, ಈ ವರ್ಷದ ಮೊದಲ ಮಳೆ ಇದಾಗಿದೆ. ತಾಲೂಕಿನ ಗಂಗಸಮುದ್ರ ಕೆರೆ ಭಾಗದಿಂದ ತಾಳಕಟ್ಟ ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ಪೈಪ್‌ಲೈನ್ ರಸ್ತೆ ಕ್ರಾಸ್ ಮಾಡಲು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಲ್ಲಿ ನೀರು ಉಕ್ಕಿ ಹರಿಯುತಿದ್ದು, ನೀರಿನ ರಭಸಕ್ಕೆ ರಸ್ತೆ ಕಿತ್ತು ಹೋಗಿದೆ. ಇದರಿಂದಾಗಿಕೃಷಿ ಕೆಲಸಕ್ಕೆ ಜಮೀನುಗಳಿಗೆ ತೆರಳುವ ರೈತರಿಗೆ ಸಮಸ್ಯೆ ಉಂಟಾಗಿದೆ. ರಾಮಗಿರಿಯಿಂದ ಗುಂಡೇರಿ ಮೂಲಕ ಹೊಳಲ್ಕೆರೆಗೆ ಹಾದು ಹೋಗುವ ರಸ್ತೆಯಲ್ಲಿ ಭದ್ರಾ ಮೇಲ್ದಂಡೆ ಪೈಪ್‌ಲೈನ್ ಕಾಮಗಾರಿ ರಾತ್ರಿ ಮಳೆಗೆ ಕುಸಿದು ಹೋಗಿರುವ ಕಾರಣ ರಸ್ತೆ ಬಂದ್ ಆಗಿದೆ.