ಗುರುರಾಯರ ಮಹಾರಥೋತ್ಸವ

Team Udayavani, Aug 30, 2018, 11:02 AM IST

ಚಿತ್ರದುರ್ಗ: ರಾಘವೇಂದ್ರ ಗುರು ಸಾರ್ವಭೌಮರ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ರಾಜಬೀದಿಗಳಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಂಗಳ ವಾದ್ಯಗಳೊಂದಿಗೆ ರಾಘವೇಂದ್ರಸ್ವಾಮಿಗಳ ಮಠದಿಂದ ಹೊರಟ ರಥ, ಆನೆಬಾಗಿಲು ಮಾರ್ಗವಾಗಿ ಗಾಂಧಿ ವೃತ್ತಕ್ಕೆ ತೆರಳಿ ಶ್ರೀಮಠಕ್ಕೆ ಮರಳಿತು. ರಥೋತ್ಸವದಲ್ಲಿ ಛತ್ರ-ಚಾಮರ, ವೇದಘೋಷಗಳೊಂದಿಗೆ ಮಹಿಳಾ ಮಂಡಳಿಗಳ ಸದಸ್ಯೆಯರು, ನೂರಾರು ಭಕ್ತರು ಪಾಲ್ಗೊಂಡು ಭಜನೆ ಮಾಡುತ್ತಾ ಸಾಗಿದರು.

ಜಗದ್ಗುರು ಮಧ್ವಾಚಾರ್ಯ ಮೂಲ ಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಪಂಚರಾತ್ರೋತ್ಸವದ ಮೂರನೇ ದಿನದ ಉತ್ತರಾರಾಧನೆಯ ಧಾರ್ಮಿಕ ಕಾರ್ಯಕ್ರಮ ನಡೆದವು. ಪ್ರಾಥಃಕಾಲ 5 ಗಂಟೆಗೆ ಸುಪ್ರಭಾತ, ಮಂಗಳವಾದ್ಯದಿಂದ ಪೂಜಾ ಕೈಂಕರ್ಯ ಆರಂಭಗೊಂಡಿತು ನೈರ್ಮಾಲ್ಯ ವಿಸರ್ಜನೆ, ಶ್ರೀ ಹರಿ ವಾಯುಸ್ತುತಿ, ರಾಘವೇಂದ್ರ ಸ್ತೋತ್ರ ಪಾರಾಯಣ ಸಹಿತ ಫಲ ಪಂಚಾಮೃತ ಅಭಿಷೇಕ, ಪಾದಪೂಜೆ, ಕನಕಾಭಿಷೇಕ, ಮಹಾ ನೈವೇದ್ಯ, ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ ನೆರವೇರಿದವು. ಸಂಜೆ 6:30 ಗಂಟೆಗೆ ಪ್ರಾಕಾರ ರಥೋತ್ಸವ, ಅಷ್ಟಾವಧಾನ ಸೇವೆ ಜರುಗಿತು.

ಪೂಜಾ ಕಾರ್ಯಕ್ರಮಗಳನ್ನು ಅರ್ಚಕ ನಾರಾಯಣ ಆಚಾರ್‌ ನೇತೃತ್ವದಲ್ಲಿ ನಡೆಸಲಾಯಿತು. ಉತ್ತರಾರಾಧನೆ ಪ್ರಯುಕ್ತ ರಾಘವೇಂದ್ರಸ್ವಾಮಿಗಳ ಮಠಕ್ಕೆ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ರಾತ್ರಿವರೆಗೂ ಭಕ್ತರು ಆಗಮಿಸಿ ರಾಯರ ದರ್ಶನ ಪಡೆದರು. ಸಂಜೆ ಅಂಜನಾ ನೃತ್ಯ ಕಲಾ ಕೇಂದ್ರದ ವಿದುಷಿ ನಂದಿನಿ ಶಿವಪ್ರಕಾಶ್‌ ಮತ್ತು ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು. ಶ್ರೀಮಠದ ವ್ಯವಸ್ಥಾಪಕ ಮೋಹನಾಚಾರ್‌, ಜಯತೀರ್ಥಾಚಾರ್‌, ಪೆನುಕೊಂಡ ವಂಶದ ಸಹೋದರರು ಹಾಗೂ ಭಕ್ತರು ಇದ್ದರು.

ಆ. 30ರಂದು ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆ, ಪವಮಾನ ಹೋಮ ಹಾಗೂ ಸರ್ವ ಸಮರ್ಪಣೋತ್ಸವ ನಡೆಯಲಿವೆ. ಬೆಳಿಗ್ಗೆ 7 ಗಂಟೆಗೆ ಶ್ರೀ ಹರಿವಾಯು ಸ್ತುತಿ, ರಾಘವೇಂದ್ರ ಸ್ತೋತ್ರ ಪಾರಾಯಣ ಸಹಿತ ಫಲ ಪಂಚಾಮೃತ ಅಭಿಷೇಕ, 8:30ರಿಂದ ಪಾದಪೂಜೆ, ಕನಕಾಭಿಷೇಕ, ಮಹಾ ನೈವೇದ್ಯ, ಅಲಂಕಾರ, ಹಸ್ತೋದಕ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 6:30 ಗಂಟೆಗೆ ಪ್ರಾಕಾರ ರಥೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ, ನಂತರ ಶ್ರೀ ಸಪ್ತಗಿರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರದ್ಧಾಭಕ್ತಿಯ ರಾಘವೇಂದ್ರ ಗುರು ಸಾರ್ವಭೌಮರ ಉತ್ತರಾರಾಧನೆ
ಮೊಳಕಾಲ್ಮೂರು: ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ಬುಧವಾರ ಪಟ್ಟಣದ ಕೋಟೆ ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತೃತೀಯ ಉತ್ತರಾರಾಧನೆ ನಡೆಯಿತು. ಗುರುರಾಯರ ಬೃಂದಾವನಕ್ಕೆ ಪುಷ್ಪಾಲಂಕಾರ ಮಾಡಿ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಗುರು ರಾಘವೇಂದ್ರ ರಾಯರ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ತಾಲೂಕಿನ ರಾಂಪುರದ ಭೀಮಸೇನಾಚಾರ್‌ ಉಪನ್ಯಾಸ ನೀಡಿದರು.

ಜ್ಯೋತಿ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ಹಾಗೂ ಎಚ್‌.ಆರ್‌. ಹರ್ಷಿತ ಭರತನಾಟ್ಯ ಪ್ರಸ್ತುತಪಡಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಆರಾಧನಾ ಮಹೋತ್ಸವದಲ್ಲಿ ಬೆಂಗಳೂರಿನ ಡಾ| ಕೆ.ಎಲ್‌. ನರಹರಿ ರಾವ್‌, ಜಿ.ಎಸ್‌.
ಕುಲಕರ್ಣಿ, ಪಟ್ಟಣದ ಎಂ.ಎಸ್‌. ರಾಘವೇಂದ್ರ ರಾವ್‌, ಎಂ.ಎಸ್‌. ಅನಂತಪದ್ಮನಾಭ, ಎಂ.ಎಸ್‌. ಗುರುರಾಜ್‌,
ಎಸ್‌.ಎಸ್‌. ವೇಣುಗೋಪಾಲ್‌, ಎಸ್‌. ಎಸ್‌. ಶ್ರೀಧರ್‌, ಎಂ.ಎಸ್‌. ಗೋಪಿನಾಥ್‌, ನಾಗಸಮುದ್ರದ ಮಾರುತಿ, ಗುರುಪ್ರಸಾದ್‌ ಮೊದಲಾದವರು ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ